ಮೇ 25ರ ಬಳಿಕ ರಾಜ್ಯ ರಾಜಕೀಯದಲ್ಲಿ ಧ್ರುವೀಕರಣ: ಮಾಜಿ ಸಚಿವ ರಮೇಶ್ ಜಾರಕಿಹೊಳಿ

Update: 2019-05-02 13:16 GMT

ಬೆಳಗಾವಿ, ಮೇ 2: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಬದಲಾವಣೆಗಳಾಗಲಿದ್ದು, ಮೇ 25ರ ಬಳಿಕ ರಾಜ್ಯ ರಾಜಕೀಯದಲ್ಲಿ ಧ್ರುವೀಕರಣ ಆಗಲಿದೆ ಎಂದು ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.

ಗುರುವಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ಪುತ್ರ ಅಮರನಾಥಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಪು ದೀಪ ಹಾಕಿಕೊಂಡು ಓಡಾಡುತ್ತಿರುವ ಬಹಳ ಮಂದಿ ಮಾಜಿ ಆಗಲಿದ್ದಾರೆ. ಹೀಗಾಗಿ ಕೆಂಪು ದೀಪ ಹಾಕಿಕೊಂಡು ಓಡಾಡುವವರಿಗೆ ಹೆದರಬೇಡಿ. ಮೇ 25ರ ಬಳಿಕ ದೊಡ್ಡ ಪ್ರಮಾಣದ ಅಧಿಕಾರ ನಮ್ಮ ಬಳಿಗೆ ಬರುತ್ತದೆ. ನಮ್ಮನ್ನು ನಂಬಿ ಎಂದು ಮನವಿ ಮಾಡಿದ ರಮೇಶ್, ಮೋಸ, ವಿಶ್ವಾಸ ದ್ರೋಹ ಮಾಡುವವರು, ಸಮಯ ಸಾಧಕರನ್ನು ನಂಬಬೇಡಿ ಎಂದು ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪುತ್ರ ಅಮರನಾಥ ನಿರ್ದೇಶಕರಾಗಿ ಅವಿರೋಧ ಆಯ್ಕೆ ಮಾಡಿದ್ದು, ಕೆಎಂಎಫ್ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಎಲ್ಲರ ಆಶೀರ್ವಾದ ದೊರೆತಿದೆ. ಅಥಣಿಯ ಶಾಸಕ ಮಹೇಶ ಕುಮಟಳ್ಳಿ ನಮ್ಮವರೇ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ದಕ್ಷಿಣದ ಜಿಲ್ಲೆಗಳಲ್ಲಿ ಹೈನುಗಾರಿಕೆಯಿಂದ ಜೀವನ ನಿರ್ವಹಣೆ ಮಾಡುವವರಿದ್ದಾರೆ. ಇಲ್ಲಿ ಸಾವಿರಾರು ಟನ್ ಕಬ್ಬು ಬೆಳೆದು ನಾವು ಹಾಳಾಗುತ್ತಿದ್ದೇವೆ. ಕೋಲಾರ, ತುಮಕೂರಿನಲ್ಲಿ ಕುಡಿಯಲು ನೀರು ಸಿಗುವುದಿಲ್ಲ. ಆದರೆ, ಹೈನುಗಾರಿಕೆಯಲ್ಲಿ ಅಭಿವೃದ್ಧಿ ಸಾಧಿಸಿವೆ. ಅಲ್ಲಿನವರ ಜಾಣತನ, ಕುಟುಂಬ ನಡೆಸುವ ಶೈಲಿ ನೋಡಿದರೆ ದಿಗಿಲಾಗುತ್ತದೆ. ಕೆಎಂಎಫ್ ಚುನಾವಣೆ ಎಂದರೆ ನಮ್ಮಲ್ಲಿ ಮಹತ್ವವಿಲ್ಲ. ಆದರೆ, ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರದಲ್ಲಿ ಕೆಎಂಎಫ್ ಚುನಾವಣೆ ಎಂದರೆ ವಿಧಾನಸಭೆ ಚುನಾವಣೆ ಇದ್ದಂತೆ. ಬೆಮೆಲ್ ಅನ್ನು ಬೆಂಗಳೂರು ಮಟ್ಟಕ್ಕೆ ತರಬೇಕು ಎನ್ನುವ ಆಸೆ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ಪುತ್ರ ಅಮರನಾಥ, ಶಾಸಕ ಮಹೇಶ್ ಕುಮಟಳ್ಳಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಅಥಣಿ ವಿಧಾನಸಭಾ ಕ್ಷೇತ್ರದಲ್ಲಿನ ಕುಡಿಯುವ ನೀರು ಪೂರೈಕೆ ಯೋಜನೆ ಬಗ್ಗೆ ಸಮಾಲೋಚನೆ ನಡೆಸಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಯಾವುದೇ ರಾಜಕೀಯ ಚರ್ಚಿಸಿಲ್ಲ

-ಮಹೇಶ್ ಕುಮಟಳ್ಳಿ, ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News