ಉ.ಪ್ರ. ಮಾಜಿ ಮುಖ್ಯಮಂತ್ರಿ ಪುತ್ರನ ಹತ್ಯೆ ಪ್ರಕರಣ: ಪತ್ನಿಯ ಬಂಧನ

Update: 2019-04-24 07:02 GMT

ಹೊಸದಿಲ್ಲಿ, ಎ.24: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಡಿ.ತಿವಾರಿ ಪುತ್ರ ರೋಹಿತ್ ಶೇಖರ್ ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರೋಹಿತ್‌ರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

ರೋಹಿತ್ ತಿವಾರಿಯವರ ಅಸಹಜ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ರೋಹಿತ್ ತಾಯಿ ಉಜ್ವಲಾ ಅವರು ನೀಡಿದ ದೂರಿನ ಬಳಿಕ ಕಳೆದ ಮೂರು ದಿನಗಳಿಂದ ರೋಹಿತ್ ಪತ್ನಿ ಅಪೂರ್ವ ಶುಕ್ಲಾ ತಿವಾರಿ ಅವರನ್ನು ತೀವ್ರ ವಿಚಾರಣೆ ನಡೆಸಿ ಇದೀಗ ಬಂಧಿಸಿದ್ದಾರೆ.

ಎ.16 ರಂದು ರೋಹಿತ್ ಸಾವನ್ನಪ್ಪಿದ್ದರು. ಶವಪರೀಕ್ಷೆಯ ಬಳಿಕ ಅದೊಂದು ಹತ್ಯೆಯಾಗಿದ್ದು, ತಲೆದಿಂಬಿನಿಂದ ಉಸಿರುಕಟ್ಟಿಸಿ ಸಾಯಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

40ರ ಹರೆಯದ ರೋಹಿತ್ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಮೊದಲಿಗೆ ಹೇಳಲಾಗಿತ್ತು. ಎ.12 ರಂದು ಉತ್ತರಾಖಂಡಕ್ಕೆ ಮತದಾನ ಮಾಡಲು ತೆರಳಿದ್ದ ರೋಹಿತ್ ಎ.15ರ ರಾತ್ರಿ ಮನೆಗೆ ಬಂದಿದ್ದರು. ಅವರು ತೂರಾಡುತ್ತಾ ಮನೆಗೆ ಬರುವುದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿತ್ತು. ಆಗ ಅವರು ಮದ್ಯ ಸೇವಿಸಿರುವ ಸಾಧ್ಯತೆಯಿದೆ.

 ರೋಹಿತ್ ತಾಯಿ ಉಜ್ವಲಾ ತಿವಾರಿ ತನ್ನ ಚಿಕಿತ್ಸೆಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಪುತ್ರ ರೋಹಿತ್ ಅಸ್ವಸ್ಥರಾಗಿದ್ದು, ಮೂಗಿನಲ್ಲಿ ರಕ್ತ ಸೋರುತ್ತಿರುವ ಮಾಹಿತಿ ಲಭಿಸಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ರೋಹಿತ್ ಮನೆಯಲ್ಲಿ ಅಸ್ವಸ್ಥರಾಗಿದ್ದ ಸಮಯದಲ್ಲಿ ರೋಹಿತ್ ಪತ್ನಿ ಅಪೂರ್ವ, ಆಕೆಯ ಸೋದರ ಸಂಬಂಧಿ ಸಿದ್ದಾರ್ಥ್ ಹಾಗೂ ಮನೆ ಕೆಲಸದಾಕೆ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಸೊಸೆ ಅಪೂರ್ವ ಹಾಗೂ ಆಕೆಯ ಕುಟುಂಬ ಸದಸ್ಯರು ತನ್ನ ಆಸ್ತಿಯನ್ನು ಲಪಟಾಯಿಸಲು ಬಯಸಿದ್ದಾರೆ ಎಂದು ರೋಹಿತ್‌ರ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News