ನಾಮಪತ್ರ ವಾಪಸ್ ಪಡೆಯಲು ಯಾರಿಂದಲೂ ನಯಾ ಪೈಸೆ ಲಂಚ ಪಡೆದಿಲ್ಲ: ಮುದ್ದಹನುಮೇಗೌಡ

Update: 2019-05-02 15:03 GMT

ಬೆಳ್ತಂಗಡಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ಕಾರಣದಿಂದಾಗಿ ತುಮಕೂರು ಕ್ಷೇತ್ರದಲ್ಲಿ ಟಿಕೇಟು ನಿರಾಕರಿಸಲ್ಪಟ್ಟರೂ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇತರ ಮುಖಂಡರುಗಳ ಮಾತಿಗೆ ಬೆಲೆ ನೀಡಿ ಪಕ್ಷೇತರನಾಗಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆದುಕೊಂಡು ಸಕ್ರಿಯವಾಗಿ ಚುನಾವಣೆಯಲ್ಲಿ ಭಾಗವಹಿಸಿದ್ದೇನೆ, ಇದಕ್ಕಾಗಿ ಯಾರಿಂದಲೂ ನಯಾಪೈಸೆ ಪಡೆದಿಲ್ಲ, ಈ ಬಗ್ಗೆ ಅಪಪ್ರಚಾರಗಳನ್ನು ಮಾಡುತ್ತಿರುವವರಿಗೆ ದೇವರು ಇನ್ನಾದರೂ ಒಳ್ಳೆಯ ಬುದ್ದಿ ನೀಡಲಿ ಎಂದು ದೇವರಲ್ಲಿ ಪ್ರಾರ್ಧಿಸಿದ್ದೇನೆ ಎಂದು ತುಮಕೂರು ಸಂಸದ ಮುದ್ದುಹನುಮೇಗೌಡ ಅವರು ಹೇಳಿದರು.

ಅವರು ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಧಸ್ವಾಮಿಯ ದರ್ಶನಪಡೆದು ಪ್ರಾರ್ಧನೆ ಸಲ್ಲಿಸಿದ ಬಳಿಕ ಶ್ರೀಕ್ಷೇತ್ರದ ಮುಂಭಾಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಚುನಾವಣೆ ಮುಗಿದ ಬಳಿಕ ಯಾರೋ ಇಬ್ಬರ ದೂರವಾಣಿಯ ಸಂಭಾಷಣೆಯನ್ನು ಇಟ್ಟುಕೊಂಡು ತಾನು ನಾಮಪತ್ರ ಹಿಂಪಡೆಯಲು ಕೋಟ್ಯಾಂತರ ಹಣ ಪಡೆದಿರುವುದಾಗಿ ಮಾಧ್ಯಮಗಳ ಮೂಲಕವಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕವಾಗಿ ಅಪಪ್ರಚಾರ ನಡೆಯುತ್ತಿದ್ದು ಇದು ತುಂಬಾ ನೋವನ್ನು ತಂದಿದೆ. ಅದರಿಂದಾಗಿ ರಾಜ್ಯದ ಜನತೆಗೆ ಸತ್ಯ ಏನೆಂದು ತಿಳಿಸುವ ಅಗತ್ಯವಿತ್ತು. ಅದಕ್ಕಾಗಿ ಇದೀಗ ದೇಶದ ಜನರು ಪಾವಿತ್ರತೆಯಿಂದ ನೋಡುವ ಶ್ರೀಕ್ಷೇತ್ರಕ್ಕೆ ಬಂದು ದೇವರ ಮುಂದೆ ಪ್ರಾರ್ಧನೆ ಸಲ್ಲಿಸಿ ಇದನ್ನು ಹೇಳುತ್ತಿದ್ದೇನೆ ಎಂದ ಅವರು ತಾನು ನ್ಯಾಯಾಂಗದಲ್ಲಿ ಕೆಲಸಮಾಡಿ ರಾಜಕೀಯಕ್ಕೆ ಬಂದವ ಆ ನೈತಿಕತೆಯನ್ನು ಈಗಲೂ ಇಟ್ಟುಕೊಂಡಿದ್ದೇನೆ, ಅದನ್ನು ಹಾಳು ಮಾಡಲು ರಾಜಕೀಯವಾಗಿ ಮುಗಿಸಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿಯೇ ಇದೆಲ್ಲ ನಡೆಯುತ್ತಿದೆ ಎಂದು  ಆರೋಪಿಸಿದರು. 

ಕಾಂಗ್ರೆಸ್ ಪಕ್ಷದ ಎಲ್ಲ ಸಂಸದರುಗಳಿಗೂ ಈ ಬಾರಿ ಮತ್ತೆ ಚುನಾವಣೆಗೆ ಟಿಕೇಟು ನೀಡಲಾಗಿತ್ತು. ಸಂಸತ್ತಿನಲ್ಲಿ ಹಾಗೂ ಜನರ ನಡುವೆ ಕಳೆದ ಐದುವರ್ಷಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಾ ಇದ್ದೆ. ಸಂಸತ್ತಿಲ್ಲಿ ರಾಜ್ಯದ, ಜನರ ಧ್ವನಿಯಾಗಿ ಕೆಲಸ ಮಾಡಿದ್ದೆ ಆದರೆ ಚುನಾವಣೆಯಲ್ಲಿ ಮೈತ್ರಿಯ ಕಾರಣಕ್ಕೆ ಟಿಕೇಟು ನಿರಾಕರಿಸಿದಾಗ ನೋವಾಗಿತ್ತು, ತಾನು ಮೈತ್ರಿಗಾಗಿ ಬಲಿಪಶುವಾಗಿದ್ದೇನೆ ಎಂದು ಭಾವಿಸಿದ್ದೆ ಅದರಿಂದಾಗಿ ಪಕ್ಷೇತ್ರ ಅಭ್ಯರ್ಧಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಆದರೆ ಬಳಿಕ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿಯವರು, ಎಐಸಿಸಿ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇತರೆ ನಾಯಕರುಗಳು ಮೈತ್ರಿಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು, ರಾಜ್ಯದ ಹಾಗೂ ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ಹಿಂಪಡೆದಿದ್ದೇನೆ ಹಾಗೂ ಮೈತ್ರಿ ಅಭ್ಯರ್ಧಿಯ ಪರವಾಗಿ ಚುನಾವಣಾ ಪ್ರಚಾರದಲ್ಲಿಯೂ ಭಾಗವಹಿಸಿದ್ದೇನೆ. ಆದರೆ ಆಗ ಇರದಿದ್ದ ಆರೋಪವೊಂದನ್ನು ಯಾರೋ ಅಪರಿಚಿತ ವ್ಯಕ್ತಿಗಳ ಮಾತನ್ನು ಇಟ್ಟುಕೊಂಡು ಇಂತಹ ಆರೋಪಹೊರಿಸಿರುವುದು ನೋವನ್ನು ತಂದಿದೆ. ಇದರ ಬಗ್ಗೆ ಯಾವುದೇ ತನಿಖೆಯನ್ನು ನಡೆಯದೆ ನಿರಂತರ ಅಪಪ್ರಚಾರ ಮಾಡಲಾದ ಹಿನ್ನಲೆಯಲ್ಲಿ ಸತ್ಯವನ್ನು ಜನರ ಮುಂದಿಡಲು ಶ್ರೀ ಮಂಜುನಾಧೇಶ್ವರ ಸ್ವಾಮಿಯ ಸನ್ನಿಧಿಗೆ ಬಂದಿದ್ದೇನೆ ಎಂದರು. 

ತುಮಕೂರಿನಲ್ಲಿ ದೇವೇಗೌಡರು ಗೆಲುವನ್ನು ಪಡೆಯಲಿದ್ದಾರೆಯೇ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ನೀಡದ ಅವರು ಆಬಗ್ಗೆ ಇಲ್ಲಿ ಮಾತನಾಡುವುದಿಲ್ಲ ಎಂದರು ನಾವೆಲ್ಲ ಮೈತ್ರಿ ಅಭ್ಯರ್ಧಿಯಪರವಾಗಿ ಕೆಲಸ ಮಾಡಿದ್ದೇವೆ ಎಂದಷ್ಟೇ ಹೇಳಿದರು. 

ನಾನು ಸದಾ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ: 
ನಾನು ಕಾಂಗ್ರೆಸ್ ಕಾರ್ಯಕರ್ತ ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ ಪಕ್ಷದ ನಾಯಕರುಗಳ ಮನವಿಯಂತೆ ನಾಮಪತ್ರ ಹಿಂಪಡೆದಿದ್ದೇನೆ. ಈ ಆರೋಪ ಎದುರಾದ ಸಂದರ್ಭದಲ್ಲಿ ಪಕ್ಷ ಬೆಂಬಲಕ್ಕೆ ನಿಂತಿದೆ. ಪಕ್ಷದ ಸೂಚನೆಯಂತೆ ಕೆಲಸ ಮಾಡಿದ್ದೇನೆ ಮುಂದೆಯೂ ಕಾಂಗ್ರೆಸ್ಸಿಗನಾಗಿಯೇ ಮುಂದುವರಿಯುತ್ತೇನೆ. 
- ಮುದ್ದಹನುಮೇಗೌಡ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News