ಚಲುವರಾಯಸ್ವಾಮಿ ವಿರುದ್ಧ ಶಾಸಕ ಸುರೇಶ್ ಗೌಡ ತೀವ್ರ ವಾಗ್ದಾಳಿ: 'ಶಿಖಂಡಿ' ಪದಪ್ರಯೋಗ, ವಿವಾದಕ್ಕೆ ಕಿಡಿ

Update: 2019-05-02 16:20 GMT
ಸುರೇಶ್ ಗೌಡ- ಚಲುವರಾಯಸ್ವಾಮಿ

ಮಂಡ್ಯ,ಮೇ 2: ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಈ ಹಿಂದೆ ಡೆಡ್ ಹಾರ್ಸ್ ಎಂದು ಪದಪ್ರಯೋಗ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ನಾಗಮಂಗಲ ಕ್ಷೇತ್ರದ ಶಾಸಕ ಕೆ.ಸುರೇಶ್ ಗೌಡ, ಈ ಬಾರಿ ಅವರ ವಿರುದ್ಧ 'ಶಿಖಂಡಿ' ಎಂಬ ಪದ ಪ್ರಯೋಗ ಮಾಡುವ ಮೂಲಕ ಮತ್ತೊಂದು ವಿವಾದಕ್ಕೆ ಕಿಡಿ ಹಚ್ಚಿದ್ದಾರೆ.

ಓರ್ವ ಹೆಂಗಸನ್ನು ಮುಂದಿಟ್ಟುಕೊಂಡು ಹಿಂದಿನಿಂದ ಶಿಖಂಡಿ ರಾಜಕಾರಣ ಮಾಡಿದ್ದಾರೆಂದು ಚಲುವರಾಯಸ್ವಾಮಿ ಅವರ ವಿರುದ್ಧ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ ತೀವ್ರ ಟೀಕಾಪ್ರಹಾರ ನಡೆಸಿದರು.

ಮೂಲ ಕಾಂಗ್ರೆಸ್ಸಿಗರು ಮಾತ್ರ ಮೈತ್ರಿ ಧರ್ಮ ಪಾಲನೆ ಮಾಡಿದ್ದು, ಆ ಪಕ್ಷಕ್ಕೆ ವಲಸೆ ಹೋದವರೆಲ್ಲ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ನೆಲೆ ಸ್ಥಾಪಿಸುವ ಯತ್ನದಲ್ಲಿ ಕಾಂಗ್ರೆಸ್ ನಾಶಕ್ಕೆ ಕೈಹಾಕಿದ್ದಾರೆಂದು ಟೀಕಿಸಿದರು.

ಚಲುವರಾಯಸ್ವಾಮಿ ಸೇರಿದಂತೆ ವಲಸೆ ಹೋದವರು ಕದ್ದುಮುಚ್ಚಿಯಲ್ಲ, ಬಹಿರಂಗವಾಗಿಯೇ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಲ್ಲದೆ, ತಂತ್ರಗಾರಿಕೆ ಕೆಲಸವನ್ನೂ ರೂಪಿಸಿದ್ದಾರೆಂದು ಆರೋಪಿಸಿದರು. ಜೆಡಿಎಸ್ ಅಭ್ಯರ್ಥಿ ನಿಖಿಲ್ ವಿರುದ್ಧ ಮಹಾನ್ ಷಡ್ಯಂತ್ರ ನಡೆದಿದೆ. ಪ್ರಬಲ ವ್ಯಕ್ತಿಗಳೂ ಇದರಲ್ಲಿ ಕೈಜೋಡಿಸಿದ್ದಾರೆ. ಅವರು ಮಹಾನ್ ರಾಜಕೀಯ ವ್ಯಕ್ತಿಗಳೆಂದು ಟೀಕಿಸಿದ ಅವರು, ಪಕ್ಷ ನಿಷ್ಠೆ ಅನ್ನೋದು ಇವರಿಗೆ ಗೊತ್ತೇ ಇಲ್ಲ. ಬ್ಲಾಕ್‍ಮೇಲ್ ರಾಜಕಾರಣಿಗಳು ಎಂದು ಚಲುವರಾಯಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಚಲುವರಾಯಸ್ವಾಮಿ ಅವರ ವಿರುದ್ಧ ಗೂಢಚಾರಿಕೆ ಮಾಡುತ್ತಿರುವ ಬಗೆಗಿನ ಪ್ರಶ್ನೆಗೆ ಇವನ್ಯಾವ ದೊಡ್ಡ ವ್ಯಕ್ತಿಯೆಂದು ಇವನ ವಿರುದ್ಧ ಗೂಢಚಾರಿಕೆ ಮಾಡಲು ಹೋಗ್ತಾರೆ ಎಂದು ಏಕವಚನದಲ್ಲಿ ಹರಿಹಾಯ್ದ ಅವರು, ಇಂತಹ ಆರೋಪ ಮಾಡುವುದನ್ನು ಬಿಟ್ಟು ಬೇರೆ ಏನಾದರೂ ಕೆಲಸ ಇದ್ದರೆ ನೋಡಿಕೊಳ್ಳಲಿ ಎಂದು ಸಲಹೆಯಿತ್ತರು.

ಜೆಡಿಎಸ್‍ಗೆ ಯಾರೂ ಅನಿವಾರ್ಯವಲ್ಲ. ಅವರಿಗೆ ನಾವು ಅನಿವಾರ್ಯವೆಂದು ಮೈತ್ರಿ ಬಗ್ಗೆ ಅಪಸ್ವರ ಎತ್ತುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಮೂಲ ಕಾಂಗ್ರೆಸ್ಸಿಗರು ಹಾಗೂ ಸ್ವಂತ ಬಲದಿಂದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News