ಕೈ-ಕಾಲಿಲ್ಲದವರು, ಬಾಣಂತಿಯರಿಂದ ಮತ ಚಲಾವಣೆ: ರಾಜ್ಯದಲ್ಲಿ ಶೇ.37ರಷ್ಟು ಮತದಾನವೇ ಇಲ್ಲ !

Update: 2019-04-23 14:31 GMT

ಬೆಂಗಳೂರು, ಎ.23: ರಾಜ್ಯದಲ್ಲಿ ನಡೆದ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಶೇ.37ರಷ್ಟು ಜನ ಆರೋಗ್ಯವಾಗಿರುವರೇ ಮತ ಚಲಾಯಿಸಿಲ್ಲ. ಆದರೆ, ಕೈ-ಕಾಲು ಇಲ್ಲದ ಹಾಗೂ ಬಾಣಂತಿಯರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

ಕೊಪ್ಪಳದ ವಾರ್ಡ್ ನಂ.7ರಲ್ಲಿ ಒಂದೇ ಕುಟುಂಬದ ಮೂವರು ದೃಷ್ಟಿ ವಿಕಲಚೇತನರಾದ ಅಕ್ಕ-ತಂಗಿಯರು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಸೈಲಾನ್ಪುರ ನಿವಾಸಿಗಳಾದ ಗವಿಸಿದ್ದಮ್ಮ, ಮಂಜುಳ, ಶಿಲ್ಪಾ ಎಂಬ ದೃಷ್ಟಿ ವಿಕಲಚೇತನ ಸೋದರಿಯರು ಸುಡು ಬಿಸಿಲಿನಲ್ಲಿಯೂ ಕೂಡ ಅಮ್ಮನ ಆಸರೆ ಪಡೆದು ಬಂದು ಬೂತ್ ನಂ.109 ನೇ ಮತಗಟ್ಟೆಯಲ್ಲಿ ಮತದಾನ ಮಾಡುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ವಿದೇಶದಿಂದ ಬಂದು ಮತದಾನ: ಚುನಾವಣೆಗೆ ರಜೆ ಮಾಡಿ, ಮತ ಚಲಾಯಿಸುವಂತೆ ಜಾಗೃತಿ ಮೂಡಿಸಿದರೂ ಮತ ಚಲಾವಣೆಗೆ ಆಸಕ್ತಿ ತೋರದ ಜನರ ನಡುವೆ ಕೆಲವರು ವಿದೇಶದಿಂದ ಆಗಮಿಸಿ ಮತ ಚಲಾಯಿಸಿ ಮತದಾನದ ಮಹತ್ವವನ್ನು ಸಮಾಜಕ್ಕೆ ಸಾರಿದ್ದಾರೆ.

ಪದ್ಮನಾಥ ಕಂಚಿ ಎಂಬುವವರು ಮತದಾನಕ್ಕಾಗಿ ಇಟಲಿಯಿಂದ ಹುಬ್ಬಳ್ಳಿಗೆ ಆಗಮಿಸಿ ಮಂಜುನಾಥ ನಗರದ ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದರು. ಮೂಲತಃ ಹುಬ್ಬಳ್ಳಿಯ ನಿವಾಸಿಯಾಗಿರುವ ಪದ್ಮನಾಥ ಕಂಚಿ ಇಟಲಿಯಲ್ಲಿ ನೆಲೆಸಿದ್ದಾರೆ. ಮತದಾನ ಮಾಡಲೆಂದೇ ಇಂದು ಇಟಲಿಯಿಂದ ಆಗಮಿಸಿದ ಅವರು, ಮತದಾನ ಕೇಂದ್ರಕ್ಕೆ ಆಗಮಿಸಿ ಸರದಿ ಸಾಲಲ್ಲಿ ನಿಂತು ಮತ ಚಲಾಯಿಸಿದರು.

ಎರಡು ಕೈಗಳಿಲ್ಲದ ಯುವಕನಿಂದ ಮತದಾನ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದ ಯುವಕ ದಯಾನಂದ ಹರಿಜನ ಎರಡು ಕೈಗಳಿಲ್ಲದಿದ್ದರೂ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಬೂತ್ ನಂ.167ಲ್ಲ ಮತ ಚಲಾವಣೆ ಮಾಡಿದರು. 2014ರಲ್ಲಿ ವಿದ್ಯುತ್ ಅವಘಡದಲ್ಲಿ ಕೈ ಕಳೆದುಕೊಂಡಿದ್ದಾರೆ.

ತೆವಳುತ್ತ ಬಂದು ಮತದಾನ ಮಾಡಿದ ಯುವತಿ: ಅಂಗವಿಕಲ ಮಹಿಳೆಯೊಬ್ಬರು ಸುಡು ಬಿಸಿಲನ್ನು ಲೆಕ್ಕಿಸದೆ ನೆಲದಲ್ಲಿ ತೆವಳುತ್ತಾ ಬಂದು ಮತದಾನ ಮಾಡಿದ್ದಾರೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ರಜೀಯಾ ಬಿ ಮತದಾನ ಮಾಡಿದ ಮಹಿಳೆಯಾಗಿದ್ದಾರೆ.

ಕಾಲಿನಿಂದ ಮತ ಚಲಾಯಿಸಿದ ಮಹಿಳೆ: ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದ ಮತಗಟ್ಟೆ ಸಂಖ್ಯೆ 118ರಲ್ಲಿ ಎರಡೂ ಕೈಗಳಿಲ್ಲದ ಲಕ್ಷ್ಮೀದೇವಿ ಎಂಬುವವರು ಕಾಲಿನಿಂದ ಮತ ಚಲಾಯಿಸಿದ್ದಾರೆ.

ಬಾಣಂತಿಯಿಂದ ಮತದಾನ: ಪಾರ್ವತಿಕರ ಎಂಬ ಬಾಣಂತಿ, ಒಂದು ದಿನದ ಮಗುವಿನೊಂದಿಗೆ ಬಂದು ಮತದಾನ ಮಾಡಿದ ಘಟನೆ ಧಾರವಾಡದ ನಂ.8ರ ಶಾಲೆಯಲ್ಲಿ ನಡೆದಿದ್ದು, ನಿನ್ನೆಯಷ್ಟೆ ಅವರಿಗೆ ಹೆರಿಗೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News