ಬೆಟ್ಟಗೇರಿ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ಗ್ರಾಹಕರ ಪರದಾಟ

Update: 2019-04-29 12:41 GMT

ಮಡಿಕೇರಿ ,ಎ.29: ಬೆಟ್ಟಗೇರಿ ಗ್ರಾಮ ಪಂಚಾಯತ್ ಪಕ್ಕದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ ಕಾರಣ ಅನ್ನಭಾಗ್ಯ ಯೋಜನೆಯಡಿ ನೀಡುವ ಪಡಿತರ ಸಾಮಾಗ್ರಿ ಪಡೆಯಲು ಗ್ರಾಹಕರು ಪರದಾಡುವಂತಹ ಪರಿಸ್ಥಿತಿ ಸೋಮವಾರ ನಿರ್ಮಾಣವಾಯಿತು.

ಪಡಿತರ ಪಡೆಯಲು ಬಯೋಮೆಟ್ರಿಕ್ ಪದ್ಧತಿ ಅಳವಡಿಸಲಾಗಿದ್ದು, ಸರ್ವರ್ ದೋಷದಿಂದ ಗ್ರಾಹಕರು ಬೆಳಿಗ್ಗೆಯಿಂದ ಸಂಜೆಯವರೆಗೆ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಅಲ್ಲದೆ ಬಹುತೇಕರು ಪಡಿತರ ಸಿಗದೆ ವಾಪಾಸ್ಸಾದರು. ವಯೋವೃದ್ಧರು, ಮಹಿಳೆಯರು ಸುಡು ಬಿಸಿಲಿನಲ್ಲಿ ಸರತಿಯಲ್ಲಿ ನಿಂತು ಬೇಸತ್ತು ಮನೆಗಳಿಗೆ ಮರಳುತ್ತಿದ್ದ ದೃಶ್ಯ ಕಂಡು ಬಂತು.

ಬೆಟ್ಟಗೇರಿ, ಅವಂದೂರು, ಅರ್ವತ್ತೊಕ್ಲು, ಹೆರವನಾಡು, ಪಾಲೂರು ಗ್ರಾಮದ ನೂರಾರು ಕುಟುಂಬಕ್ಕೆ ಇಲ್ಲಿ ಪಡಿತರ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ. ಆದರೆ ಪ್ರತಿದಿನ ಒಂದಲ್ಲ ಒಂದು ಕಾರಣ ನೀಡಿ ಪಡಿತರ ಸಾಮಾಗ್ರಿಗಳನ್ನು ಸಿಬ್ಬಂದಿಗಳು ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗೆ ಕಾದರೂ ಸಾಮಾಗ್ರಿಗಳು ಸಿಗಲ್ಲ. ಪಡಿತರಕ್ಕಾಗಿ ಕಾಯಲು 2 ದಿನದ ಕೂಲಿ ವ್ಯರ್ಥವಾಗುತ್ತಿದೆ. ಆಯಾ ತಿಂಗಳ ಪಡಿತರ ಆಯಾ ತಿಂಗಳಲ್ಲಿಯೇ ಪಡೆಯಬೇಕು. ಇಲ್ಲದೆ ಹೋದಲ್ಲಿ ಪಡಿತರದಿಂದ ವಂಚಿತವಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಬೆಳಗ್ಗೆ 9.30ರ ನಂತರ ಪಡಿತರ ಸಾಮಾಗ್ರಿಗಳನ್ನು ನೀಡಲಾಗುತ್ತದೆ, ಆದರೆ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಮಾತ್ರ ಸರ್ವರ್ ಸರಿ ಇಲ್ಲ, ಇಂಟರ್ ನೆಟ್ ಇಲ್ಲ ಎಂದು ಹೇಳಿಕೊಂಡು ಪಕ್ಕದ ಬ್ಯಾಂಕ್‍ನಲ್ಲಿ ಕುಳಿತಿರುತ್ತಾರೆ. ಕೆಲವೊಮ್ಮೆ 5 ನಿಮಿಷ ಬಂದೆ ಎಂದು ಹೇಳಿ ಹೋದವರು ಮತ್ತೆ ಮರಳುತ್ತಿಲ್ಲ ಎಂದು  ಹೆರವನಾಡು ಗ್ರಾಮಸ್ಥ ಗಣೇಶ್ ದೂರಿದರು. ತಕ್ಷಣ ಆಹಾರ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News