ಅಣಕು ಮತದಾನದಲ್ಲಿ ಚಲಾವಣೆಯಾದದ್ದು 9 ಮತ, ಬಿಜೆಪಿ ಪಡೆದದ್ದು 17 ಮತ!: ಆರೋಪ

Update: 2019-04-23 08:05 GMT

#ಕಾಂಗ್ರೆಸ್ ಗೆ ನೀಡಿದ್ದ ಮತ ಬಿಜೆಪಿಗೆ: ದೂರು

ಹೊಸದಿಲ್ಲಿ, ಎ.23: ತೃತೀಯ ಹಂತದ ಲೋಕಸಭಾ ಚುನಾವಣೆ ಆರಂಭಗೊಳ್ಳುವ ಮುನ್ನ ಗೋವಾದ ಮತಗಟ್ಟೆಯೊಂದರಲ್ಲಿ  ನಡೆದ ಅಣಕು ಮತದಾನದಲ್ಲಿ 9 ಮತಗಳನ್ನು ಪಡೆಯಬೇಕಿದ್ದ ಬಿಜೆಪಿ 17 ಮತಗಳನ್ನು ಪಡೆದ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ.

ನಿರ್ದಿಷ್ಟ ಮತಗಟ್ಟೆಯಲ್ಲಿ ನಡೆದ ಅಣಕು ಮತದಾನದಲ್ಲಿ ಎಲ್ಲಾ ಆರು ಅಭ್ಯರ್ಥಿಗಳಿಗೆ ತಲಾ ಒಂಬತ್ತು ಮತಗಳನ್ನು ಮೀಸಲಿರಿಸಲಾಗಿತ್ತಾದರೂ ಅಂತಿಮವಾಗಿ ಬಿಜೆಪಿಗೆ 17 ಮತಗಳು ದೊರಕಿದ್ದವು ಎಂದು ಗೋವಾ ಆಪ್ ಮುಖ್ಯಸ್ಥ ಎಲ್ವಿಸ್ ಗೋಮ್ಸ್   ಟ್ವಿಟ್ಟರ್ ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನು `ಇಲೆಕ್ಷನ್ ಆಫ್ ಶೇಮ್' ಎಂದೂ ಗೋಮ್ಸ್ ಬಣ್ಣಿಸಿದ್ದಾರೆ. “ಇಲೆಕ್ಷನ್ ಆಫ್ ಶೇಮ್ ? ಗೋವಾದ 34 ಎಸಿ ಬೂತ್ ಸಂಖ್ಯೆ 31ರಲ್ಲಿ ನಡೆದ ಅಣಕು ಮತದಾನದಲ್ಲಿ ಎಲ್ಲಾ ಆರು ಅಭ್ಯರ್ಥಿಗಳಿಗೆ ತಲಾ 9 ಮತಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಫಲಿತಾಂಶದಲ್ಲಿ ಬಿಜೆಪಿಗೆ 17, ಕಾಂಗ್ರೆಸ್ ಪಕ್ಷಕ್ಕೆ 9, ಎಎಪಿಗೆ 8 ಹಾಗೂ ಪಕ್ಷೇತರರಿಗೆ 1. ಚುನಾವಣಾ ಆಯೋಗದ ಹೇಳಿಕೆಗಳೆಲ್ಲಾ ಟೊಳ್ಳು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಈ ನಿರ್ದಿಷ್ಟ ಇವಿಎಂ ಅನ್ನು ಬದಲಾಯಿಸಲಾಗಿದೆ ಎಂದು ಗೋವಾದ ಮುಖ್ಯ ಚುನಾವಣಾಧಿಕರಿ ಘೋಷಿಸಿದ್ದಾರೆ. “ಎಸಿ 34, ಮತಗಟ್ಟೆ 31 ಇಲ್ಲಿನ ಸಂಪೂರ್ಣ ಇವಿಎಂ ಸೆಟ್ ಅನ್ನು ದಕ್ಷಿಣ ಗೋವಾ ವಿಭಾಗೀಯ ಚುನಾವಣಾಧಿಕಾರಿಗಳ ಸೂಚನೆಯಂತೆ ಬದಲಾಯಿಸಲಾಗಿದೆ” ಎಂದು ಗೋವಾದ ಮುಖ್ಯ ಚುನಾವಣಾಧಿಕಾರಿ ಟ್ವೀಟ್ ಮಾಡಿದ್ದಾರೆ.

ಇವಿಎಂ ದೋಷಗಳ ಕುರಿತಾದ ದೂರುಗಳು ಗೋವಾ ಮಾತ್ರವಲ್ಲದೆ ಕರ್ನಾಟಕದಿಂದಲೂ ವರದಿಯಾಗಿದ್ದು, ಚಿತ್ತಾಪುರದಲ್ಲಿ ಇಲ್ಲಿಯ ತನಕ 20 ಇವಿಎಂಗಳಲ್ಲಿ ದೋಷ ಕಂಡು ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ಕೇರಳದಲ್ಲೂ ಕಾಂಗ್ರೆಸ್ ಪರ ಒತ್ತಿದ ಮತಗಳು ಬಿಜೆಪಿಗೆ ಹೋಗಿರುವ ದೂರುಗಳು ಕೇಳಿ ಬಂದಿವೆ. ಕಾಸರಗೋಡಿನಲ್ಲಿ 20 ಇವಿಎಂಗಳಲ್ಲಿ ದೋಷ ಕಂಡು ಬಂದರೆ, ಕಾಯಕುಳಂನಲ್ಲಿ ಐದು ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ವಯನಾಡ್ ನ ಒಂದು ಬೂತ್ ನಲ್ಲಿ ಇವಿಎಂ ದೋಷದ ಹಿನ್ನೆಲೆಯಲ್ಲಿ ಎನ್ ಡಿಎ ಅಭ್ಯರ್ಥಿ  ತುಷಾರ್ ವೆಳ್ಳಪಳ್ಳಿ ಮರುಮತದಾನಕ್ಕೆ ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದಲ್ಲೂ ನೂರಾರು ಇವಿಎಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ರಾಮಪುರ್ ಕ್ಷೇತ್ರವೊಂದರಲ್ಲೇ 300 ಇವಿಎಂಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿವೆ, ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎದು ಸಮಾಜವಾದಿ ಪಕ್ಷದ ಅಭ್ಯರ್ಥಿ ಆಝಂ ಖಾನ್ ಪುತ್ರ ಅಬ್ದುಲ್ಲಾ ಆಝಂ ಆರೋಪಿಸಿದ್ದಾರೆ.

ಆದರೆ ರಾಮಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಂಜನೇಯ ಕುಮಾರ್ ಸಿಂಗ್ ಈ ಆರೋಪಗಳನ್ನು ನಿರಾಕರಿಸಿ ಅವುಗಳು ವದಂತಿಯಷ್ಟೇ. ಆರಂಭದಲ್ಲಿ ಕೆಲವೆಡೆ ಸಮಸ್ಯೆಗಳು ತಲೆದೋರಿತ್ತಾದರೂ ಅವುಗಳನ್ನು ಕೂಡಲೇ ಸರಿಪಡಿಸಲಾಗಿದೆ ಎಂದು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News