2010-17ರ ಅವಧಿಯಲ್ಲಿ 29 ಲಕ್ಷ ಭಾರತೀಯ ಮಕ್ಕಳು ದಡಾರ ಲಸಿಕೆಯಿಂದ ವಂಚಿತ: ಯುನಿಸೆಫ್

Update: 2019-04-25 16:46 GMT

ಹೊಸದಿಲ್ಲಿ,ಎ.25: 2010ರಿಂದ 2017ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಒಂದು ವರ್ಷಕ್ಕೂ ಕಡಿಮೆ ಪ್ರಾಯದ 29 ಲಕ್ಷ ಮಕ್ಕಳು ದಡಾರ ಲಸಿಕೆಯ ಮೊದಲ ಡೋಸ್‌ನಿಂದ ವಂಚಿತರಾಗಿದ್ದು,ಇದು ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ಸಂಖ್ಯೆಯಾಗಿದೆ ಎಂದು ಯುನಿಸೆಫ್ ಹೇಳಿದೆ.

ಇದೇ ಅವಧಿಯಲ್ಲಿ ನೈಜೀರಿಯಾದಲ್ಲಿ 40 ಲಕ್ಷ,ಅಮೆರಿಕದಲ್ಲಿ 25 ಲಕ್ಷ,ಪಾಕಿಸ್ತಾನ ಮತ್ತು ಇಂಡೋನೇಶ್ಯಾಗಳಲ್ಲಿ ತಲಾ 12 ಲಕ್ಷ ಮತ್ತು ಇಥಿಯೋಪಿಯಾದಲ್ಲಿ 11 ಲಕ್ಷ ಮಕ್ಕಳು ದಡಾರ ಲಸಿಕೆಯ ಮೊದಲ ಡೋಸ್‌ನಿಂದ ವಂಚಿತರಾಗಿದ್ದಾರೆ ಎಂದು ಅದು ತಿಳಿಸಿದೆ.

ಲಸಿಕೆ ನೀಡಿಕೆ ವಿರುದ್ಧ ಅಭಿಯಾನಗಳ ಪರಿಣಾಮಗಳ ಕುರಿತು ಕಳವಳಗಳ ನಡುವೆಯೇ ಯುನಿಸೆಫ್‌ನ ಈ ವರದಿ ಬಿಡುಗಡೆಗೊಂಡಿದೆ.

ದಡಾರ ಅಥವಾ ಮೀಸಲ್ಸ್ ವಿಶ್ವದಲ್ಲಿ ಅತ್ಯಂತ ಸಾಂಕ್ರಾಮಿಕ ವೈರಲ್ ರೋಗವಾಗಿದೆ. ವಿಶ್ವಾದ್ಯಂತ ಎಳೆಯ ಮಕ್ಕಳ ಸಾವುಗಳಿಗೆ ಈ ವೈರಸ್ ಪ್ರಮುಖ ಕಾರಣವಾಗಿದೆ. ಅಲ್ಪಾವಧಿಯಲ್ಲಿ ಒಂದು ಸ್ಥಳದಲ್ಲಿ ಐದಕ್ಕಿಂತ ಅಧಿಕ ದಡಾರ ಪ್ರಕರಣಗಳು ವರದಿಯಾದರೆ ಆ ರೋಗವು ಹಬ್ಬುತ್ತಿದೆ ಎಂದು ಪರಿಗಣಿಸಲಾಗುತ್ತದೆ.

ಇಂದು ವಿಶ್ವಾದ್ಯಂತ ಕಂಡು ಬರುತ್ತಿರುವ ದಡಾರ ರೋಗದ ಪ್ರಕರಣಗಳಿಗೆ ವರ್ಷಗಳ ಹಿಂದೆಯೇ ಬುನಾದಿ ಬಿದ್ದಿತ್ತು ಎಂದು ವರದಿ ಬಿಡುಗಡೆಯ ಬಳಿಕ ತಿಳಿಸಿದ ಯುನಿಸೆಫ್‌ನ ಕಾರ್ಯಕಾರಿ ನಿರ್ದೇಶಕ ಹೆನ್ರಿಟ್ಟಾ ಫೋರೆ ಅವರು, ದಡಾರ್ ವೈರಸ್ ಯಾವಾಗಲೂ ಲಸಿಕೆ ಪಡೆದಿರದ ಮಕ್ಕಳನ್ನೇ ಗುರಿಯಾಗಿಸಿಕೊಳ್ಳುತ್ತದೆ. ಈ ಅಪಾಯಕಾರಿ ರೋಗದ ಹರಡುವಿಕೆಯನ್ನು ತಡೆಯುವ ಬಗ್ಗೆ ನಾವು ಗಂಭೀರವಾಗಿದ್ದರೆ ಶ್ರೀಮಂತ ಮತ್ತು ಬಡರಾಷ್ಟ್ರಗಳೆಂಬ ಭೇದವಿಲ್ಲದೆ ಪ್ರತಿಯೊಂದು ಮಗುವಿಗೂ ಲಸಿಕೆಯನ್ನು ನೀಡುವ ಅಗತ್ಯವಿದೆ ಎಂದು ಹೇಳಿದರು.

2019ರ ಜನವರಿಯಿಂದ ಮಾರ್ಚವರೆಗಿನ ಅವಧಿಯಲ್ಲಿ ವಿಶ್ವಾದ್ಯಂತ 1,10,000 ದಡಾರ ಪ್ರಕರಣಗಳು ವರದಿಯಾಗಿದ್ದು,ಇದು 2018ನೇ ಸಾಲಿನ ಇದೇ ಅವಧಿಗೆ ಹೋಲಿಸಿದರೆ ಶೇ.300ರಷ್ಟು ಅಧಿಕವಾಗಿದೆ ಎಂದು ಯುನಿಸೆಫ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News