ಶಿವ ಸೇನೆಯ ಬುರ್ಖಾ ನಿಷೇಧ ಬೇಡಿಕೆಗೆ ಉವೈಸಿ ತಿರುಗೇಟು

Update: 2019-05-02 07:31 GMT

ಹೊಸದಿಲ್ಲಿ: ಶ್ರೀಲಂಕಾದಲ್ಲಿ ಉಗ್ರ ದಾಳಿಯ ನಂತರ ಬುರ್ಖಾ ನಿಷೇಧಗೊಳಿಸಿದ ಮಾದರಿಯಲ್ಲಿಯೇ ಭಾರತದಲ್ಲೂ ಬುರ್ಖಾ ಹಾಗೂ ಮುಖ ಮುಚ್ಚುವಂತೆ ಬಟ್ಟೆ ಧರಿಸುವುದಕ್ಕೆ ನಿಷೇಧ ಹೇರಬೇಕೆಂದು ಶಿವ ಸೇನೆ ಕೇಂದ್ರ ಸರಕಾರಕ್ಕೆ ಆಗ್ರಹಿಸಿರುವುದನ್ನು ಕಟುವಾಗಿ  ಟೀಕಿಸಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾಸುದ್ದೀನ್ ಓವೈಸಿ, “ಉಗ್ರವಾದದ ವಿರುದ್ಧದ ಹೋರಾಟ ವಸ್ತ್ರಗಳ ಬಗ್ಗೆಯಲ್ಲ, ಬದಲಾಗಿ ಮನಃಸ್ಥಿತಿಯ ಬಗ್ಗೆಯಾಗಿದೆ,'' ಎಂದುಹೇಳಿದ್ದಾರೆ.

“ಮಹಿಳೆಯರು ಜೀನ್ಸ್ ಧರಿಸಬಾರದೆಂದು ಈ ಹಿಂದೆ ಹೇಳಿದ ವ್ಯಕ್ತಿಗಳು ಇವರೇ ಆಗಿದ್ದಾರೆ. ಭಾರತದಲ್ಲಿ ಮಹಿಳೆಯರು ಗೂಂಘಟ್ (ಸೀರೆಯ ಸೆರಗಿನಿಂದ ತಲೆ ಹಾಗು ಮುಖ ಮುಚ್ಚುವುದು) ಹಾಕುತ್ತಾರೆ. ಅದನ್ನು ಕೂಡ ಅವರು ನಿಷೇಧಿಸುತ್ತಾರೆಯೇ ?'' ಎಂದು ಓವೈಸಿ ಪ್ರಶ್ನಿಸಿದರು.
 
“ನಾವು ಧರಿಸುವ ಬಟ್ಟೆಗೂ ಉಗ್ರವಾದಕ್ಕೂ ನಂಟು ಕಲ್ಪಿಸುವುದಾದರೆ ಸಾಧ್ವಿ ಪ್ರಜ್ಞಾ ಧರಿಸಿರುವುದಾದರೂ ಏನನ್ನು ?,''ಎಂದು ಅವರು ಪ್ರಶ್ನಿಸಿದ್ದಾರೆ. ಚುನಾವಣೆಗಳು ನಡೆಯುತ್ತಿರುವ ವೇಳೆ ಶಿವ ಸೇನೆ ಜನರನ್ನು ಧ್ರುವೀಕರಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರಲ್ಲದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಾಗಿ ಚುನಾವಣಾ ಆಯೋಗದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
 
ಅವರು (ಶಿವ ಸೇನೆ) ಬುರ್ಖಾ ಧರಿಸುವುದು ಅವರವರ ಆಯ್ಕೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಓದಬೇಕು. ನಾವು ಏನನ್ನೂ-ಬುರ್ಖಾ, ಜೀನ್ಸ್ ಧರಿಸಬಹುದು, ಎಲ್ಲರಿಗೂ ಅವರ ಆಯ್ಕೆಯೆಂಬುದಿರುತ್ತದೆ, ಇದು ನಮ್ಮ ಮೂಲಭೂತ ಹಕ್ಕು,'' ಎಂದು ಓವೈಸಿ ಹೇಳಿದರು.
 
ಶಿವಸೇನೆಯ ಮುಖವಾಣಿ ಸಾಮ್ನಾ ಒಂದು `ಪೋಪಟ್ ಮಾಸ್ಟರ್' ಎಂದು ಬಣ್ಣಿಸಿದ  ಓವೈಸಿ ``ಅದರ ಸಂಪಾದಕೀಯ `ಪೇಯ್ಡ್ ನ್ಯೂಸ್' ಅಡಿಯಲ್ಲಿ ಬರುತ್ತದೆ,ಇದು ನೀತಿ ಸಂಹಿತೆಯ  ಉಲ್ಲಂಘನೆ, ಚುನಾವಣಾ ಆಯೋಗ ಇದನ್ನು ಗಮನಿಸಬೇಕು,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News