ಪ್ರಧಾನಿ ಮೋದಿ, ಶಾ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಳ್ಳದ ಚು.ಆಯೋಗ: ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್

Update: 2019-04-29 06:35 GMT

    ಹೊಸದಿಲ್ಲಿ, ಎ.29: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ಹಲವು ಬಾರಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರೂ ಈ ತನಕ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ ನಿಷ್ಕ್ರೀಯವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ ನ ಮೆಟ್ಟಿಲೇರಿದೆ. ಅರ್ಜಿ ಮಾನ್ಯ ಮಾಡಿರುವ ಸುಪ್ರೀಂಕೋರ್ಟ್ ಮಂಗಳವಾರ ಅರ್ಜಿಯ ವಿಚಾರಣೆ ನಡೆಸಲಿದೆ.

  ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಸಲ್ಲಿಸಲಾಗಿರುವ ದೂರಿನ ಕುರಿತು 24 ಗಂಟೆಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್ ಸರ್ವೋಚ್ಚ ನ್ಯಾಯಾಲಯಕ್ಕೆ ವಿನಂತಿಸಿದ್ದಾರೆ.

 ಚುನಾವಣಾ ಆಯೋಗ ಕಳೆದ ಮೂರು ವಾರಗಳಿಂದ ಕಾಂಗ್ರೆಸ್ ನೀಡಿದ ಯಾವುದೇ ದೂರಿನ ಬಗ್ಗೆ ಕ್ರಮ ಕೈಗೊಂಡಿಲ್ಲ. ಮತಧ್ರುವೀಕರಣಗೊಳಿಸಲು ಚುನಾವಣಾ ರ್ಯಾಲಿಗಳಲ್ಲಿ ಪ್ರಧಾನಿ ಮೋದಿ ಹಾಗೂ ಶಾ ‘ದ್ವೇಷ ಭಾಷಣ’ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ನಿಷೇಧ ಹೇರಿದ ಹೊರತಾಗಿಯೂ ಪ್ರಚಾರ ರ್ಯಾಲಿಗಳಲ್ಲಿ ದೇಶದ ಸಶಸ್ತ್ರ ಪಡೆಗಳ ಕಾರ್ಯಾಚರಣೆಯನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೇವ್ ಉಲ್ಲೇಖಿಸಿದ್ದಾರೆ.

ಎ.23 ರಂದು ಗುಜರಾತ್‌ನಲ್ಲಿ ಮತದಾನ ಮಾಡಿದ್ದ ಪ್ರಧಾನಿ ಆ ಬಳಿಕ ರೋಡ್‌ಶೋ ಶೈಲಿಯ ಕಾರ್ಯಕ್ರಮ ಮಾಡಿದ್ದರು ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಈ ವರ್ಷಾರಂಭದಲ್ಲಿ ನಡೆದ ಪುಲ್ವಾಮಾ ದಾಳಿ ಹಾಗೂ ಬಾಲಾಕೋಟ್ ವಾಯು ದಾಳಿಯನ್ನು ಚುನಾವಣಾ ವಿಚಾರವಾಗಿ ರಾಜಕೀಯ ಪಕ್ಷಗಳು ಬಳಸಬಾರದು ಎಂದು ಚುನಾವಣಾ ಆಯೊಗ ಸ್ಪಷ್ಟವಾಗಿ ಸೂಚನೆ ನೀಡಿತ್ತು. ಆಯೋಗದ ಸೂಚನೆಯ ಹೊರತಾಗಿಯೂ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಪದೇ ಪದೇ ಬಿಜೆಪಿ ಆಡಳಿತ ಅವಧಿಯಲ್ಲಿ ಸಶಸ್ತ್ರ ಪಡೆಗಳು ನಡೆಸಿರುವ ಸೇನಾ ಕಾರ್ಯಾಚರಣೆಯನ್ನು ಚುನಾವಣಾ ರ್ಯಾಲಿಗಳಲ್ಲಿ ಪ್ರಸ್ತಾವಿಸುತ್ತಾ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News