ವೈಮನಸ್ಸು ಬದಿಗಿಟ್ಟು ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿ: ಕಾರ್ಯಕರ್ತರಿಗೆ ಶಾಸಕ ನರೇಂದ್ರ ಮನವಿ

Update: 2019-05-07 11:32 GMT

ಹನೂರು, ಮೇ 7: ಪಕ್ಷದ ಕಾರ್ಯಕರ್ತರು ತಮ್ಮ ವೈಮನಸ್ಸುಗಳನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸಿ ಕಾಂಗ್ರೆಸ್ ಪಕ್ಷವನ್ನು ಹನೂರು ಪಟ್ಟಣದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಣ ತೊಡಿ ಎಂದು ಶಾಸಕ ನರೇಂದ್ರರಾಜುಗೌಡ ಹೇಳಿದರು.

ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪಟ್ಟಣ ಪಂಚಾಯತ್ ಚುನಾವಣೆಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯ ಚುನಾವಣೆಯ ಸೋಲು- ಗೆಲುವು ಒಬ್ಬ ವ್ಯಕ್ತಿಯ ವರ್ಚಸ್ಸು ಮತ್ತು ಸಾಮರ್ಥ್ಯದ ಆಧಾರದ ಮೇಲೆ ನಿರ್ಧಾರವಾಗಲಿದ್ದು, ಪಕ್ಷದ ಪಾತ್ರ ಹೆಚ್ಚು ಇರುವುದಿಲ್ಲ. ಪ್ರತಿ ವಾರ್ಡ್‍ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಆಯಾಯ ವಾರ್ಡ್‍ನಲ್ಲೇ ಇರುವ ಮುಖಂಡರು ಚರ್ಚಿಸಿ ಸೂಕ್ತ ಅಭ್ಯರ್ಥಿಯನ್ನು ಸೂಚಿಸಿ ಮತ್ತೊಮ್ಮೆ ಹನೂರು ಪಟ್ಟಣವನ್ನು ಕಾಂಗ್ರೆಸ್ ಭದ್ರಕೋಟೆ ಎಂದು ಸಾಬೀತು ಪಡಿಸುವುದು ನಿಮ್ಮ ಕೈಯಲ್ಲಿದೆ ಎಂದರು.

ಆಮಿಷಗಳಿಗೆ ಮರುಳಾಗಬೇಡಿ: ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲು ಉಂಟಾಗುವುದಾದರೆ ಅದು ಕಾಂಗ್ರೆಸ್ನ ಕಾರ್ಯಕರ್ತರ ಕಿತ್ತಾಟದಿಂದ ಮಾತ್ರ ಸಾಧ್ಯ. ಇಂತಹ ಸನ್ನಿವೇಶಕ್ಕೆ ಆಸ್ಪದ ನೀಡದೆ ಮತ್ತು ಯಾವುದೇ ಕಾರಣಕ್ಕೂ ಕಾರ್ಯಕರ್ತರು ಅನ್ಯ ಪಕ್ಷದ ಮುಖಂಡರ ಆಮಿಷ ಹಾಗೂ ಭರವಸೆಗಳಿಗೆ  ಮರುಳಾಗದೆ ಪಕ್ಷ ನಿಷ್ಠೆಯಿಂದ ಈ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ತಾಪಂ ಅಧ್ಯಕ್ಷ ರಾಜೇಂದ್ರ, ಕಾಂಗ್ರೆಸ್‍ನ ವೀಕ್ಷಕ ರವಿಕುಮಾರ್, ಸುಹೇಲ್‍ ಆಲಿ ಖಾನ್, ಶಿವಮೂರ್ತಿ, ಅರುಣ್‍ ಕುಮಾರ್, ಮುಖಂಡರಾದ ಜಯಪ್ರಕಾಶ್‍ ಗುಪ್ತ, ಚಿಕ್ಕತಮ್ಮಯ್ಯಗೌಡ, ಮಾಜಿ ಪಪಂ ಅಧ್ಯಕ್ಷ ರಾಜುಗೌಡ, ಟಿಎಂಪಿಸಿಸಿ ನಿರ್ದೇಶಕ ಮಾದೇಶ್, ರೋಟರಿ ಅಧ್ಯಕ್ಷ ಗಿರೀಶ್, ಹನೂರು ಟೌನ್ ಯುವ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಹನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಾದೇಶ್ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News