ಜಲಾಶಯಗಳಲ್ಲಿ ನೀರು ಖಾಲಿ; ಕುಡಿಯುವ ನೀರಿಗೆ ಹಾಹಾಕಾರ!

Update: 2019-04-22 18:31 GMT

ಬೆಂಗಳೂರು, ಎ.22 : ಮುಂಗಾರು ಮತ್ತು ಹಿಂಗಾರು ಮಳೆ ವೈಫಲ್ಯ ಹಾಗೂ ತಾಪಮಾನ ಏರಿಕೆಯ ಪರಿಣಾಮವಾಗಿ ನದಿ, ಹಳ್ಳ-ಕೊಳ್ಳ ಮತ್ತು ಕಣಿವೆಗಳಿಂದ ಜಲಾಶಯಗಳಿಗೆ ಹರಿದು ಬರುತ್ತಿದ್ದ ನೀರಿನ ಮೂಲಗಳು ಸಂಪೂರ್ಣ ಬತ್ತಿ ಹೋಗಿವೆ. ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಸಾಮರ್ಥ್ಯ ಕುಸಿದಿದ್ದು, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ.

ರಾಜ್ಯದಲ್ಲಿರುವ 13 ಜಲಾಶಯಗಳ ಪೈಕಿ ಬಹುತೇಕ ಜಲಾಶಯಗಳಲ್ಲಿ ಸಂಗ್ರಹದ ಸಾಮರ್ಥ್ಯ ಶೇ. 20ರಷ್ಟು ಮಾತ್ರ ನೀರಿದೆ. ರಾಜ್ಯದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಸೂಪಾ, ವರಹಿ, ತುಂಗಾಭದ್ರ, ಘಟಪ್ರಭಾ, ಮಲಪ್ರಭಾ ಹಾಗೂ ಆಲಮಟ್ಟಿ ಜಲಾಶಯಗಳ ಒಳಹರಿವು ನೀರಿನ ಪ್ರಮಾಣ ಸಂಪೂರ್ಣ ಕುಸಿದಿದೆ.

ಇಲ್ಲಿನ ಪ್ರಮುಖ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕೆಆರ್‌ಎಸ್, ಕಬಿನಿ, ಭದ್ರಾವತಿ ಹಾಗೂ ನಾರಾಯಣಪುರ ಜಲಾಶಯಗಳಿಗೆ ಒಳಹರಿವಿನ ನೀರು ಕೇವಲ 1,131 ಕ್ಯೂಸೆಕ್ ಹರಿದುಬರುತ್ತಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಂಕಿ-ಅಂಶಗಳು ಹೇಳುತ್ತಿವೆ. ಇದರಿಂದ ಬಹುತೇಕ ಜಲಾಶಯಗಳಲ್ಲಿ ಶೇ. 20ರಷ್ಟು ಮಾತ್ರ ನೀರು ಸಂಗ್ರಹವಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ತತ್ವಾರ ಎದುರಾಗುವ ಸಂಭವವಿದೆ ಎಂದು ಅಂದಾಜಿಸಲಾಗುತ್ತಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಸಂಪೂರ್ಣ ವೈಫಲ್ಯವಾಗಿತ್ತು. ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿಗದಿಗಿಂತ ಹೆಚ್ಚಿನ ಮಳೆಯಾಗಿದ್ದರಿಂದ ಬಹುತೇಕ ಜಲಾಶಯಗಳು ಭರ್ತಿಯಾಗಿತ್ತು. ದಾಖಲೆ ಪ್ರಮಾಣದ ಮಳೆಯಿಂದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನೀರು ಜಿನುಗಿ ವರ್ಷವಿಡಿ ನೀರು ಹರಿಯುವಂತಹ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಮಲೆನಾಡು, ಘಟ್ಟ ಪ್ರದೇಶಗಳಲ್ಲಿ ಗುಡ್ಡ ಕುಸಿದ ಪರಿಣಾಮವಾಗಿ ನೀರಿನ ಸೆಲೆ ಬತ್ತಿಹೋಗಿ ನದಿ ಪಾತ್ರಗಳಿಗೆ ನೀರು ಹರಿಯುವಿಕೆ ಕಡಿಮೆಯಾಗಿದೆ ಎಂದು ಜಲತಜ್ಞರು ತಿಳಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ಕಣ್ಮರೆಯಾಗಿದ್ದರಿಂದ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರ ಕೃಷಿ ಚಟುವಟಿಕೆಗಳಿಗೆ ತುಂಗಭದ್ರ ಜಲಾಶಯದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಯಿತು. ಹೀಗಾಗಿ ಪ್ರಸ್ತುತ ಜಲಾಶಯದಲ್ಲಿ ಒಟ್ಟು ಸಂಗ್ರಹಣಾ ಸಾಮರ್ಥ್ಯದ ಶೇ. 6ರಷ್ಟು ನೀರಿದೆ. ಇದು ಜೂನ್ ಅಥವಾ ಜುಲೈ ತಿಂಗಳವರೆಗೆ ಜನ, ಜಾನುವಾರುಗಳಿಗೆ ಕುಡಿಯಲು ಸರಿ ಹೋಗುತ್ತದೆ. ಪ್ರಸಕ್ತ ವರ್ಷದ ಮುಂಗಾರು ಮಳೆ ಬೀಳುವುದು ವಿಳಂಬವಾದರೆ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭೀಕರ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಎಂದು ಜಲಮಂಡಳಿಯ ಮೂಲಗಳು ತಿಳಿಸಿವೆ.

ಮಲಪ್ರಭಾ ಹಾಗೂ ಘಟಪ್ರಭಾದಿಂದ ಉತ್ತರ ಕರ್ನಾಟಕದ ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಿಗೆ ನೀರು ಒದಗಿಸಲಾಗುತ್ತದೆ. ಆದರೆ, ಅದರಲ್ಲಿಯೂ ಕ್ರಮವಾಗಿ ಶೇ.5 ಮತ್ತು 20 ರಷ್ಟು ನೀರು ಸಂಗ್ರಹಗೊಂಡಿದೆ. ಮುಂದಿನ ಕೆಲ ದಿನಗಳಲ್ಲಿಯೇ ಈ ನೀರು ಖಾಲಿಯಾಗುವ ಸಾಧ್ಯತೆಯಿದೆ. ಆ ಬಳಿಕ ತೀವ್ರ ಸಮಸ್ಯೆ ಉಲ್ಬಣಗೊಳ್ಳಲಿದೆ ಎನ್ನಲಾಗುತ್ತಿದ್ದು, ಕೆಆರ್‌ಎಸ್, ಹೇಮಾವತಿ, ವರಾಹಿ ಜಲಾಶಯಗಳಲ್ಲಿರುವ ನೀರಿನಿಂದ ಜೂನ್ ಅಂತ್ಯದವರೆಗೆ ಮಂಡ್ಯ, ಹಾಸನ, ಬೆಂಗಳೂರು ಭಾಗದ ಜನರಿಗೆ ಕುಡಿಯುವ ನೀರಿಗಾಗಿ ಪೂರೈಕೆ ಮಾಡಲು ಸಾಕಾಗುತ್ತದೆ.

ಆಲಮಟ್ಟಿ, ವರಾಹಿ, ಭದ್ರ ಜಲಾಶಯಗಳಲ್ಲಿ ಶೇ.36 ರಿಂದ 40 ರಷ್ಟು ನೀರು ಸಂಗ್ರಹವಿದೆ. ಲಿಂಗನಮಕಿ ಮತ್ತು ಸೂಪ ಜಲಾಶಯಗಳಲ್ಲಿ ಶೇ. 45ರಷ್ಟು ನೀರಿದೆ. ಈ ಭಾಗದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವುದಕ್ಕೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಕೃಷಿ ಚಟುವಟಿಕೆಗಳಿಗೆ ಪೂರೈಕೆಯಾಗುತ್ತಿದ್ದ ನೀರನ್ನು ಈಗಾಗಲೇ ಸಂಪೂರ್ಣ ನಿಲ್ಲಿಸಲಾಗಿದ್ದು, ಮಳೆ ಬೀಳುವವರೆಗೆ ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯಗಳ ಒಳ ಹರಿವು ಕುಸಿದಿದ್ದು, ನೀರಿನ ಮಟ್ಟ ಇಳಿಕೆಗೊಂಡಿದೆ. ಆದುದರಿಂದಾಗಿ, ಕೃಷಿ ಚಟುವಟಿಕೆಗಳಿಗಾಗಿ ಜಲಾಶಯಗಳ ನೀರನ್ನು ಬಳಕೆ ಮಾಡಿಕೊಳ್ಳುವುದನ್ನು ಸದ್ಯಕ್ಕೆ ಕಡಿವಾಣ ಹಾಕಲಾಗಿದೆ. ಎಲ್ಲಿಯೂ ನೀರನ್ನು ಬಿಡುತ್ತಿಲ್ಲ, ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಮುಂದಿನ 3-4 ತಿಂಗಳು ಅದರಲ್ಲಿಯೇ ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

-ಶ್ರೀನಿವಾಸರೆಡ್ಡಿ, ನಿರ್ದೇಶಕರು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ

ನೀರಿನ ಸಂಗ್ರಹ(ಟಿಎಂಸಿ)
  ಜಲಾಶಯ     ಗರಿಷ್ಠ        ಕನಿಷ್ಠ      ಒಳಹರಿವು(ಕ್ಯೂಸೆಕ್)
  ಕೆಆರ್‌ಎಸ್    45.05     14.56          113
  ಕಬಿನಿ          15.67       6.00           43
  ಭದ್ರಾ          63.04      24.06          33
  ತುಂಗಭದ್ರಾ  100.86    6.37           ಇಲ್ಲ
  ಹಾರಂಗಿ       8.07       1.11            65
  ಹೇಮಾವತಿ   35.76      4.24           635
  ಘಟಪ್ರಭಾ    48.98       9.83           ಇಲ್ಲ
 ಮಲಪ್ರಭಾ    34.35       2.78           ಇಲ್ಲ
ಆಲಮಟ್ಟಿ      119.26      32.86         ಇಲ್ಲ
ಲಿಂಗನಮಕ್ಕಿ  151.75     50.37          ಇಲ್ಲ
ಸೂಪಾ         145.33    66.11          ಇಲ್ಲ

ವರಾಹಿ         31.10     10.03          ಇಲ್ಲ

Writer - -ಬಾಬುರೆಡ್ಡಿ ಚಿಂತಾಮಣಿ

contributor

Editor - -ಬಾಬುರೆಡ್ಡಿ ಚಿಂತಾಮಣಿ

contributor

Similar News