ರೈತರಿಂದ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ

Update: 2019-05-05 16:17 GMT

ಮೈಸೂರು,ಮೇ.5: ಜಮೀನು ಖಾತೆ ಮಾಡಿಕೊಡಲು ರೈತರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ.

ಮಹಿಳೆ ದೂರಿನ ಆಧಾರದ ಮೇಲೆ ಎಸಿಬಿ ತಂಡ ನಂಜನಗೂಡಿನ ದೇವಿರಮ್ಮಹಳ್ಳಿ ಬಡಾವಣೆಯಲ್ಲಿ ಕಾರ್ಯಾಚರನೆ ನಡೆಸಿ ಗ್ರಾಮ ಲೆಕ್ಕಾಧಿಕಾರಿಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಣಿಕಂಠ ಹೊಲ್ದೂರು ಮಠ ಬಂಧಿತ ಗ್ರಾಮ ಲೆಕ್ಕಾಧಿಕಾರಿ. 20 ಗುಂಟೆ ಖುಷ್ಕಿ ಜಮೀನು ಖಾತೆ ಮಾಡಿಕೊಡಲು ಜಮೀನು ಮಾಲಕರ ಬಳಿಯೇ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದ್ದು, ಈ ಸಂಬಂಧ ನೊಂದ ಮಹಿಳೆ ಎಸಿಬಿ ಡಿವೈಎಸ್ಪಿ ಅವರಿಗೆ ದೂರು ನೀಡಿದ್ದರು. ಪೊಲೀಸರ ಸೂಚನೆ ಮೇರೆಗೆ ಮಣಿಕಂಠ ಅವರಿಗೆ ಹತ್ತು ಸಾವಿರ ಹಣ ನೀಡುವುದಾಗಿ ಹೇಳಿ ಜಮೀನು ಮಾಲಕರ ಮನೆಗೆ ಕರೆಸಿಕೊಳ್ಳಲಾಗಿತ್ತು.

ಹಣ ಪಡೆಯುತ್ತಿದ್ದಾಗ ಮಣಿಕಂಠ ಹಾಗೂ ಆತನ ಸಹಾಯಕನನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಎಸಿಬಿ ಡಿವೈಎಸ್ಪಿ ಮಂಜುನಾಥ್, ನೇತೃತ್ವದಲ್ಲಿ ಈ ಕಾರ್ಯಾಚರನೆ ನಡೆದಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News