ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿರುವುದು ನಿಜ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-05-05 16:14 GMT

ಮೈಸೂರು,ಮೇ.5: ಚಾಮುಂಡೇಶ್ವರಿ ಕ್ಷೇತ್ರದ ಉದ್ಬೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಮತ ಹಾಕಿರುವುದು ನಿಜ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡರು.

ನಗರದ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಜಿ.ಟಿ.ದೇವೇಗೌಡ ಉದ್ಬೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿರುವುದು ಸತ್ಯ, ಇರುವ ವಿಚಾರವನ್ನು ಜಿ.ಟಿ.ದೇವೇಗೌಡ ಹೇಳಿದ್ದಾರೆ. ಉದ್ಬೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಮಾತ್ರವಲ್ಲ, ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದರೆ ಜೆಡಿಎಸ್ ನವರು ಬಿಜೆಪಿ ಗೆ ಮತಹಾಕಿದ್ದಾರೆ. ಕ್ಷೇತ್ರದಲ್ಲಿ 18 ಲಕ್ಷ ಮತದಾರರಿದ್ದಾರೆ. ಎಲ್ಲರೂ ಬುದ್ದಿವಂತರಾಗಿದ್ದಾರೆ. ಹಾಗಾಗಿ ಎಲ್ಲೋ ಒಂದು ಕಡೆ ಬಿಜೆಪಿಗೆ ಮತ ಹಾಕಿದರೆ ಎಲ್ಲಾ ಕಡೆ ಹಾಗೆ ಹಾಗಿಲ್ಲ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಹೇಳಿದರು.

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಜೊತೆ ಕಾಂಗ್ರೆಸ್ ನವರು ಊಟಕ್ಕೆ ಹೋದರೆ ನಾವು ಪ್ರಶ್ನಿಸಲು ಸಾಧ್ಯವಿಲ್ಲ, ಅದು ಅವರವರ ವೈಯಕ್ತಿಕ, ಈಗ ನೀವು ಸಹ ಎಲ್ಲೋ ಊಟಕ್ಕೆ ಹೋಗುತ್ತೀರ ಆಗ ನಿಮ್ಮ ಮಾಲಕರು ಪ್ರಶ್ನೆ ಮಾಡಿದರೆ ಸರಿನಾ? ಎಂದು ಪತ್ರಕರ್ತರನ್ನೇ ಕೇಳಿದರು.

ಮೋದಿ ಸುಳ್ಳುಗಾರ: ಭ್ರಷ್ಟಾಚಾರದ ಹಣೆ ಪಟ್ಟಿಕಟ್ಟಿಕೊಮಡು ರಾಜೀವ್ ಗಾಂಧಿ ನಿಧನರಾದರು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೋದಿ ಒಬ್ಬ ಸುಳ್ಳುಗಾರ, ಎಂದಾದರೂ ಸತ್ಯ ಹೇಳಿದ್ದಾರ? ಅವರು ಯಾವುದನ್ನೂ ಸತ್ಯ ಹೇಳಿಲ್ಲ, ಸುಳ್ಳನ್ನು ಹೇಳಿಕೊಂಡು ಪ್ರಚಾರ ಗಿಟ್ಟಿಸಿ ಹಿಂದೆ ಪ್ರಧಾನಿ ಆದರು, ಆದರೆ ಈ ಬಾರಿ ಸುಳ್ಳು ಹೇಳಿಕೊಂಡು ಪ್ರಧಾನಿ ಆಗಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News