ರಾಜ್ಯದ 63 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ಪ್ರಕಟ

Update: 2019-05-02 12:21 GMT

ಬೆಂಗಳೂರು, ಮೇ 2: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಮೇ 29 ರಂದು ಚುನಾವಣೆ ನಡೆಯಲಿದೆ.

ಮೊದಲ ಹಂತದಲ್ಲಿ ಈಗಾಗಲೇ ಚುನಾವಣೆ ನಡೆದಿದ್ದು, ಎರಡನೆ ಹಂತದಲ್ಲಿ ಮಾರ್ಚ್ 2019 ರಿಂದ ಜುಲೈ 2019ರ ಅವಧಿಗೆ ಮುಕ್ತಾಯವಾಗುವ ಒಟ್ಟು 103 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಿದೆ. ಆದರೆ, ವಿವಿಧ ಕಾರಣಗಳಿಂದ ಹೈಕೋರ್ಟ್‌ನಲ್ಲಿರುವ 39 ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಉಳಿದ 63 ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಚಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಷ್ಟು ಕ್ಷೇತ್ರಗಳಿಗೆ ಚುನಾವಣೆ: ಎರಡನೆ ಹಂತದಲ್ಲಿ ಒಟ್ಟು 8 ನಗರಸಭೆಗಳು, 33 ಪುರಸಭೆಗಳು ಹಾಗೂ 22 ಪಟ್ಟಣ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. ಹಾಗೂ 10 ಕ್ಷೇತ್ರಗಳ ತಾಲೂಕು ಪಂಚಾಯತ್ ಸದಸ್ಯ ಸ್ಥಾನಗಳಿಗೆ, ಗ್ರಾಮ ಪಂಚಾಯತ್ ಗಳಲ್ಲಿ ತೆರವುಗೊಂಡಿರುವ 202 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಮೇ 9 ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಮೇ 16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿರುತ್ತದೆ. ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 20 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಮೇ 29 ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೂ ಮತದಾನ ನಡೆಯಲಿದೆ ಎಂದು ಅವರು ವಿವರಿಸಿದರು. ಮರು ಮತದಾನ ಅವಶ್ಯಕತೆಯಿದ್ದಲ್ಲಿ ಮೇ 30 ರಂದು ನಡೆಯಲಿದ್ದು, ಮೇ 31 ರಂದು ಬೆಳಗ್ಗೆ 8 ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಮೇ 31 ರವರೆಗೂ ನೀತಿ ಅನ್ವಯವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಚುನಾವಣಾ ವೆಚ್ಚ ಮಿತಿ: ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಯಸುವ ಅಭ್ಯರ್ಥಿಗಳಿಗೆ ಗರಿಷ್ಠ ಮಿತಿಯನ್ನು ನಿಗದಿ ಮಾಡಲಾಗಿದೆ. ಅದರಂತೆ ನಗರಸಭೆಗೆ ಸ್ಪರ್ಧಿಸುವವರು 2 ಲಕ್ಷ, ಪುರಸಭೆ ಒಂದೂವರೆ ಲಕ್ಷ ಹಾಗೂ ಪಟ್ಟಣ ಪಂಚಾಯತ್ ಗೆ ಸ್ಪರ್ಧಿಸುವ ಅಭ್ಯರ್ಥಿಗಳು ಒಂದು ಲಕ್ಷ ರೂ.ಗಳನ್ನು ಅಷ್ಟೇ ಖರ್ಚು ಮಾಡಬೇಕು ಎಂದು ಚುನಾವಣಾ ಆಯೋಗ ನಿರ್ದೇಶಿಸಿದೆ ಎಂದರು.

1646 ಮತಗಟ್ಟೆಗಳು: ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 1646 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 7.37 ಲಕ್ಷ ಪುರುಷರು ಹಾಗೂ 7.36 ಮಹಿಳೆಯರು, 181 ಇತರರು ಸೇರಿ 14.74 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟಾರೆ 8230 ಮತಗಟ್ಟೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, 1998 ಮತಯಂತ್ರಗಳು ಹಾಗೂ ಕಂಟ್ರೋಲ್ ಯೂನಿಟ್‌ಗಳನ್ನು ಚುನಾವಣೆಗೆ ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವೀಕ್ಷಕರ ನೇಮಕ: ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಐಎಎಸ್ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಕೆಎಎಸ್ ಅಧಿಕಾರಿಯನ್ನು ಸಾಮಾನ್ಯ ವೀಕ್ಷಕರಾಗಿ, ರಾಜ್ಯ ಲೆಕ್ಕ ಪರಿಶೋಧನೆ ಹಾಗೂ ಲೆಕ್ಕ ಪತ್ರ ಇಲಾಖೆಯ ಜಂಟಿ ನಿಯಂತ್ರಕ ಹಾಗೂ ಉಪ ನಿಯಂತ್ರಕರನ್ನು ಚುನಾವಣೆಯ ವೆಚ್ಚ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ಇದೇ ದಿನಾಂಕದಂದು ವಿವಿಧ ಕಾರಣದಿಂದ ತೆರವಾಗಿರುವ ಬೆಂಗಳೂರಿನ ಸಗಾಯಿಪುರ, ಕಾವೇರಿಪುರ, ತುಮಕೂರು ಮಹಾನಗರ ಪಾಲಿಕೆಯ ವಾರ್ಡ್-22, ಬೆಂಗಳೂರಿನ ಹೆಬ್ಬಗೋಡಿ ನಗರಸಭೆಯ ವಾರ್ಡ್-26, ಬೆಳಗಾವಿ ಸದಲಗ ಪುರಸಭೆಯ ವಾರ್ಡ್-19 ಹಾಗೂ ಮುಗಳಖೋಡ ಪುರಸಭೆಯ ವಾರ್ಡ್-2 ರ ನಗರ ಸ್ಥಳೀಯ ಸಂಸ್ಥೆಗಳಿಗೆ ಉಪ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಎಲ್ಲೆಲ್ಲಿ ಚುನಾವಣೆ ನಡೆಯಲ್ಲ: ರಾಮನಗರ, ಕೊಡಗು, ಬೆಳಗಾವಿ, ಕಲಬುರಗಿ ಜಿಲ್ಲೆಯ ಚುನಾವಣೆ ನಡೆಸಲು ಬಾಕಿ ಇರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಹೈಕೋರ್ಟ್‌ನಲ್ಲಿ ಪ್ರಕರಣವಿರುವುದಿರಂದ ಈ ಹಂತದಲ್ಲಿ ಚುನಾವಣೆ ನಡೆಸುತ್ತಿಲ್ಲ ಎಂದರು.

ಪಂಚಾಯತ್ ಉಪ ಚುನಾವಣೆ: ಜಿಲ್ಲಾಧಿಕಾರಿಗಳು ಸಲ್ಲಿಸಿರುವ ವರದಿ ಅನ್ವಯ ವಿವಿಧ ಕಾರಣಗಳಿಂದ ತೆರವುಗೊಂಡಿರುವ ಒಟ್ಟು 8 ತಾಲೂಕು ಪಂಚಾಯತ್ ಗಳ 10 ಕ್ಷೇತ್ರಗಳ ಸದಸ್ಯ ಸ್ಥಾನಗಳಿಗೆ ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ತೆರವುಗೊಂಡಿರುವ 202 ಸದಸ್ಯ ಸ್ಥಾನಗಳಿಗೆ ಮೇ 29 ರಂದೇ ಉಪ ಚುನಾವಣೆ ನಡೆಯುತ್ತದೆ.

ಜಿಲ್ಲಾಧಿಕಾರಿಗಳು ಮೇ 13 ಅಧಿಸೂಚನೆ ಹೊರಡಿಸಲಿದ್ದು, ಮೇ 16 ರಂದು ನಾಮಪತ್ರ ಸಲ್ಲಿಕೆಯ ಕೊನೆದಿನವಾಗಿದೆ. ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 20 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.

ಬೆಂಗಳೂರು ನಗರ ಆನೇಕಲ್ ಪುರಸಭೆ, ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಹಾಗೂ ನೆಲಮಂಗಲ ಪುರಸಭೆ, ಕೋಲಾರದ ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು ಪುರಸಭೆಗಳು, ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರಸಭೆ, ಬಾಗೇಪಲ್ಲಿ ಪುರಸಭೆ ಹಾಗೂ ದಕ್ಷಿಣ ಕನ್ನಡದ ಮುಲ್ಕಿ ಪಟ್ಟಣ ಪಂಚಾಯತ್, ಮೂಡಬಿದಿರೆ ಪುರಸಭೆ, ಸುಳ್ಯ ಪಟ್ಟಣ ಪಂಚಾಯತ್ ಗಳು ಸೇರಿದಂತೆ ಒಟ್ಟು 22 ಜಿಲ್ಲೆಗಳ 63 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.

ಆಸ್ತಿ ವಿವರ ಸಲ್ಲಿಸದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ಗಳ ಒಟ್ಟು 26 ಸದಸ್ಯರ ಸದಸ್ಯತ್ವವನ್ನು ರದ್ಧು ಮಾಡಲಾಗಿದೆ. ಅಲ್ಲದೆ, ಈ ಬಾರಿಯೂ ಮತದಾರರಿಗೆ ಅಭ್ಯರ್ಥಿಯ ಹಿನ್ನೆಲೆ ತಿಳಿಯುವ ಉದ್ದೇಶದಿಂದ ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ ತನ್ನ ಹಿನ್ನೆಲೆ, ಚರಾಸ್ತಿ ಮತ್ತು ಸ್ಥಿರಾಸ್ತಿ, ಸ್ವವಿವರ, ವಿದ್ಯಾರ್ಹತೆ, ಆದಾಯದ ಮೂಲಗಳನ್ನು ಪರಿಷ್ಕೃತ ನಮೂನೆಯಲ್ಲಿ ಘೋಷಣೆ ಮಾಡಬೇಕು ಹಾಗೂ ಪ್ರಮಾಣ ಪತ್ರ ಸಲ್ಲಿಸಬೇಕು.

-ಶ್ರೀನಿವಾಸಚಾರಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News