ಉದ್ದೇಶಪೂರ್ವಕ ಸುಸ್ತಿದಾರರ ಕುರಿತು ಮಾಹಿತಿಯನ್ನು ಆರ್‌ಬಿಐ ಬಹಿರಂಗಗೊಳಿಸಲೇಬೇಕು: ಸುಪ್ರೀಂ ಕೋರ್ಟ್

Update: 2019-04-26 14:09 GMT

ಹೊಸದಿಲ್ಲಿ,ಎ.26: ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪೊಂದರಲ್ಲಿ ಉದ್ದೇಶಪೂರ್ವಕ ಸುಸ್ತಿದಾರರಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಗೊಳಿಸಲು ಆರ್‌ಬಿಐ ಕರ್ತವ್ಯಬದ್ಧವಾಗಿದೆ ಎಂದು ಹೇಳಿದೆ. ಆರ್‌ಬಿಐ ಈ ಮಾಹಿತಿಯನ್ನು ಬಹಿರಂಗಗೊಳಿಸದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ತನ್ನ ಆದೇಶವನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಕ್ರಮವನ್ನು ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

ಮಾಹಿತಿಯನ್ನು ಬಹಿರಂಗಗೊಳಿಸದಿರುವ ಆರ್‌ಬಿಐ ನೀತಿಯು ತನ್ನ 2015ರ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಎತ್ತಿ ಹಿಡಿದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಎಂ.ಆರ್.ಶಾ ಅವರ ಪೀಠವು,ಈ ನೀತಿಯನ್ನು ಹಿಂದೆಗೆದುಕೊಳ್ಳುವಂತೆ ಅದಕ್ಕೆ ಆದೇಶಿಸಿತು.

ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯಡಿ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ನ್ಯಾಯಾಲಯದ ನಿರ್ದೇಶವನ್ನು ಪಾಲಿಸದ್ದಕ್ಕಾಗಿ ಆರ್‌ಬಿಐ ಮತ್ತು ಅದರ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಜರುಗಿಸುವಂತೆ ಕೋರಿ ಮಾಹಿತಿ ಹಕ್ಕು ಕಾರ್ಯಕರ್ತರಾದ ಗಿರೀಶ ಮಿತ್ತಲ್ ಮತ್ತು ಸುಭಾಷಚಂದ್ರ ಅಗರವಾಲ್ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಆರ್‌ಬಿಐ ಮತ್ತು ಪಟೇಲ್ ಅವರು ಉದ್ದೇಶಪೂರ್ವಕವಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿಧೇಯರಾಗಿಲ್ಲ ಎಂದು ಅವರು ಅರ್ಜಿಗಳಲ್ಲಿ ದೂರಿದ್ದರು.

ಕೆಲವು ಬ್ಯಾಂಕುಗಳ ತಪಾಸಣಾ ವರದಿಗಳ ಕುರಿತು ತಾನು ಕೋರಿದ್ದ ಮಾಹಿತಿಯನ್ನು ಒದಗಿಸಲು ಆರ್‌ಬಿಐ ನಿರಾಕರಿಸಿದೆ ಎಂದು ಮಿತ್ತಲ್ ಹೇಳಿದ್ದರು.

2011,ಎಪ್ರಿಲ್‌ನಿಂದ 2015,ಡಿಸೆಂಬರ್‌ವರೆಗಿನ ಐಸಿಐಸಿಐ ಬ್ಯಾಂಕ್,ಎಕ್ಸಿಸ್ ಬ್ಯಾಂಕ್,ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐಗಳ ತಪಾಸಣಾ ವರದಿಗಳ ಪ್ರತಿಗಳು ಸೇರಿದಂತೆ ಕೆಲವು ಮಾಹಿತಿಗಳನ್ನು ಕೋರಿ ಮಿತ್ತಲ್ 2015,ಡಿಸೆಂಬರ್‌ನಲ್ಲಿ ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

ಸಹಾರಾ ಗ್ರೂಪ್ ಆಫ್ ಕಂಪನೀಸ್ ಮತ್ತು ಆಗಿನ ಬ್ಯಾಂಕ್ ಆಫ್ ರಾಜಸ್ಥಾನ ಪ್ರಕರಣದಲ್ಲಿ ಆರ್‌ಬಿಐ ಪತ್ತೆ ಹಚ್ಚಿದ ವಿವಿಧ ಅಕ್ರಮಗಳ ಕುರಿತು ಕಡತ ಟಿಪ್ಪಣಿಗಳೊಂದಿಗೆ ಪ್ರಕರಣ ಕಡತಗಳ ಪ್ರತಿಗಳನ್ನೂ ಅವರು ಕೋರಿದ್ದರು.

ಆದರೆ ಜನವರಿ,2016ರಲ್ಲಿ ಮಾಹಿತಿಯನ್ನು ನೀಡಲು ನಿರಾಕರಿಸಿದ್ದ ಆರ್‌ಬಿಐ,ಆರ್‌ಟಿಐ ಕಾಯ್ದೆಯ ಕಲಂ 8(1)(ಇ) ಮತ್ತು ಆರ್‌ಬಿಐ ಕಾಯ್ದೆಯ ಕಲಂ 45ಎನ್‌ಬಿ ಅಡಿ ಇಂತಹ ಮಾಹಿತಿಗಳನ್ನು ಬಹಿರಂಗಗೊಳಿಸಲು ವಿನಾಯಿತಿಯಿದೆ ಎಂದು ತಿಳಿಸಿತ್ತು.

ಸರ್ವೋಚ್ಚ ನ್ಯಾಯಾಲಯವು 2016ರಲ್ಲಿ ಆರ್‌ಟಿಐ ಕಾಯ್ದೆಯಡಿ ಕೋರಲಾಗಿದ್ದ ಇಂತಹುದೇ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಆದೇಶಿಸಿದ್ದ ಸಂದರ್ಭದಲ್ಲಿ ಆರ್‌ಬಿಐ ಯಾವುದೇ ಬ್ಯಾಂಕಿನೊಂದಿಗೆ ವಿಶ್ವಸನೀಯ ಸಂಬಂಧವನ್ನು ಹೊಂದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು ಎಂದು ಅರ್ಜಿದಾರರು ವಾದಿಸಿದ್ದರು.

ಆರ್‌ಬಿಐ ಪಾರದರ್ಶಕತೆಯನ್ನು ಪ್ರದರ್ಶಿಸಬೇಕು ಮತ್ತು ವ್ಯಕ್ತಿಗತವಾಗಿ ಬ್ಯಾಂಕುಗಳಿಗೆ ಮುಜುಗರವನ್ನುಂಟು ಮಾಡುವ ಮಾಹಿತಿಗಳನ್ನು ಬಚ್ಚಿಡಬಾರದು ಹಾಗೂ ಆರ್‌ಟಿಐ ಕಾಯ್ದೆಯ ನಿಯಮಗಳನ್ನು ಪಾಲಿಸಲು ಮತ್ತು ಕೋರಿದ ಮಾಹಿತಿಗಳನ್ನು ಬಹಿರಂಗಗೊಳಿಸಲು ಅದು ಕರ್ತವ್ಯಬದ್ಧವಾಗಿದೆ ಎಂದು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಆರ್‌ಬಿಐ ಉತ್ತರಗಳು ಸಂಪೂರ್ಣವಾಗಿ ಉಲ್ಲಂಘಿಸಿವೆ ಎಂದೂ ಅರ್ಜಿದಾರರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News