ವೃದ್ಧರು, ವಿಕಲಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ: ಜಿಲ್ಲಾಡಳಿತಡ ಕಾರ್ಯಕ್ಕೆ ಅನೇಕರಿಂದ ಪ್ರಶಂಸೆ

Update: 2019-04-23 15:27 GMT

ರಾಯಚೂರು, ಎ.23: ವಿಕಲಚೇತನರು ಮತ್ತು ವಯೋವೃದ್ಧ ಮತದಾರರಿಗೆ ವ್ಹೀಲ್ ಚೇರ್ ಮೂಲಕ ಮತಗಟ್ಟೆಗೆ ತೆರಳಿ ಮತದಾನ ಮಾಡುವ ವ್ಯವಸ್ಥೆಯನ್ನು ರಾಯಚೂರು ಜಿಲ್ಲಾಡಳಿತ ಅಚ್ಚುಕಟ್ಟಾಗಿ ನಿರ್ವಹಿಸಿತು.

ಇಲ್ಲಿವರೆಗೂ ವಯೋ ವೃದ್ಧರನ್ನು ಅಥವಾ ವಿಕಲಚೇತನರನ್ನು ಮತಗಟ್ಟೆಗಳಿಗೆ ಅವರ ಸಹಾಯಕರು ಎತ್ತಿಕೊಂಡು ಬರುವುದು ಸಾಮಾನ್ಯವಾಗಿತ್ತು. ಆದರೆ, ಈಗ ಜಿಲ್ಲಾಡಳಿತ ಇವರಿಗಾಗಿ ವಿಶೇಷ ವ್ಯವಸ್ಥೆ ಮಾಡಿರುವುದರಿಂದ ಅನೇಕ ವಿಕಲಚೇತನರು ಮತ್ತು ವಯೋವೃದ್ಧರಿಗೆ ಮತದಾನ ಮಾಡಲು ಅನುಕೂಲವಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,341 ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ.

ಈ ಎಲ್ಲಾ ಮತದಾರರಿಗೆ ಸುಲಭವಾಗಿ ಮತ ಚಲಾಯಿಸಲು ಅವಕಾಶವಾಗುವಂತೆ ಸ್ಕೌಟ್ಸ್ ಗೈಡ್ಸ್ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರನ್ನು ನೇಮಿಸಲಾಗಿತ್ತು. ಪ್ರತಿ ಮತಗಟ್ಟೆಗೆ ಆಗಮಿಸುವ ವಿಕಲಚೇತನರು ಹಾಗೂ ವಯೋ ವೃದ್ಧರನ್ನು ವ್ಹೀಲ್ ಚೇರ್‌ನಲ್ಲಿ ಆಸೀನರಾಗುವಂತೆ ಮಾಡಿ ಅವರನ್ನು ಮತಗಟ್ಟೆವರೆಗೂ ಕರೆದೊಯ್ದು ಮತದಾನ ಮಾಡಿಸಲಾಗುತ್ತಿತ್ತು.

ಶಹಾಪೂರಿನಲ್ಲಿ 89, ಸುರಪುರ 110, ಯಾದಗಿರಿ 110, ರಾಯಚೂರು ಗ್ರಾಮಾಂತರ 201, ರಾಯಚೂರು ನಗರ 165, ಮಾನ್ವಿ 215, ದೇವದುರ್ಗ 230, ಲಿಂಗಸೂಗೂರು 221 ವಿಕಲಚೇತನ ಮತದಾರರು ಇರುವುದಾಗಿ ಜಿಲ್ಲಾಡಳಿತ ಗುರುತಿಸಿದ್ದು, ಇವರ ಮತದಾನಕ್ಕೆ ಯಾವುದೇ ತೊಂದರೆಯಾಗದಂತೆ ವಿಶೇಷ ಗಮನ ಹರಿಸಲಾಯಿತು. ಜಿಲ್ಲಾಡಳಿತ ಈ ಕಾರ್ಯ ಅನೇಕರಿಂದ ಪ್ರಶಂಸಿಸಲ್ಪಟ್ಟಿತ್ತು. ಶಾಲಾ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದರು. ಕೆಲ ಗ್ರಾಮಸ್ಥರು ವಯೋವೃದ್ಧರು, ವಿಕಲಚೇತನರ ಸೇವೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದರು.

ಅಲ್ಲದೇ, ಮತಗಟ್ಟೆಗಳಲ್ಲಿ ವೈದ್ಯಕೀಯ ಸೇವಾ ಕೇಂದ್ರದ ವ್ಯವಸ್ಥೆಯೂ ಮಾಡಲಾಗಿತ್ತು. ಬಿಸಿಲು ಮತ್ತಿತರ ಕಾರಣಗಳಿಂದ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದರೆ, ಅಂತಹವರಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ದೊರೆಕಿಸಿಕೊಡುವ ವ್ಯವಸ್ಥೆ ಗಮನಾರ್ಹವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News