‘ಯೇತಿ ಹೆಜ್ಜೆ ಗುರುತು’ಗಳನ್ನು ಪತ್ತೆಹಚ್ಚಿದ ಭಾರತೀಯ ಸೇನೆಯ ತಂಡ

Update: 2019-04-30 07:32 GMT

ಹೊಸದಿಲ್ಲಿ, ಎ.30: ತನ್ನ ಪರ್ವತಾರೋಹಿಗಳ ತಂಡವೊಂದು ಹಿಮ ಮಾನವ-ಯೇತಿ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿರುವುದಾಗಿ ಭಾರತೀಯ ಸೇನೆ ಹೇಳಿದೆ.

“ಎಪ್ರಿಲ್ 9, 2019ರಂದು 32 X 15 ಇಂಚು ಗಾತ್ರದ ಯೇತಿಯದ್ದೆಂದು ನಂಬಲಾದ ಹೆಜ್ಜೆ ಗುರುತುಗಳು ನೇಪಾಳದ ಮಕಲು ಮೂಲ ಶಿಬಿರದ ಬಳಿ ಪತ್ತೆಯಾಗಿವೆ. ಈ ನಿಗೂಢ ಹಿಮ ಮಾನವ ಈ ಹಿಂದೆ ಮಕಲು-ಬರುನ್ ರಾಷ್ಟ್ರೀಯ ಉದ್ಯಾನವನದಲ್ಲಿ ಮಾತ್ರ ಪತ್ತೆಯಾಗಿತ್ತು,'' ಎಂದು ಸೇನೆಯ  ಸಾರ್ವಜನಿಕ ಮಾಹಿತಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರು ಸೋಮವಾರ ಟ್ವೀಟ್ ಮಾಡಿದ್ದಾರೆ.

ಯೇತಿಯ ಹೆಜ್ಜೆ ಗುರುತುಗಳ ಫೋಟೋಗಳು ಹಾಗೂ ವೀಡಿಯೋಗಳ ಆಧಾರದಲ್ಲಿ ಈ ಹೇಳಿಕೆ ನೀಡಲಾಗಿದೆ ಎಂದೂ ಸೇನಾ ಮೂಲಗಳು ತಿಳಿಸಿವೆ

ನೇಪಾಳಿ ಜನಪದದಲ್ಲಿ ತಿಳಿಸಿದಂತೆ ಯೇತಿ ಒಂದು ಕೋತಿಯಾಕೃತಿಯ ಬೃಹತ್ ಜೀವಿಯಾಗಿದ್ದು ಹಿಮಾಲಯ, ಮಧ್ಯ ಏಷ್ಯಾ ಮತ್ತು ಸೈಬೀರಿಯಾದಲ್ಲಿ ವಾಸವಾಗಿವೆ ಎಂದು ನಂಬಲಾಗಿದೆ.

ಯೇತಿಯ ಹೆಜ್ಜೆ ಗುರುತುಗಳ ಬಗ್ಗೆ 10 ದಿನಗಳ ಹಿಂದೆಯೇ ಮಾಹಿತಿ ದೊರಕಿದ್ದರೂ ಅದನ್ನು ತಡೆ ಹಿಡಿಯಲಾಗಿತ್ತು. ಆದರೆ ಫೋಟೋ ದಾಖಲೆಗಳು ಈ ಹಿಂದಿನ ಯೇತಿ ಕುರಿತಾದ ಮಾಹಿತಿಗಳಿಗೆ ತಾಳೆಯಾಗುತ್ತಿರುವುದರಿಂದ ಮಾಹಿತಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸೇನೆ ತಿಳಿಸಿದೆ.

ಇದೀಗ ಲಭ್ಯ ಪುರಾವೆಗಳನ್ನು ತಜ್ಞರ ಪರಾಮರ್ಶೆಗೆ ನೀಡಲಾಗಿದೆ.

ಯೇತಿಗಳ ಅಸ್ತಿತ್ವದ ಕುರಿತು ಸಾಕಷ್ಟು ಊಹಾಪೋಹಗಳಿದ್ದು ಈ ಹಿಂದೆ ಯೇತಿಯನ್ನು  ನೋಡಿದ್ದಾಗಿ ಕೆಲವರು ಹೇಳಿದ್ದರಾದರೂ ಅದು ಕರಡಿಯಾಗಿರಬಹುದೆಂದೂ ಹೇಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News