ಚಿಕ್ಕಮಗಳೂರಿನಾದ್ಯಂತ ಎಟಿಎಂಗಳಲ್ಲಿ ಹಣವಿಲ್ಲ !: ಸಾರ್ವಜನಿಕರು, ಪ್ರವಾಸಿಗರ ಪರದಾಟ

Update: 2019-04-28 18:36 GMT

ಚಿಕ್ಕಮಗಳೂರು, ಎ.28: ಜಿಲ್ಲೆಯಲ್ಲಿ ವಾರಾಂತ್ಯದ ದಿನವಾದ ರವಿವಾರ ಎಟಿಎಂಗಳಲ್ಲಿ ಹಣವಿಲ್ಲದೇ ಸಾರ್ವಜನಿಕರು, ಪ್ರವಾಸಿಗರು ಪರಾದಾಡುತ್ತಿದ್ದ ದೃಶ್ಯಗಳು ಜಿಲ್ಲಾದ್ಯಂತ ನಡೆದಿದೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಫೇವರಿಟ್. ಈ ಕಾರಣಕ್ಕೆ ವಾರಾಂತ್ಯದ ದಿನಗಳಲ್ಲಿ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ರವಿವಾರವೂ ಜಿಲ್ಲಾದ್ಯಂತ ಪ್ರವಾಸಿಗರ ಸಂಖ್ಯೆ ಹೆಚ್ಚಳ ಇತ್ತು. ಆದರೆ ಜಿಲ್ಲಾದ್ಯಂತ ಇರುವ ಬಹುತೇಕ ಎಟಿಎಂಗಳಲ್ಲಿ ಹಣ ಇಲ್ಲದೇ ಪ್ರವಾಸಿಗರು ಪರದಾಡಿದ ದೃಶ್ಯಗಳು ಸಾಮಾನ್ಯವಾಗಿದ್ದವು.

ಚಿಕ್ಕಮಗಳೂರು ನಗರದ ಎಸ್‍ಬಿಐ ಎಟಿಎಂ ಹೊರತು ಪಡಿಸಿ ಬಹುತೇಕ ಎಟಿಎಂಗಳಲ್ಲಿ ಹಣ ಇರಲಿಲ್ಲ. ದೂರದ ಊರುಗಳಿಂದ ಬಂದಿದ್ದ ಕೆಲ ಪ್ರವಾಸಿಗರು ಹಣಕ್ಕಾಗಿ ಒಂದು ಎಟಿಎಂನಿಂದ ಮತ್ತೊಂದು ಎಟಿಎಂ ಅಲೆದಾಡುತ್ತಿದ್ದ ದೃಶ್ಯಗಳು ಕಂಡುಬಂದವು. ನಾಲ್ಕೈದು ಎಟಿಎಂಗಳನ್ನು ಸುತ್ತಾಡಿದರೂ, ಹಣ ಇಲ್ಲದೇ ಪರದಾಡುತ್ತಿದ್ದವರು ಎಟಿಎಂಗಳಿರುವ ಜಾಗಗಳ ಬಗ್ಗೆ ವಿಚಾರಿಸುತ್ತಿದ್ದುದು ರವಿವಾರ ಕಂಡುಬಂತು.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರವಿವಾರ ಬಹುತೇಕ ಎಟಿಎಂಗಳ ಬಾಗಿಲುಗಳನ್ನೇ ಬಂದ್ ಮಾಡಲಾಗಿತ್ತು. ಬಾಗಿಲು ತೆರದುಕೊಂಡಿದ್ದ ಕೆಲ ಎಟಿಎಂಗಳ ಮುಂದೆ ಸ್ಥಳೀಯರು, ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತು ಕಾರ್ಡ್‍ಗಳನ್ನು ಸ್ವೈಪ್ ಮಾಡುತ್ತಾ, ಹಣ ಬಾರದಿದ್ದಾಗ ಬ್ಯಾಂಕ್ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಾ ಹಿಂದಿರುಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಹುತೇಕ ಎಟಿಎಂಗಳಲ್ಲಿ ಹಣ ಇಲ್ಲದೇ ಬಾಗಿಲು ಮುಚ್ಚಿದ್ದವೆಂದು, ಹಣ ಇದ್ದ ಕೆಲ ಎಟಿಎಂಗಳಲ್ಲಿ ಕೆಲ ಬ್ಯಾಂಕ್‍ಗಳ ಕಾರ್ಡ್‍ಗಳಿಗೆ ಹಣ ಸಿಕ್ಕರೆ, ಮತ್ತೆ ಕೆಲ ಬ್ಯಾಂಕ್‍ಗಳ ಕಾರ್ಡ್‍ಗಳಿಗೆ ಹಣ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಅವಲತ್ತುಕೊಂಡಿದ್ದಾರೆ. ಜಿಲ್ಲೆಯ ಮೂಡಿಗೆರೆ, ಕಳಸ, ಬಾಳೆಹೊನ್ನೂರು, ಜಯಪುರ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಪಟ್ಟಣಗಳಲ್ಲಿನ ಬಹುತೇಕ ಎಟಿಎಂಗಳು ಖಾಲಿಖಾಲಿಯಾಗಿದ್ದು, ಹಣವಿದ್ದ ಕೆಲ ಎಟಿಎಂಗಳ ಮುಂದೆ ಸಾರ್ವಜನಿಕರು ಕ್ಯೂ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯ ಎಟಿಎಂಗಳದ್ದೂ ಇದೆ ಕಥೆಯಾಗಿತ್ತು ಎನ್ನಲಾಗಿದ್ದು, ಜಿಲ್ಲೆಯ ಕೆಲವೆಡೆ ಕರ್ನಾಟಕ ಬ್ಯಾಂಕ್, ಎಸ್‍ಬಿಐ ಎಟಿಎಂಗಳಲ್ಲಿ ಹಣ ಇತ್ತಾದರೂ ಇಂತಹ ಕಡೆಗಳಲ್ಲಿ ಎಲ್ಲ ಬ್ಯಾಂಕ್‍ಗಳ ಗ್ರಾಹಕರಿಗೂ ಹಣ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಜಿಲ್ಲಾದ್ಯಂತ ರವಿವಾರ ಬಹುತೇಕ ಎಟಿಎಂಗಳು ಖಾಲಿಯಾಗಿದ್ದು, ವಾರದ ರಜೆಯ ಮಜಾ ಪಡೆಯಲು ದೂರದ ಊರುಗಳಿಂದ ಪ್ರವಾಸಕ್ಕೆ ಬಂದವರು ಎಟಿಎಂಗಳಲ್ಲಿ ಹಣವಿಲ್ಲದೇ ಪರದಾಡಿದ್ದರೆ, ಸ್ಥಳೀಯ ಬ್ಯಾಂಕ್ ಗ್ರಾಹಕರು ಹಣಕ್ಕಾಗಿ ಎಟಿಎಂನಿಂದ ಎಟಿಎಂಗಳಿಗೆ ಅಲೆದಾಡುವಂತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News