ಶುದ್ಧ ಕುಡಿಯುವ ನೀರು ಘಟಕಕ್ಕೆ ಬೀಗ: ನಾಗರಿಕರ ಪರದಾಟ

Update: 2019-05-02 11:42 GMT

ತುಮಕೂರು,ಮೇ.2: ನಗರದ ಸರಸ್ವತಿಪುರಂನ ದೇವರಾಜ ಅರಸು ರಸ್ತೆಯಲ್ಲಿ ಸಂಸದರ ನಿಧಿಯಡಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕದ ಕಾರಣ ನೀಡಿ, ಬೀಗ ಹಾಕಲಾಗಿದ್ದು, ಸರಸ್ವತಿಪುರಂ, ಮರಳೂರು, ಅಮರಜ್ಯೋತಿನಗರ ಭಾಗದ ನಾಗರಿಕರು ಕುಡಿಯುವ ನೀರಿಗೆ ಪರದಾಡುವಂತಾಗಿದೆ.

ಕಳೆದ ಡಿಸೆಂಬರ್ ನಲ್ಲಿ ಉದ್ಘಾಟನೆಯಾಗಿದ್ದ ಈ ಶುದ್ಧ ಕುಡಿಯುವ ನೀರಿನ ಘಟಕ ಹೈಟೆನ್ಷನ್ ವಿದ್ಯುತ್ ತಂತಿಯಡಿ ಇದ್ದು, ನೀರಿನ ಘಟಕವನ್ನು ಬೆಂಗಳೂರಿನ ಗುತ್ತಿಗೆದಾರ ರಾಮಾಂಜಿ ಎಂಬುವರು ನಿರ್ವಹಣೆಗೆ ಪಡೆದುಕೊಂಡಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡುತ್ತಿರುವವರು ಯಾರು ಎಂಬುದರ ಬಗ್ಗೆ ಪಾಲಿಕೆಯಲ್ಲಿಯೂ ವ್ಯಾಪಕ ಚರ್ಚೆಗೆ ಒಳಗಾಗಿತ್ತು.

ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡುತ್ತಿರುವವರೇ, ವಿದ್ಯುತ್ ಬಿಲ್ ಭರಿಸಬೇಕು ಎಂದು ಪಾಲಿಕೆ ಆಯುಕ್ತ ಭೂಬಾಲನ್ ಆದೇಶ ನೀಡಿರುವುದರಿಂದ ಅನೇಕ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ ಹಾಕಲಾಗಿದೆ. ದೇವರಾಜ ಅರಸು ರಸ್ತೆಯಲ್ಲಿರುವ ಈ ಶುದ್ಧ ಕುಡಿಯುವ ನೀರಿನ ಘಟಕ ಹೈಟೆನ್ಷನ್ ವಿದ್ಯುತ್ ತಂತಿಯ ಕೆಳಗೆ ಇರುವುದರಿಂದ ಬೆಸ್ಕಾಂ ವಿದ್ಯುತ್ ಸಂಪರ್ಕವನ್ನು ನೀಡಲು ನಿರಾಕರಿಸಿದೆ ಎನ್ನಲಾಗಿದೆ.

ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡದೇ ಇದ್ದರೂ,ಕಳೆದ ಡಿಸೆಂಬರ್ ನಿಂದ ಕಾರ್ಯನಿರ್ವಹಿಸುತ್ತಿದ್ದ ಘಟಕದ ಮುಂದೆ, ವಿದ್ಯುತ್ ಸಂಪರ್ಕದ ತೊಂದರೆಯಿಂದ ಎರಡು ಮೂರು ದಿನ ನೀರು ಸಿಗುವುದಿಲ್ಲ ಎಂದು ಬೋರ್ಡ್ ಹಾಕಲಾಗಿದೆ. ಮನೆಯ ಹತ್ತಿರದಲ್ಲಿಯೇ ಸಿಗುತ್ತಿದ್ದ ಶುದ್ದ ಕುಡಿಯುವ ನೀರು ತೆಗೆದುಕೊಂಡು ಹೋಗಲು ಜನರು ಬರುತ್ತಿದ್ದು, ಬೋರ್ಡು ನೋಡಿ ಪಾಲಿಕೆಯವರಿಗೆ, ಬೆಸ್ಕಾಂ ಸಿಬ್ಬಂದಿಗೆ ಹಿಡಿ ಶಾಪ ಹಾಕುತ್ತಾ ವಾಪಸಾಗುತ್ತಿದ್ದಾರೆ. ನಗರಪಾಲಿಕೆ ಮತ್ತು ಬೆಸ್ಕಾಂ ನಡುವಿನ ಗೊಂದಲ ಬಗೆಹರಿಸಿ, ಜನರಿಗೆ ಶುದ್ದ ಕುಡಿಯುವ ನೀರು ಒದಗಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News