ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ಹಿನ್ನೆಲೆ: ಕೊಡಗಿನಲ್ಲೂ ಭದ್ರತೆ ಬಿಗಿ- ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

Update: 2019-04-29 13:20 GMT

ಮಡಿಕೇರಿ, ಎ.29 : ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಗುಪ್ತದಳ ಇಲಾಖೆ ಎಲ್ಲಾ ರಾಜ್ಯಗಳು ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದು, ಕೊಡಗು ಜಿಲ್ಲೆಯಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. 

ರಾಷ್ಟ್ರೀಯ ತನಿಖಾ ದಳ ತಮಿಳುನಾಡು, ಕೇರಳ, ಕಾಸರಗೋಡು ಹಾಗೂ ಕಣ್ಣೂರಿನಲ್ಲಿ ಕೆಲವು ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿದ್ದು, ಕೇರಳ ರಾಜ್ಯದ ಗಡಿಯಲ್ಲಿರುವ ಕೊಡಗು ಜಿಲ್ಲೆಯಲ್ಲೂ ಜಿಲ್ಲಾ ಪೊಲೀಸರು ಎಸ್‍ಪಿ ಡಾ.ಸುಮನ್ ಡಿ.ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. 

ಗುಪ್ತದಳ, ಆಂತರಿಕ ಭದ್ರತಾ ವಿಭಾಗ ಹಾಗೂ ವಿಶೇಷ ದಳ ಕೂಡ ಜಿಲ್ಲೆಯ ಮೇಲೆ ನಿಗಾ ಇಟ್ಟಿವೆ. ಜಿಲ್ಲೆಯ ಜನ ಜಂಗುಳಿ ಪ್ರದೇಶ, ಪ್ರವಾಸಿ ತಾಣಗಳು, ಬಸ್ ನಿಲ್ದಾಣಗಳು, ದೇವಾಲಯ, ಮಸೀದಿ, ಚರ್ಚ್‍ಗಳ ಬಳಿಯೂ ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನದಳ ಜಂಟಿಯಾಗಿ ತಪಾಸಣೆ ನಡೆಸುತ್ತಿವೆ.

ಮಡಿಕೇರಿ ನಗರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದು, ಪ್ರಮುಖ ಪ್ರವಾಸಿತಾಣ ರಾಜಾಸೀಟು, ಜಿಲ್ಲಾಡಳಿತ ಭವನ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಪ್ರಮುಖ ಶಾಪಿಂಗ್ ಮಾಲ್, ಮಾರುಕಟ್ಟೆ ಆವರಣ ಮತ್ತಿತರ ಕಡೆಗಳಲ್ಲಿ ಬಾಂಬ್ ನಿಷ್ಕ್ರಿಯದಳ ಮತ್ತು ಶ್ವಾನದಳ ತಪಾಸಣೆ ನಡೆಸುತ್ತಿದ್ದು, ಸಾರ್ವಜನಿಕರಲ್ಲಿ ಸುಭದ್ರತೆಯ ವಿಶ್ವಾಸ ಮೂಡಿಸುತ್ತಿದ್ದಾರೆ.   

ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಜಲಾಶಯಕ್ಕೆ ಭದ್ರತೆಯನ್ನು ನೀಡಲಾಗಿದೆ. ಜಿಲ್ಲೆಗೆ ಬರುವ ಮತ್ತು ಹೊರ ಹೋಗುವ ಎಲ್ಲಾ ವಾಹನಗಳನ್ನು ಜಿಲ್ಲೆಯ ಗಡಿಗಳಲ್ಲಿರುವ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಕೂಡ ಯಾವುದೇ ಗಾಳಿಸುದ್ದಿ ಹಾಗೂ ಊಹಾಪೋಹಗಳಿಗೆ ಕಿವಿಗೊಡದೆ ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News