ಮೋದಿ ಆಳ್ವಿಕೆಯ 5 ವರ್ಷಗಳು ಅತ್ಯಂತ ಯಾತನಾದಾಯಕ: ಮನಮೋಹನ್ ಸಿಂಗ್

Update: 2019-05-05 15:00 GMT

ಹೊಸದಿಲ್ಲಿ,ಮೇ 5: ಪ್ರಧಾನಿ ನರೇಂದ್ರ ಮೋದಿಯವರ ಐದು ವರ್ಷಗಳ ಆಡಳಿತವು ಭಾರತದ ಯುವಜನರು, ರೈತರು,ವ್ಯಾಪಾರಿಗಳು ಮತ್ತು ಪ್ರತಿಯೊಂದೂ ಪ್ರಜಾಸತ್ತಾತ್ಮಕ ಸಂಸ್ಥೆಗೆ ಅತ್ಯಂತ ಯಾತನಾದಾಯಕ ಮತ್ತು ವಿನಾಶಕಾರಿಯಾಗಿದ್ದರಿಂದ ಅವರಿಗೆ ಈಗ ನಿರ್ಗಮನ ದ್ವಾರವನ್ನು ತೋರಿಸಬೇಕಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರವಿವಾರ ಇಲ್ಲಿ ಹೇಳಿದರು.

ಮೋದಿ ಪರ ಅಲೆಯಿದೆ ಎನ್ನುವುದನ್ನು ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಳ್ಳಿ ಹಾಕಿದ ಅವರು,ಎಲ್ಲರನ್ನೂ ಒಳಗೊಂಡ ಬೆಳವಣಿಗೆಯಲ್ಲಿ ವಿಶ್ವಾಸವಿಲ್ಲದ ಮತ್ತು ಸಾಮರಸ್ಯವನ್ನು ಕೆಡಿಸಿ ತನ್ನ ರಾಜಕೀಯ ಅಸ್ತಿತ್ವದ ಬಗ್ಗೆ ಮಾತ್ರ ಚಿಂತಿಸುವ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಜನರು ನಿರ್ಧರಿಸಿದ್ದಾರೆ ಎಂದರು.

ಮೋದಿ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿಂಗ್,ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಊಹಿಸಲು ಸಾಧ್ಯವಿಲ್ಲದ ಮಟ್ಟಕ್ಕೆ ಏರಿದ್ದು ಏಕೈಕ ಸಾಧನೆಯಾಗಿದೆ ಮತ್ತು ನೋಟು ನಿಷೇಧವು ಪ್ರಾಯಶಃ ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಹಗರಣವಾಗಿತ್ತು ಎಂದರು.

ಮೋದಿಯವರ ಪಾಕಿಸ್ತಾನ ನೀತಿಯು ‘ಬೇಕಾಬಿಟ್ಟಿ’ಯಾಗಿತ್ತು ಎಂದು ಬಣ್ಣಿಸಿದ ಅವರು,ಆಹ್ವಾನವಿಲ್ಲದೆ ಪಾಕಿಸ್ತಾನಕ್ಕೆ ತೆರಳಿದ್ದರಿಂದ ಹಿಡಿದು ಭಯೋತ್ಪಾದಕ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಐಎಸ್‌ಐ ಅನ್ನು ಪಠಾಣ್ ಕೋಟ್ ವಾಯುನೆಲೆಗೆ ಆಹ್ವಾನಿಸಿದ್ದರವರೆಗೆ ಸರಣಿ ಗೊಂದಲಗಳಿಂದ ಕೂಡಿತ್ತು ಎಂದು ಟೀಕಿಸಿದರು.

 ದೇಶವು ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ ಎಂದ ಸಿಂಗ್,ಮೋದಿ ಸರಕಾರವು ದೇಶದ ಆರ್ಥಿಕತೆಯನ್ನು ಹದಗೆಡಿಸಿದೆ ಎಂದರು.

 ಪುಲ್ವಾಮಾ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಸಂಪೂರ್ಣ ಗುಪ್ತಚರ ವೈಫಲ್ಯವು ಭಯೋತ್ಪಾದನೆಯನ್ನು ಎದುರಿಸುವಲ್ಲಿ ಸರಕಾರದ ಸನ್ನದ್ಧತೆ ಹೇಗಿತ್ತು ಎನ್ನ್ನುವುದನ್ನು ತೋರಿಸಿದೆ ಎಂದು ಅವರು ಟೀಕಿಸಿದರು.

ಭಯೋತ್ಪಾದಕ ಘಟನೆಗಳು ತೀವ್ರವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆ ಕುರಿತು ಮೋದಿ ಸರಕಾರದ ದಾಖಲೆಯು ನಿರಾಶಾದಾಯಕವಾಗಿದೆ ಎಂದ ಅವರು,ಮೋದಿಯವರ ರಾಷ್ಟ್ರವಾದದ ಚುನಾವಣಾ ವಿಷಯ ಕುರಿತಂತೆ,ಸುಳ್ಳನ್ನು ನೂರು ಸಲ ಹೇಳಿದರೂ ಅದು ಸತ್ಯವಾಗುವುದಿಲ್ಲ. ಕಳೆದ ಐದು ವರ್ಷಗಳಲ್ಲಿ ಜಮ್ಮು-ಕಾಶ್ಮೀರವೊಂದರಲ್ಲೇ ಭಯೋತ್ಪಾದಕ ದಾಳಿಗಳು ಶೇ.176ರಷ್ಟು ಹೆಚ್ಚಾಗಿವೆ ಮತ್ತು ಪಾಕ್ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಗಳು ಶೇ.1000ರಷ್ಟು ಏರಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News