ಪಕ್ಷಕ್ಕೆ ಜೀವ ತುಂಬಿದ ಕನ್ಹಯ್ಯ: ಸಿಪಿಐ ಶ್ಲಾಘನೆ

Update: 2019-04-29 04:03 GMT

ಬೇಗುಸರಾಯ್, ಎ.29: ಸಿಪಿಐ ಅಭ್ಯರ್ಥಿಯಾಗಿ ಬೇಗುಸರಾಯ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್, ಪಕ್ಷದ ಹೊಸ ಲಾಂಛನ ಹಾಗೂ ಪಕ್ಷಕ್ಕೆ ಹೊಸ ಜೀವ ತುಂಬಿದ ನಾಯಕ ಎಂದು ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಹಾರ ಚುನಾವಣಾ ಉಸ್ತುವಾರಿ ಹೊಣೆ ಹೊಂದಿರುವ ಕೆ.ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಬೇಗುಸರಾಯ್ ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ.

ಕನ್ಹಯ್ಯ ನೇತಾರರಾಗಿ ಬೆಳೆಯುತ್ತಿರುವುದು ಎಡಪಕ್ಷಗಳ ಪುನರುಜ್ಜೀವನದ ಸಂಕೇತ. ಅವರ ಗೆಲುವು ಖಚಿತ ಹಾಗೂ ಇದು ಬಿಹಾರದಲ್ಲಿ ಹೊಸ ರಾಜಕೀಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಅವರು ಹೇಳಿದ್ದಾರೆ.

"ದೇಶವನ್ನು ನಾಶಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಸಮಾಜವನ್ನು ಅರಾಜಕತೆಗೆ ತಳ್ಳಿದ್ದಾರೆ. ಸತ್ಯ ಹೇಳುವುದು ಅಥವಾ ಕೆಳವರ್ಗದ ಜನರ ಹಕ್ಕುಗಳ ಬಗ್ಗೆ ಮಾತನಾಡುವುದನ್ನು ರಾಷ್ಟ್ರವಿರೋಧಿ ಎಂದು ಪರಿಗಣಿಸಲಾಗುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು" ಎಂದು ಅವರು ಹೇಳಿದರು.

ಕನ್ಹಯ್ಯ ಅವರ ಚುನಾವಣಾ ಪ್ರಚಾರದ ಟ್ಯಾಗ್‌ಲೈನ್, "ನೇತಾ ನಹಿ, ಬೇಟಾ" ಎಂದಾಗಿದ್ದು, ಇದು ಎಲ್ಲರ ಜತೆಗಿನ ಮತ್ತು ಮಾನವೀಯತೆಯ ಸಂಬಂಧವನ್ನು ಬಿಂಬಿಸುತ್ತದೆ. ಅವರು ಎಲ್ಲ ಹೃದಯಗಳನ್ನು ಗೆದ್ದಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಕೆ.ನಾರಾಯಣ ಬಣ್ಣಿಸಿದ್ದಾರೆ.

ಬಂಡವಾಳಶಾಹಿಗಳ ಪ್ರಭಾವ ಹೆಚ್ಚಿ ಪಕ್ಷ ಅಸಂಖ್ಯಾತ ಸವಾಲುಗಳನ್ನು ಎದುರಿಸುತ್ತಿರುವ ಸನ್ನಿವೇಶದಲ್ಲಿ, ಹೊಸ ಪೀಳಿಗೆಯ ಗೌರವಾನ್ವಿತ ನಾಯಕರಾಗಿ  ಕನ್ಹಯ್ಯ ಪಕ್ಷದ ಸಿದ್ಧಾಂತಗಳನ್ನು ಮುಂದಕ್ಕೆ ಒಯ್ಯಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

"ಜನರಿಗೆ ಮನದಟ್ಟು ಮಾಡುವ ಅವರ ವಾಕ್ಚಾತುರ್ಯ ಮತ್ತು ಜನಸಾಮಾನ್ಯರ ಸಮಸ್ಯೆಗಳ ಬಗೆಗಿನ ಮತ್ತು ದೇಶದ ಅಗತ್ಯತೆಗಳ ಬಗೆಗಿನ ಆಳವಾದ ಜ್ಞಾನ ಅವರನ್ನು ಪಕ್ಷದ ಮುಂಚೂಣಿ ನಾಯಕ ಸಾಲಿನಲ್ಲಿ ನಿಲ್ಲಿಸುತ್ತದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News