ಸೋಮವಾರಪೇಟೆ: ತಾಯಿ, ಮಗಳ ಭೀಕರ ಹತ್ಯೆ; ಆರೋಪಿ ಬಂಧನ

Update: 2019-05-02 14:53 GMT

ಸೋಮವಾರಪೇಟೆ,ಮೇ 2: ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ತಾಯಿ, ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿಯನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. 

ದೊಡ್ಡಮಳ್ತೆ ಗ್ರಾಮದ ದಿಲೀಪ್(39) ಬಂಧಿತ ಆರೋಪಿ. ಆಸ್ತಿಯ ವಿವಾದದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವುದಾಗಿ ತನಿಖೆಯ ವೇಳೆ ದಿಲೀಪ್ ಬಾಯಿ ಬಿಟ್ಟಿದ್ದಾನೆ.

ಮಂಗಳವಾರ ಬೆಳಗ್ಗಿನ ಜಾವ 10.30ರ ಸಮಯದಲ್ಲಿ ಕಾಫಿ ತೋಟದ ಗೇಟ್ ಸಮೀಪ ನಿಂತಿದ್ದ ಕಾಫಿ ಬೆಳೆಗಾರರಾಗಿದ್ದ ದೊಡ್ಡಮಳ್ತೆ ಗ್ರಾಮದ ದಿ.ವೀರರಾಜು ಅವರ ಪತ್ನಿ ಕವಿತ(45) ಹಾಗು ಮಗಳು ಜಗಶ್ರೀ(17) ಅವರನ್ನು ಭೀಕರವಾಗಿ ಕೊಚ್ಚಿ ಕೊಂದು, ನಂತರ ತನ್ನ ಕೋಳಿ ಅಂಗಡಿಗೆ ಬಂದು ಕುಳಿತಿದ್ದ ಎನ್ನಲಾಗಿದೆ.

ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿದ ಕೂಡಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನಾ ಪನ್ನೇಕರ್ ಮಾರ್ಗದರ್ಶನದಲ್ಲಿ, ಡಿವೈಎಸ್‍ಪಿ ದಿನಕರಶೆಟ್ಟಿ, ಸೋಮವಾರಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ತಂಡ, ಪ್ರಕರಣ ನಡೆದ ಕೆಲವೆ ಗಂಟೆಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾನು ಮಾಡಿದ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. 

ಘಟನೆ ಹಿನ್ನೆಲೆ: ಕವಿತ ಅವರ ಜಾಗದ ಸಮೀಪದಲ್ಲೇ ಆರೋಪಿ ದಿಲೀಪ್ ಹೊಸ ಮನೆಯೊಂದನ್ನು ನಿರ್ಮಿಸುತ್ತಿದ್ದು, ಕವಿತ ಅವರ ಜಾಗದಲ್ಲೇ ಮನೆಯ ದಾರಿಯಿದೆ. ಹಿಂದಿನಿಂದಲೂ ರಸ್ತೆ ವಿಚಾರವಾಗಿ ತಕರಾರು ಇದ್ದು, ಅಗಾಗ್ಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕವಿತ ಅವರು ದಿಲೀಪ್ ವಿರುದ್ಧ ಈ ಹಿಂದೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದಿಲೀಪ್ ವಿರುದ್ಧ ಪ್ರಕರಣವೂ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News