ಮೈಸೂರಿನ ಐದು ಕಡೆ ಸರಗಳ್ಳತನ: ಬೆಳ್ಳಂಬೆಳಗ್ಗೆ ಜನರನ್ನು ಬೆಚ್ಚಿಬೀಳಿಸಿದ ಕಳ್ಳರು

Update: 2019-05-02 16:25 GMT

ಮೈಸೂರು,ಮೇ.2: ಬೆಳ್ಳಂಬೆಳಿಗ್ಗೆ ಸಾಂಸ್ಕೃತಿಕ ನಗರದ ಜನತೆಯನ್ನೇ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಗುರುವಾರ ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ ಮಹಿಳೆಯರಿಗೆ ಇಂದು ಮೈಸೂರಿನಲ್ಲಿ ಶಾಕ್ ಕಾದಿತ್ತು. ಒಂದಲ್ಲ, ಎರಡಲ್ಲ. ಬರೋಬ್ಬರಿ ಐದು ಕಡೆ ಕೆಂಪು ಬಣ್ಣದ ಪಲ್ಸರ್ ಮತ್ತು ಕರಿಶ್ಮಾ ಬೈಕ್ ನಲ್ಲಿ ಬಂದ ಸರಗಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಸಾಂಸ್ಕೃತಿಕ ನಗರಿಯಲ್ಲಿ ಮತ್ತೆ ಸರಗಳ್ಳರ ಹಾವಳಿ ಶುರುವಾಗಿದೆ. ಇಂದು ಮುಂಜಾನೆ ನಗರದ ಐದು ಕಡೆ ಸರಗಳ್ಳರು ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಂತರದಲ್ಲಿ ಕೈಚಳಕ ತೋರಿಸಿರುವ ಸರಗಳ್ಳರು ವಿದ್ಯಾರಣ್ಯಪುರಂನಲ್ಲಿ ಎರಡು ಕಡೆ,   ಎನ್.ಆರ್.ಮೊಹಲ್ಲಾ, ಇಟ್ಟಿಗೆಗೂಡು, ಗೋಕುಲಂನ ತಲಾ ಒಂದು ಕಡೆ ಸರ ಅಪಹರಣ ನಡೆಸಿದ್ದಾರೆ. ಕೆಂಪು ಪಲ್ಸರ್ ಬೈಕ್ ಮತ್ತು ಕರಿಶ್ಮಾ ಗಾಡಿಯಲ್ಲಿ ಬಂದು ಸರಗಳನ್ನು ಕಿತ್ತು ಪರಾರಿಯಾಗಿದ್ದಾರೆ. ಮುಂಜಾನೇ ತಂಪಾಗಿರುವ ವಾತಾವರಣದಲ್ಲಿ ವಾಕ್ ಮಾಡುವ ಮಂದಿಯೇ ಅವರ ಟಾರ್ಗೆಟ್ ಆಗಿದ್ದು, ದಾರಿಹೋಕರನ್ನು ಗಮನಿಸಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸಿದ್ದಾರೆ. ಒಂದೇ ದಿನ ಐದು ಕಡೆ ಸರಗಳ್ಳತನದ ವಿಷಯ ಕೇಳಿ ಮೈಸೂರಿನ  ಸಾಮಾನ್ಯ ಜನರು ಬೆಚ್ಚಿಬಿದ್ದಿದ್ದಾರೆ. ಗೋಕುಲಂನಲ್ಲಿ ಮಹಿಳೆಯೋರ್ವರ ಕತ್ತಿಗೆ ಕೈಹಾಕಿದ ತಕ್ಷಣ ಅವರು ಕುಳಿತು ಬಿಟ್ಟಿದ್ದಾರೆ. ಇದರಿಂದ ಕಳ್ಳರು ಸರ ಅಪಹರಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಮೈಸೂರಿನ ಎನ್.ಐ.ಇ. ಕಾಲೇಜಿನ ಬ್ರಿಗೇಡ್ ಅಪಾರ್ಟ್ ಮೆಂಟ್ ಸಮೀಪ ಬೆಳಿಗ್ಗೆ 6.23ರ ಸುಮಾರಿಗೆ ವಾಕಿಂಗ್ ಮಾಡುವ ವೇಳೆ ಅಲ್ಲಿನ ಸ್ಥಳೀಯ ನಿವಾಸಿಗಳಾದ ಜಯಲಕ್ಷ್ಮಮ್ಮ(60) ಎಂಬವರ ಕತ್ತಿನಲ್ಲಿದ್ದ 45 ಗ್ರಾಂ ಚಿನ್ನದ ಸರ, ಜಯಲಕ್ಷ್ಮಿ (74)ಎಂಬವರ ಕತ್ತಿನಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರ ಅಪಹರಿಸಿದ್ದು, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅದೇ ವೇಳೆ ಇಟ್ಟಿಗೆಗೂಡು ನಿವಾಸಿ ಸುಗುಣದೇವಿ(60)ಎಂಬವರು ಹಾಲು ತರಲು ಹೋದಾಗ ಕರಿಶ್ಮಾ ವಾಹನದಲ್ಲಿ ಬಂದ ಸರಗಳ್ಳರು ಅವರ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಅಪಹರಿಸಿದ್ದಾರೆ. ಸ್ಥಳಕ್ಕೆ ನಜರ್ ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎನ್.ಆರ್.ಮೊಹಲ್ಲಾದ ನಿವಾಸಿ ಲಲಿತಮ್ಮ(80) ಎಂಬವರು ವಾಯುವಿಹಾರಕ್ಕೆ ತೆರಳಿದ್ದಾಗ ಅವರ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಕರಿಶ್ಮಾ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಸ್ಥಳಕ್ಕೆ ಎನ್.ಆರ್.ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ನಗರದ ಸುತ್ತಲೂ ಪೊಲೀಸರು ನಾಕಾಬಂಧಿ ಹಾಕಿ ಸರಗಳ್ಳರಿಗಾಗಿ ಶೋಧ ನಡೆಸಿದ್ದಾರೆ.

ಗೋಕುಲಂನಲ್ಲಿ ಒಂದನೇ ಹಂತದಲ್ಲಿ ಗಾಯತ್ರಿ ಎಂಬ ಮಹಿಳೆ ಮಗ, ಸೊಸೆಯೊಂದಿಗೆ ವಾಸವಾಗಿದ್ದು, ಬೆಳಗ್ಗೆ 7ಗಂಟೆಯ ಸುಮಾರಿಗೆ ಮನೆಯ ಮುಂದೆ ರಂಗೋಲಿ ಹಾಕುತ್ತಿರುವಾಗ ಬೈಕ್ ನಲ್ಲಿ ಬಂದ ವ್ಯಕ್ತಿಗಳಿಬ್ಬರು ಚಿನ್ನದ ಮಾಂಗಲ್ಯ ಸರ ಕೀಳಲು ಪ್ರಯತ್ನಿಸಿದ್ದು, 25 ಸಾವಿರ ರೂ.ಮೌಲ್ಯದ ಚಿನ್ನ  ಕಿತ್ತುಕೊಂಡು ಕೆ.ಆರ್.ರಸ್ತೆಯ ಕಡೆ ಹೊರಟು ಹೋಗಿದ್ದಾರೆ. ದುಷ್ಕರ್ಮಿಗಳಿಬ್ಬರು 25-30 ರವಯಸ್ಸಿನವರಿರಬಹುದೆಂದು ಗಾಯತ್ರಿಯವರು ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಒಂದೇ ದಿನ ಐದು ಕಡೆಗಳಲ್ಲಿ ನಡೆದ ಸರಣಿ ಸರಗಳ್ಳತನ ಸಾರ್ವಜನಿಕರು ಇನ್ನು ರಸ್ತೆಯಲ್ಲಿ ಒಂಟಿಯಾಗಿ ನಡೆದಾಡುವುದಕ್ಕೂ ಭಯಪಡುವಂತೆ ಮಾಡಿದೆ. ಪೊಲೀಸರು ಇನ್ನೂ ಹೆಚ್ಚಿನ ಭದ್ರತೆ ಕೈಗೊಳ್ಳಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News