ಸಾರ್ವಜನಿಕರಿಗೆ ಕಲುಷಿತ ನೀರು ಪೂರೈಸುತ್ತಿರುವ ಚಿಕ್ಕಮಗಳೂರು ನಗರಸಭೆ: ಆರೋಪ

Update: 2019-04-24 12:32 GMT

ಚಿಕ್ಕಮಗಳೂರು, ಎ.24: ನಗರದ ವಿವಿಧ ಬಡಾವಣೆಗಳಿಗೆ ನಗರಸಭೆ ಕಲುಷಿತ ನೀರನ್ನು ಪೂರೈಸುತ್ತಿದೆ. ನಗರದಲ್ಲಿರುವ ನೀರು ಶುದ್ಧೀಕರಣ ಘಟಕ ಹೂಳು ತುಂಬಿಕೊಂಡಿದ್ದು, ಕಳೆದ 15 ವರ್ಷಗಳಿಂದ ಈ ಘಟಕವನ್ನು ಸ್ವಚ್ಛ ಮಾಡುವ ನಿಟ್ಟಿನಲ್ಲಿ ನಗರಸಭೆ ಸದಸ್ಯರ ಹಾಗೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಈ ಘಟಕದಿಂದ ಪೂರೈಕೆಯಾಗುವ ನೀರು ಕುಡಿದ ಸಾರ್ವಜನಿಕರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿ ನಾಗರಿಕ ಹಕ್ಕು ಹೋರಾಟ ವೇದಿಕೆ ವತಿಯಿಂದ ಬುಧವಾರ ನಗರದಲ್ಲಿ ಧರಣಿ ನಡೆಸಲಾಯಿತು.

ವೇದಿಕೆಯ ಸಂಚಾಲಕರಾದ ನಿವೃತ್ತ ತಾಲೂಕು ವೈದ್ಯಾಧಿಕಾರಿ ಡಾ.ದೊಡ್ಡಮಲ್ಲಪ್ಪ, ಸಿಪಿಐ ಪಕ್ಷದ ಮುಖಂಡ ವಿಜಯ್‍ಕುಮಾರ್, ನಿವೃತ್ತ ಉಪನ್ಯಾಸಕ ಚಂದ್ರೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಕಲೀಲ್ ಮತ್ತಿತರ ಸದಸ್ಯರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಹಾಗೂ ವಿವಿಧ ಬಡಾವಣೆಗಳ ನಿವಾಸಿಗಳು ನಗರದ ರಾಮನಹಳ್ಳಿ ಬಡಾವಣೆಯಲ್ಲಿರುವ ನೀರು ಶುದ್ಧೀಕರಣ ಘಟಕ(ವಾಟರ್‍ಬೆಡ್)ದ ಆವರಣದಲ್ಲಿ ಸಮಾವೇಶಗೊಂಡರು.

ಈ ವೇಳೆ ನಗರದ ನಿವಾಸಿಗಳಿಗೆ ಶುದ್ಧೀಕರಣ ಮಾಡದ ಕಲುಷಿತ ನೀರನ್ನು ನಗರಸಭೆ ಕುಡಿಸುತ್ತಿದೆ. ಈ ಮೂಲಕ ನಿವಾಸಿಗಳು ವಿವಿಧ ರೋಗಗಳಿಗೆ ತುತ್ತಾಗುವಂತೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ವಿವಿಧ ಬಡಾವಣೆಗಳಿಗೆ ಪೂರೈಕೆಯಾಗುತ್ತಿರುವ ಕಲುಷಿತ ನೀರನ್ನು ಬಾಟಲಿಗಳಲ್ಲಿ ಸಂಗ್ರಹಿಸಿ ಅದಕ್ಕೆ ಗಂಗಾ ಪೂಜೆ ಮಾಡುವ ಮೂಲಕ ಕಲುಷಿತ ನೀರು ಕುಡಿಯುತ್ತಿರುವ ನಗರವಾಸಿಗಳಿಗೆ ಯಾವುದೇ ಕಾಯಿಲೆಗಳು ಬಾರದಿರಲಿ ಎಂದು ಪ್ರಾರ್ಥಿಸಿ ನಗರಸಭೆ ಆಡಳಿತವನ್ನು ಅಣಕಿಸಿದರು.

ಧರಣಿ ಸಂದರ್ಭ ಮಾತನಾಡಿದ ಸಿಪಿಐ ಪಕ್ಷದ ಮುಖಂಡ ಹಾಗೂ ವೇದಿಕೆಯ ಸಂಚಾಲಕ ವಿಜಯ್‍ಕುಮಾರ್, ಚಿಕ್ಕಮಗಳೂರು ನಗರಸಭೆಯು ನಗರದ ವಿವಿಧ ಬಡಾವಣೆಗಳಿಗೆ ರಾಮನಹಳ್ಳಿಯಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಸಂಗ್ರಹವಾಗುವ ನಗರ ಸಮೀಪದ ಹಿರೇಕೊಳಲೆ ಕೆರೆ ಹಾಗೂ ಯಗಚಿ ಡ್ಯಾಮ್‍ನ ನೀರನ್ನು ಪೂರೈಕೆ ಮಾಡುತ್ತಿದೆ. ಆದರೆ ಶುದ್ಧೀಕರಣ ಘಟಕದಲ್ಲಿ ಸಂಗ್ರಹವಾಗುವ ನೀರನ್ನು ಶುದ್ಧೀಕರಿಸದೇ ನಗರದ ಎಲ್ಲ ವಾರ್ಡುಗಳಿಗೆ ಪೂರೈಕೆ ಮಾಡುತ್ತಿರುವುದರಿಂದ ಕಲುಷಿತ ಹಸಿರು ಬಣ್ಣದ ನೀರು ಮನೆಮನೆಗಳಿಗೆ ಪೂರೈಕೆಯಾಗುತ್ತಿದೆ. ಈ ಕಲುಷಿತ ನೀರು ಕುಡಿಯುತ್ತಿರುವ ಸಾರ್ವಜನಿಕರು, ಮಕ್ಕಳು ಡೆಂಗ್, ಚಿಕುನ್‍ ಗುನ್ಯಾದಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರು ಹಾಗೂ ಸಂಸದರ ನಿರ್ಲಕ್ಷದಿಂದಾಗಿ ನಗರದ ಯುಜಿಡಿ ಕಾಮಗಾರಿಗಳು ಅವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದೆ. ನೂರಾರು ಕೋಟಿ. ರೂ. ವೆಚ್ಚದ ಕಾಮಗಾರಿ ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಯುಜಿಡಿ ಸಂಪರ್ಕ ನೀಡದ ಪರಿಣಾಮ ನಗರದ ವಿವಿಧ ಬಡಾವಣೆಗಳ ಕೊಳಚೆ ನೀರು ಖಾಸಗಿ ಬಸ್ ನಿಲ್ದಾಣದಲ್ಲಿರುವ ದೊಡ್ಡಳ್ಳ ನದಿ ಮೂಲಕ ಹಿರೇಕೊಳಲೆ ಕೆರೆ ಹಾಗೂ ಯಗಚಿ ಡ್ಯಾಮ್ ಸೇರುತ್ತಿದ್ದು, ಹಿರೇಕೊಳೆಲೆ ಕೆರೆ ಹಾಗೂ ಯಗಚಿಯ ಕಲುಷಿತ ನೀರನ್ನೇ ನಗರದ ಶುದ್ಧೀಕರಣ ಘಟಕಕ್ಕೆ ಸರಬರಾಜಾಗುತ್ತಿದೆ. ನಗರಸಭೆಯುವ ಈ ನೀರನ್ನು ಶುದ್ಧೀಕರಣ ಮಾಡದೇ ನಗರದ ವಿವಿಧ ಬಡಾವಣೆಗಳಿಗೆ ಪೂರೈಕೆ ಮಾಡುತ್ತಿದೆ ಎಂದು ವಿಜಯ್‍ ಕುಮಾರ್ ಆರೋಪಿಸಿದರು.

ರಾಮನಹಳ್ಳಿ ಬಡಾವಣೆಯಲ್ಲಿರುವ ಶುದ್ಧೀಕರಣ ಘಟಕವನ್ನು ಕಳೆದ 15 ವರ್ಷಗಳಿಂದ ನಗರಸಭೆ ಅಧಿಕಾರಿಗಳು ಸ್ವಚ್ಛ ಮಾಡುತ್ತಿಲ್ಲ. ಪರಿಣಾಮ ಘಟಕದ ತಳಬಾಗದಲ್ಲಿ 4-5 ಅಡಿ ಹೂಳು ತುಂಬಿಕೊಂಡಿದ್ದು, ಇಲ್ಲಿ ಸಂಗ್ರಹವಾಗುವ ನೀರನ್ನೇ ಯಥಾಸ್ಥಿತಿಯಲ್ಲಿ ನಗರದ ಎಲ್ಲ ಮನೆಗಳಿಗೂ ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ನಗರದ ಮನೆಮನೆಗಳ ನಲ್ಲಿಗಳಲ್ಲಿ ಹಸಿರು ಬಣ್ಣದ ನೀರು ಬರುತ್ತಿದ್ದು, ನಿವಾಸಿಗಳು ಗತಿ ಇಲ್ಲದೇ ಅದೇ ನೀರನ್ನು ಕುಡಿಯುತ್ತಿದ್ದಾರೆಂದು ದೂರದರು.

ಧರಣಿ ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ನಗರಸಭೆ ಆಯುಕ್ತ ಪರಮೇಶಿ ಧರಣಿ ನಿರತರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ವೇದಿಕೆ ಮುಖಂಡರು ಹಾಗೂ ನಿವಾಸಿಗಳು ಅಧಿಕಾರಿಗೆ ಕಲುಷಿತ ನೀರು ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ತಾನು ಇತ್ತೀಚೆಗಷ್ಟೆ ಅಧಿಕಾರಕ್ಕೆ ನಿಯುಕ್ತಿಗೊಂಡಿದ್ದು, ಈ ಬಗ್ಗೆ ಮಾಹಿತಿ ಇರಲಿಲ್ಲ. ಇಂದೇ ಘಟಕದ ಅವಸ್ಥೆ ಪರಿಶೀಲಿಸಿ ಶುದ್ಧೀಕರಿಸಿದ ನೀರು ಪೂರೈಕೆಗೆ ಕ್ರಮಕೈಗೊಳ್ಳುತ್ತೇನೆಂದು ಭರವಸೆ ನೀಡಿದರು. ನಗರಸಭೆ ಆಯುಕ್ತರ ಭರವಸೆ ಮೇರೆಗೆ ಧರಣಿಯನ್ನು ಹಿಂಪಡೆಯಲಾಯಿತು.

ನಗರಸಭೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಸಿಇಒ, ಎಸ್ಪಿ, ಶಾಸಕರೆಲ್ಲರೂ ಪಿಲ್ಟರ್ ನೀರನ್ನು ಕುಡಿಯುತ್ತಿದ್ದಾರೆ. ಕಳೆದ 15 ಐದು ವರ್ಷಗಳ ನಗರಸಭೆ ಆಡಳಿತ ನಡೆಸಿದವರು ವಾಟರ್ ಕಂಪೆನಿಗಳನ್ನು ನಡೆಸುತ್ತಾ ಶುದ್ಧೀಕರಿಸಿದ ನೀರು ಕುಡಿಯುತ್ತಿದ್ದಾರೆ. ಸಾರ್ವಜನಿಕರು, ಬಡಜನರು ಮಾತ್ರ ನಗರಸಭೆ ಪೂರೈಸುವ ಹಸಿರು ಬಣ್ಣ ಕಲುಷಿತ ನೀರು ಕುಡಿಯುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ನಗರಸಭೆ ಕಮಿಷನರ್ ಇಲ್ಲದ ಸಬೂಬು ಹೇಳುತ್ತಾರೆ. ಆರೋಗ್ಯ ನಿರೀಕ್ಷಕರು ಜನರ ಕೈಗೆ ಸಿಗುತ್ತಿಲ್ಲ. ಶುದ್ಧೀಕರಿಸಿದ ನೀರನ್ನೇ ನಗರಕ್ಕೆ ಪೂರೈಕೆ ಮಾಡಬೇಕು ಹಾಗೂ ವಾಟರ್ ಬೆಡ್‍ಅನ್ನು ನವೀಕರಣ ಮಾಡಬೇಕು. ತಪ್ಪಿದಲ್ಲಿ ಹೋರಾಟ ಮುಂದುವರಿಯಲಿದೆ.
-ಡಾ.ದೊಡ್ಡಮಲ್ಲಪ್ಪ, ನಿವೃತ್ತ ತಾಲೂಕು ವೈದ್ಯಾಧಿಕಾರಿ, ವೇದಿಕೆ ಸಂಚಾಲಕ

ನಗರದಲ್ಲಿ ಒಳಚರಂಡಿ ಕಾಮಗಾರಿ ಕಳೆದ 8 ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ಕಾಮಗಾರಿ ವಿಳಂಬಕ್ಕೆ ಕ್ಷೇತ್ರದ ಶಾಸಕರ ಬೇಜವಬ್ದಾರಿ ಎದ್ದು ಕಾಣುತ್ತಿದೆ. ಯುಜಿಡಿ ಸಂಪರ್ಕ ನೀಡದ ಪರಿಣಾಮ ಕೊಳಚೆ ನೀರು ನಗರದ ದೊಡ್ಡಳ್ಳದ ಮೂಲಕ ಹಿರೇಕೊಳಲೆ ಕೆರೆ, ಯಗಚಿ ಡ್ಯಾಂ ಸೇರುತ್ತಿದೆ. ಇದೇ ನೀರನ್ನು ನಗರಕ್ಕೆ ಕುಡಿಯಲು ಪೂರೈಸಲಾಗುತ್ತಿದೆ. ನಗರೋತ್ಥಾನ ಯೋಜನೆಯಡಿಯಲ್ಲಿ ಚರಂಡಿಗಳ ನಿರ್ಮಾಣಕ್ಕೆ ಉತ್ತಮ ರಸ್ತೆಗಳನ್ನು ಅಗೆದು ಹಾಕಲಾಗುತ್ತಿದ್ದು, ಮತ್ತೆ ಗುಂಡಿ ಮುಚ್ಚಿಲ್ಲ. ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದೆ. ಡೆಂಗ್, ಚಿಕುನ್‍ಗುನ್ಯಾ ರೋಗಕ್ಕೆ ನಿವಾಸಿಗಳು ಬಲಿಯಾಗುತ್ತಿದ್ದಾರೆ. ಸೊಳ್ಳೆಗಳ ನಿಯಂತ್ರಣಕ್ಕೆ ಪಾಗಿಂಗ್ ಮಾಡುವುದನ್ನೂ ನಗರಸಭೆ ನಿಲ್ಲಿಸಿದೆ.
- ವಿಜಯ್‍ ಕುಮಾರ್, ವೇದಿಕೆ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News