ಚುನಾವಣೆ ನಂತರ ಮೈತ್ರಿ ಸರಕಾರ ಮತ್ತಷ್ಟು ಸುಭದ್ರ: ಎಚ್.ಕೆ.ಪಾಟೀಲ್

Update: 2019-04-23 15:32 GMT

ಗದಗ, ಎ. 23: ಯಾವುದೇ ಕಾರಣಕ್ಕೂ ಮೈತ್ರಿ ಸರಕಾರ ಚುನಾವಣೆ ನಂತರ ಪತನವಾಗುವುದಿಲ್ಲ. ಲೋಕಸಭಾ ಚುನಾವಣೆಯ ನಂತರ ಮೈತ್ರಿ ಸರಕಾರ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಭರವಸೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಜಿಲ್ಲೆಯ ತಮ್ಮ ಹುಟ್ಟೂರು ಹುಲಕೋಟಿಯಲ್ಲಿ ಸಹೋದರ ಡಿ.ಆರ್.ಪಾಟೀಲ್ ಅವರ ಜೊತೆ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಮೋದಿ ಅಲೆ ನಡೆಯುವುದಿಲ್ಲ. ಗ್ರಾಮೀಣಾಭಿವೃದ್ದಿಗೆ ಒತ್ತು ಕೊಟ್ಟ ಡಿ.ಆರ್.ಪಾಟೀಲ್ ಅವರ ಅಲೆ ಗದಗದಲ್ಲಿದೆ. ಹಾವೇರಿ-ಗದಗ ಕ್ಷೇತ್ರದಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಡಿ.ಆರ್.ಪಾಟೀಲ್ ಗೆಲವು ನಿಶ್ಚಿತ. ಬೆಳಗಾವಿ, ಬಾಗಲಕೋಟೆ, ಕಲಬುರಗಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ಮಾಡಿದ್ದೇನೆ. ಎಲ್ಲ ಕಡೆಯಲ್ಲಿಯೂ ಕಾಂಗ್ರೆಸ್ ಪರವಾದ ಒಲವು ಕಂಡುಬಂದಿದೆ. ಎಲ್ಲ ಕಡೆ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಲಿದ್ದಾರೆ ಎಂದರು.

ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಸರಕಾರ ಪತನವಾಗುತ್ತದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯ ನಂತರ ಮೈತ್ರಿ ಸರಕಾರ ಮತ್ತಷ್ಟು ಗಟ್ಟಿಗೊಳ್ಳಲಿದೆ. ಮೋದಿ ಗೆಲುವಾಗಬಹುದು, ಬಿಡಬಹುದು. ಆದರೆ ಮೈತ್ರಿ ಸರಕಾರ ಮತ್ತಷ್ಟು ಗಟ್ಟಿಯಾಗುವುದು ನಿಶ್ಚಿತ ಎಂದರು.

ಬಿಜೆಪಿಯವರು ಸರಕಾರ ಅಸ್ತಿತ್ವಕ್ಕೆ ಬಂದ ಸಮಯದಿಂದಲೂ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ಲೋಕಸಭಾ ಚುನಾವಣೆಯ ನಂತರ ಮತ್ತಷ್ಟು ಬಲಗೊಳ್ಳಲಿದ್ದು, ಸರಕಾರ ಪತನಗೊಳ್ಳುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News