ಕುಡಿಯುವ ನೀರಿಗೆ ಹಾಹಾಕಾರ: ಶಿವಮೊಗ್ಗ ಮನಪಾ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

Update: 2019-05-02 11:45 GMT

ಶಿವಮೊಗ್ಗ, ಮೇ 2: ನಗರದ ವಾರ್ಡ್ ಸಂಖ್ಯೆ 34 ರ ಮದಾರಿಪಾಳ್ಯ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ಸ್ವರೂಪದ ಹಾಹಾಕಾರ ತಲೆದೋರಿದೆ ಎಂದು ಆರೋಪಿಸಿ ಗುರುವಾರ ಗ್ರಾಮಸ್ಥರು ದಲಿತ ಕ್ರಿಯಾ ಸಮಿತಿ ನೇತೃತ್ವದಲ್ಲಿ, ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಪತ್ರ ಅರ್ಪಿಸಿದರು.

ಕಳೆದ ಸರಿಸುಮಾರು ಏಳೆಂಟು ತಿಂಗಳಿನಿಂದ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಈಗಾಗಲೇ ಹಲವು ಬಾರಿ ಮಹಾನಗರ ಪಾಲಿಕೆ ಆಡಳಿತದ ಗಮನಕ್ಕೆ ಈ ವಿಷಯ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಮದಾರಿಪಾಳ್ಯದ ಮುಕ್ಕಾಲು ಪಾಲು ನಿವಾಸಿಗಳು ಬಡ, ಕೂಲಿಕಾರ್ಮಿಕ ವರ್ಗದವರಾಗಿದ್ದಾರೆ. ಕುಡಿಯುವ ನೀರಿಗಾಗಿ ಕೆಲಸಕಾರ್ಯ ಬಿಟ್ಟು ಹಗಲಿರುಳು ಕಾದು ಕುಳಿತುಕೊಳ್ಳುವಂತಾಗಿದೆ. ನಮ್ಮ ಗೋಳು ಕೇಳುವವರ್ಯಾರು ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಪ್ರತಿಯೊಂದು ಚುನಾವಣೆಯಲ್ಲಿಯೂ ಗ್ರಾಮಸ್ಥರು ಮತದಾನ ಮಾಡುತ್ತಾರೆ. ಆದರೆ ಆಡಳಿತ ವರ್ಗದವರು ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮೀನಾಮೇಷ ಎಣಿಸುತ್ತಾರೆ. ಹಾಗೆಯೇ ನಗರದೆಲ್ಲೆಲ್ಲೂ ಕುಡಿಯುವ ನೀರಿನ ಅಭಾವವಿಲ್ಲವೆಂದು ಸುಳ್ಳು ಹೇಳುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ತಕ್ಷಣವೇ ಪಾಲಿಕೆಯ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿಯಿತ್ತು ನಾಗರಿಕರ ಅಹವಾಲು ಆಲಿಸಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಾಲಮಿತಿಯಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಂದು ಪಾಲಿಕೆ ಕಚೇರಿ ಎದುರು ಉಗ್ರ ಸ್ವರೂಪದ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ದಲಿತ ಕ್ರಿಯಾ ಸಮಿತಿಯ ಪ್ರಮುಖರಾದ ಭಗವಾನ್, ಮಹಮ್ಮದ್ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News