ಕಾಶ್ಮೀರ: ಉಗ್ರರಿಂದ ಬಿಜೆಪಿ ಮುಖಂಡನ ಹತ್ಯೆ

Update: 2019-05-05 04:08 GMT
ಗುಲಾಂ ಮುಹಮ್ಮದ್ ಮೀರ್(55)

ಶ್ರೀನಗರ, ಮೇ 5: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಅನಂತನಾಗ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಗುಲಾಂ ಮುಹಮ್ಮದ್ ಮೀರ್(55) ಅವರನ್ನು ಶನಿವಾರ ತಡರಾತ್ರಿ ಉಗ್ರರು ಹತ್ಯೆ ಮಾಡಿದ್ದಾರೆ. ಇವರು ಅನಂತನಾಗ್ ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷರೂ ಆಗಿದ್ದರು.

ಅನಂತನಾಗ್ ಲೋಕಸಭಾ ಕ್ಷೇತ್ರಕ್ಕೆ ಸೋಮವಾರ ಮತದಾನ ನಡೆಯಲಿದೆ. ಸರ್ಕಾರ ಅವರಿಗೆ ನೀಡಿದ್ದ ಭದ್ರತೆಯನ್ನು ಇತ್ತೀಚೆಗೆ ಹಿಂಪಡೆದಿತ್ತು ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಶನಿವಾರ ರಾತ್ರಿ ಮೀರ್ ಅವರನ್ನು ಉಗ್ರಗಾಮಿಗಳು ಮನೆಯಲ್ಲೇ ಹತ್ಯೆ ಮಾಡಿದ್ದಾರೆ. ಅವರ ದೇಹಕ್ಕೆ ಹಲವು ಗುಂಡುಗಳು ತಗುಲಿದ್ದು, ಆಸ್ಪತ್ರೆಗೆ ಒಯ್ಯುವ ಮಾರ್ಗಮಧ್ಯದಲ್ಲಿ ಅವರು ಕೊನೆಯುಸಿರೆಳೆದರು ಎಂದು ರಾಜ್ಯ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಹೇಳಿದ್ದಾರೆ. ಮೀರ್ ಹತ್ಯೆ ಬರ್ಬರ ಕೃತ್ಯ ಎಂದು ಬಣ್ಣಿಸಿದ ಅವರು, ಉಗ್ರರಿಂದ ಜೀವ ಬೆದರಿಕೆ ಇದ್ದರೂ ಅವರಿಗೆ ನೀಡಿದ್ದ ಭದ್ರತೆಯನ್ನು ಸರ್ಕಾರ ಇತ್ತೀಚೆಗೆ ವಾಪಸ್ ಪಡೆದಿದೆ ಎಂದು ಅವರು ಆಪಾದಿಸಿದ್ದಾರೆ.

ನೌಗಾಮ್ ವೆರಿನಾಗ್ ಎಂಬಲ್ಲಿ ಅಪರಿಚಿತ ಉಗ್ರರು ಮೀರ್ ಮೇಲೆ ಗುಂಡಿನ ದಾಳಿ ನಡೆಸಿದರು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸ್ ಮೂಲಗಳು ಹೇಳಿವೆ. ದಕ್ಷಿಣ ಕಾಶ್ಮೀರದಲ್ಲಿ ರಾಜಕಾರಣಿಗಳ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಗುರುವಾರ ಉಗ್ರರು ಕುಚ್‌ಮುಲ್ಲಾ ಥ್ರಾಲ್‌ನ ಅಬ್ದುರ್ರಶೀದ್ ಬಟ್ ಎಂಬುವವರನ್ನು ಗುಂಡು ಹಾರಿಸಿ ಗಾಯಗೊಳಿಸಿದ್ದರು. ಬಟ್ ಕೂಡಾ ರಾಜಕೀಯ ಪಕ್ಷವೊಂದರ ಮಾಜಿ ಸದಸ್ಯ.

ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಮೂರನೇ ಹಂತದಲ್ಲಿ ಸೋಮವಾರ ಮತದಾನ ನಡೆಯುತ್ತಿದೆ. ಭದ್ರತಾ ಕಾರಣಗಳಿಂದಾಗಿ ಅನಂತನಾಗ್ ಲೋಕಸಭಾ ಕ್ಷೇತ್ರಕ್ಕೆ ಮೂರು ಹಂತದಲ್ಲಿ ಮತದಾನ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News