ಮಾತೃ ಪಕ್ಷಕ್ಕೆ ದ್ರೋಹ ಮಾಡಿದವರಿಗೆ ತಕ್ಕ ಪಾಠ: ಡಾ.ಜಿ.ಪರಮೇಶ್ವರ್

Update: 2019-05-07 14:25 GMT

ಕಲಬುರಗಿ, ಮೇ 7: ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿ ಸೇರಿದ ಉಮೇಶ್ ಜಾಧವ್‌ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಅವರು ಹಣಕ್ಕಾಗಿ ತಮ್ಮನ್ನು ಮಾರಿಕೊಂಡಿದ್ದಾರೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ನಮ್ಮ ಅಭ್ಯರ್ಥಿ ಸುಭಾಷ್ ರಾಠೋಡ್ ಗೆಲ್ಲುವುದು ನಿಶ್ಚಿತ. ಜನರೇ ಉಮೇಶ್ ಜಾಧವ್‌ಗೆ ಪಾಠ ಕಲಿಸುತ್ತಾರೆ ಎಂದರು.

ಈ ಬಾರಿಯ ಚುನಾವಣೆಯಲ್ಲಿ ವೈಯಕ್ತಿಕ ನಿಂದನೆ ಮಾಡುವ ಮೂಲಕ ತೇಜೋವಧೆ ಮಾಡುವ ಪರಿಪಾಠವನ್ನು ಬಿಜೆಪಿ ಬೆಳೆಸಿಕೊಂಡಿದೆ. ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದಿ.ರಾಜೀವ್‌ ಗಾಂಧಿ ಬಗ್ಗೆ ಅವಹೇಳನ ಮಾಡಿ, ತೇಜೋವಧೆ ಮಾಡುವುದನ್ನು ನೋಡಿದರೆ ಬಿಜೆಪಿ ಸಂಸ್ಕೃತಿ ಏನೆಂಬುದು ಗೊತ್ತಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಉಂಟಾಗಿರುವ ಬರ ಪರಿಹಾರ ನೀಡಲು ಕೇಂದ್ರ ಸರಕಾರ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಮೇಲೆ ಒತ್ತಡ ತರುವ ಬದಲು ಯಡಿಯೂರಪ್ಪ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ಟೀಕಿಸಿದರು.

ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸೋಲಿಸಲು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರೇ ಸೋಲಿಸಲು ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ. ಆದುದರಿಂದ, ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ದೇವೇಗೌಡರ ಪರವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದೇವೇಗೌಡರ ಗೆಲುವು ಖಚಿತ. ಮೈತ್ರಿ ಸರಕಾರದಲ್ಲಿಯೂ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಪರಮೇಶ್ವರ್ ಹೇಳಿದರು.

ಸಂವಿಧಾನ ಬದಲಾವಣೆಗೆ ಅವಕಾಶವಿಲ್ಲ: ಸಂವಿಧಾನ ಬದಲಾಯಿಸುವುದಾಗಿ ಬಿಜೆಪಿಯವರು ನೀಡಿರುವ ಹೇಳಿಕೆ ದೇಶಕ್ಕೆ ಮಾರಕ. ಸಂವಿಧಾನವನ್ನು ಬದಲಾಯಿಸಲು ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಪಕ್ಷದ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇಂತಹ ಹೇಳಿಕೆಗಳಿಂದ ಪಕ್ಷ ಅಥವಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್ ಪಕ್ಷದಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಬಿಜೆಪಿ ಮುಖಂಡರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಪಕ್ಷದಲ್ಲಿ ಯಡಿಯೂರಪ್ಪರನ್ನು ಮೂಲೆ ಗುಂಪು ಮಾಡಲಾಗುತ್ತಿದೆ. ಮೊದಲು ಆ ಬಗ್ಗೆ ಬಿಜೆಪಿಯವರು ಗಮನ ಹರಿಸಲಿ ಎಂದರು.

ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಮುಂಬೈಗೆ ತೆರಳಿ ಹಿಡಿದುಕೊಂಡು ಬಂದಿದ್ದ ಕಮಲ ಬಾಡಿ ಹೋಗಿದೆ. ಚಿಂಚೋಳಿ ಕ್ಷೇತ್ರದ ನಮ್ಮ ಅಭ್ಯರ್ಥಿ ಸುಭಾಷ್ ರಾಠೋಡ್ ಬಿಜೆಪಿಯಲ್ಲಿದ್ದವರು. ಅಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು, ಸುಭಾಷ್ ರಾಠೋಡ್, ಕೆ.ಬಿ.ಶಾಣಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಿದ್ದಾರೆ.

-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News