ಮೋದಿ-ಶಾ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರುಗಳ ಕುರಿತು ಮೇ 6ರೊಳಗಾಗಿ ತೀರ್ಮಾನ ಪ್ರಕಟಿಸಿ

Update: 2019-05-02 11:16 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಸಲ್ಲಿಸಿರುವ ಒಂಬತ್ತು ದೂರುಗಳ ಬಗ್ಗೆ ಮೇ 6ರೊಳಗಾಗಿ ಅಂತಿಮ ನಿರ್ಧಾರ ಪ್ರಕಟಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಚುನಾವಣಾ ಆಯೋಗಕ್ಕೆ ಗಡುವು ವಿಧಿಸಿದೆ.

ಕಾಂಗ್ರೆಸ್ ಪಕ್ಷವು ಮೋದಿ-ಶಾ ವಿರುದ್ಧ ದಾಖಲಿಸಿದ್ದ 11 ದೂರುಗಳ ಪೈಕಿ ಒಂಬತ್ತು ದೂರುಗಳ ವಿಚಾರದಲ್ಲಿ ತನ್ನ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿರುವುದಾಗಿ ಚುನಾವಣಾ ಆಯೋಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠಕ್ಕೆ ತಿಳಿಸಿದೆ.

ತಾನು 40 ದೂರುಗಳನ್ನು ಸಲ್ಲಿಸಿದ್ದು ಅವುಗಳ ಪೈಕಿ 20 ಪ್ರಕರಣಗಳಲ್ಲಿ ಆದೇಶ ಹೊರಡಿಸಲಾಗಿದೆಯಾದರೂ ಇವು ಮೋದಿ-ಶಾ ಕುರಿತಾದ ದೂರುಗಳಾಗಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಎಲ್ಲಾ ದೂರುಗಳನ್ನು ಪರಿಶೀಲಿಸಿ ಸೋಮವಾರದೊಳಗೆ ಆದೇಶ ಹೊರಡಿಸುವಂತೆ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ತಿಳಿಸಿದೆ.

ಮೇ 6ರಂದು ನ್ಯಾಯಾಲಯ ಈ ಅಪೀಲಿನ ಮೇಲಿನ ವಿಚಾರಣೆ ಮತ್ತೆ ಆರಂಭಿಸುವುದರೊಳಗಾಗಿ ಚುನಾವಣಾ ಆಯೋಗ ತನ್ನ ನಿರ್ಧಾರ ಪ್ರಕಟಿಸಬೇಕಿದೆ ಎಂದು ಜಸ್ಟಿಸ್ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ ಹೇಳಿದೆ.

ಸುಪ್ರೀಂ ಕೋರ್ಟಿನಲ್ಲಿ ಅಪೀಲು ಸಲ್ಲಿಸಿರುವ ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News