ಲೋಕಸಭೆ ಚುನಾವಣೆ 2019: ಮೂರನೇ ಹಂತದ ಮತದಾನ ಆರಂಭ

Update: 2019-04-23 03:42 GMT

ಹೊಸದಿಲ್ಲಿ, ಎ. 23: ಏಳು ಹಂತಗಳ ಮತದಾನದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಒಳಗೊಂಡ ಮೂರನೇ ಹಂತದ ಮತದಾನ ಮಂಗಳವಾರ ಬೆಳಗ್ಗೆ ಏಳು ಗಂಟೆಗೆ ಆರಂಭವಾಗಿದೆ. 13 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 117 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಗುಜರಾತ್‌ನ ಎಲ್ಲ 26 ಕ್ಷೇತ್ರಗಳು, ಕೇರಳದ 20, ಮಹಾರಾಷ್ಟ್ರ ಹಾಗೂ ಕರ್ನಾಟಕದ ತಲಾ 14, ಉತ್ತರ ಪ್ರದೇಶದ 10, ಛತ್ತೀಸ್‌ಗಢದ ಏಳು, ಒಡಿಶಾದ ಆರು, ಬಿಹಾರ ಹಾಗೂ ಪಶ್ಚಿಮ ಬಂಗಾಳದ ತಲಾ ಐದು, ಅಸ್ಸಾಂನ ನಾಲ್ಕು, ಗೋವಾದ ಎರಡು, ಜಮ್ಮು ಮತ್ತು ಕಾಶ್ಮೀರ, ದಾದ್ರ ಮತ್ತು ನಗರ ಹವೇಲಿ, ಡಮನ್ ಮತ್ತು ಡಿಯು ಹಾಗೂ ತ್ರಿಪುರಾದ ತಲಾ ಒಂದು ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ.

ಪಶ್ಚಿಮ ಬಂಗಾಳದ ಮಾಲ್ಡಾ ಕ್ಷೇತ್ರದ ಕೊತ್ವಾಲಿ ಜ್ಯೂನಿಯರ್ ಬೇಸಿಕ್ ಶಾಲೆ ಮತಗಟ್ಟೆಯಲ್ಲಿ ಮತದಾನ ಆರಂಭಕ್ಕೆ ಮುನ್ನವೇ ದೊಡ್ಡ ಸರದಿ ಸಾಲಿನಲ್ಲಿ ಮತದಾರರು ನಿಂತಿರುವುದು ಕಂಡುಬಂತು. ಅಸ್ಸಾಂನ ಹಲವು ಮತಗಟ್ಟೆಗಳಲ್ಲಿ ಕೂಡಾ ಮುಂಜಾನೆಯೇ ಉದ್ದದ ಸರತಿ ಸಾಲುಗಳು ಕಂಡುಬಂದವು.

ಮತದಾನ ಆರಂಭಕ್ಕೆ ಮುನ್ನ ಕರ್ನಾಟಕದಲ್ಲಿ ಬಿಜೆಪಿ ಮುಖಂಡರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಗುಲ್ಬರ್ಗ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಶರಣ ಬಸವೇಶ್ವರ ದೇಗುಲಕ್ಕೆ ಭೇಟಿ ನೀಡಿದರೆ, ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದ ಹುಚ್ಚೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಇಂದು 188 ದಶಲಕ್ಷ ಮತದಾರರು ಮತ ಚಲಾಯಿಸಲಿದ್ದು, 2,10,770 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1640 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

2014ರಲ್ಲಿ ಮೊದಲ ಎರಡು ಹಂತಗಳ ಮತದಾನದಲ್ಲಿ ಪ್ರತಿಸ್ಪರ್ಧಿ ಪಕ್ಷಗಳಿಗಿಂತ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News