ಬಿಜೆಪಿ ಶಾಸಕನ ಹತ್ಯೆಯ ರೂವಾರಿಯಾಗಿದ್ದ ನಕ್ಸಲ್ ನಾಯಕ ಎನ್‌ಕೌಂಟರ್‌ಗೆ ಬಲಿ

Update: 2019-05-02 14:21 GMT

ರಾಯಪುರ(ಛತ್ತೀಸ್‌ಗಡ),ಮೇ 2: ತನ್ನ ತಲೆಯ ಮೇಲೆ ಎಂಟು ಲಕ್ಷ ರೂ.ಗಳ ಬಹುಮಾನವನ್ನು ಹೊತ್ತಿದ್ದ ನಕ್ಸಲ್ ಕಮಾಂಡರ್ ಮಾಡ್ವಿ ಮುಯ್ಯ ಯಾನೆ ಜೋಗಾ ಕುಂಜಮ್(29) ಎಂಬಾತ ಗುರುವಾರ ಛತ್ತೀಸ್‌ಗಡದ ದಾಂತೆವಾಡಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಕೊಲ್ಲಲ್ಪಟ್ಟಿದ್ದಾನೆ.

ಮುಯ್ಯ ಇತ್ತೀಚಿಗೆ ನಡೆದಿದ್ದ ಬಿಜೆಪಿ ಶಾಸಕ ಭೀಮಾ ಮಾಂಡವಿ ಅವರ ಹತ್ಯೆಯ ರೂವಾರಿಗಳಲ್ಲೋರ್ವನಾಗಿದ್ದ ಎನ್ನಲಾಗಿದೆ. ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಮಾಂಡವಿ ಮತ್ತು ಇತರ ನಾಲ್ವರ ಹತ್ಯೆಗೈಯಲಾಗಿತ್ತು.

ಕಳೆದ ವರ್ಷ ದೂರದರ್ಶನದ ಕ್ಯಾಮರಾಮನ್ ಮತ್ತು ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ಬಲಿ ತೆಗೆದುಕೊಂಡಿದ್ದ ದಾಂತೆವಾಡಾ ದಾಳಿಯಲ್ಲಿಯೂ ಮುಯ್ಯಾ ಪ್ರಮುಖ ಪಾತ್ರ ವಹಿಸಿದ್ದ ಎಂದು ಪೊಲೀಸರು ತಿಳಿಸಿದರು.

ಗುರುವಾರ ಬೆಳಿಗ್ಗೆ ಭದ್ರತಾ ಪಡೆಗಳು ಪೆರ್ಪಾ ಮತ್ತು ಮಾರ್ಕಾಮರಿಸ್ ಗ್ರಾಮಗಳ ನಡುವಿನ ಅರಣ್ಯದಲ್ಲಿ ಗಸ್ತು ಕಾರ್ಯಾಚರಣೆಯಲ್ಲಿದ್ದಾಗ ನಕ್ಸಲರ ಗುಂಪುಂದು ಗುಂಡಿನ ದಾಳಿ ನಡೆಸಿದ್ದು ಕಾಳಗಕ್ಕೆ ಕಾರಣವಾಗಿತ್ತು.

2017,ಎಪ್ರಿಲ್‌ನಲ್ಲಿ ಸುಕ್ಮಾದಲ್ಲಿ ನಡೆದಿದ್ದ ದಾಳಿಯಲ್ಲಿಯೂ ಮುಯ್ಯಾನ ಪಾತ್ರವಿತ್ತೆನ್ನಲಾಗಿದೆ. ಈ ದಾಳಿಯಲ್ಲಿ 25 ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News