ಮೋದಿ ಬರೀ ಭಾಷಣಗಳಿಂದಲೇ ಜನರ ಹೊಟ್ಟೆ ತುಂಬಿಸಲು ಮುಂದಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

Update: 2019-05-07 16:33 GMT

ಕಲಬುರಗಿ, ಮೇ 7: ‘ಭಾಷಣ್ ಸೇ ರೇಷನ್ ನಹೀ ಮಿಲ್ತಾ, ಕಾಮ್ ಸೇ ಮಿಲ್ತಾ ಹೈ’(ಭಾಷಣದಿಂದ ಪಡಿತರ ಸಿಗುವುದಿಲ್ಲ. ಕೆಲಸದಿಂದ ಸಿಗುತ್ತದೆ) ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಇಲ್ಲಿನ ಚಿಂಚೋಳಿ ಕ್ಷೇತ್ರದ ಚಂದನಕೇರಾ ಗ್ರಾಮದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಬರೀ ಭಾಷಣಗಳಿಂದಲೇ ಜನರ ಹೊಟ್ಟೆ ತುಂಬಿಸಲು ಮುಂದಾಗಿದ್ದಾರೆ. ಆದರೆ, ಭಾಷಣದಿಂದ ಹೊಟ್ಟೆ ತುಂಬುವುದಿಲ್ಲ. ಬದಲಿಗೆ ಜನರ ಕಷ್ಟಗಳನ್ನು ಪರಿಹರಿಸಬೇಕು ಎಂದು ಸಲಹೆ ಮಾಡಿದರು.

ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಜಾಧವ್ ಕ್ಷೇತ್ರದ ಜನರ ನಂಬಿಕೆಗೆ ದ್ರೋಹ ಮಾಡಿದ್ದು, ಹಣಕ್ಕೆ ತಮ್ಮನ್ನು ಮಾರಾಟ ಮಾಡಿಕೊಂಡಿದ್ದಾರೆ. ಇಂತಹ ವ್ಯಕ್ತಿಗೆ ಜನತೆ ತಕ್ಕ ಪಾಠ ಕಲಿಸಬೇಕು. ಆ ಮೂಲಕ ಬೇರೆಯವರಿಗೂ ಇದು ರಾಜಕೀಯ ಪಾಠ ಆಗಬೇಕು ಎಂದು ಹೇಳಿದರು.

ಮೇ 23ಕ್ಕೆ ಬದಲಾವಣೆ: ಸಭೆಯಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಮೇ 23ಕ್ಕೆ ಲೋಕಸಭೆ ಚುನಾವಣೆ ಫಲಿತಾಂಶ ಬರಲಿದ್ದು, ದೇಶದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಮೋದಿ ಮನೆಗೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಯಾರು ನಿಧನ: ಕುಂದಗೋಳ ಕ್ಷೇತ್ರದಲ್ಲಿ ಸಿ.ಎಸ್.ಶಿವಳ್ಳಿ ನಿಧನದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಆದರೆ, ಚಿಂಚೋಳಿ ಕ್ಷೇತ್ರದಲ್ಲಿ ಯಾರು ನಿಧನ ಆಗಿದ್ದು ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್, ಪಕ್ಷದಿಂದ ಆಯ್ಕೆಯಾಗಿ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ಉಪ ಚುನಾವಣೆಗೆ ಕಾರಣರಾಗಿದ್ದಾರೆ ಎಂದು ಟೀಕಿಸಿದರು.

ಜಾಧವ್‌ರಿಗೆ ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ಎಲ್ಲ ಸಹಕಾರ ನೀಡಿದ್ದರು. ಆದರೂ ಅವರು ಬಿಜೆಪಿಗೆ ಹೋಗಿದ್ದೇಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಆಮಿಷಕ್ಕೆ ಬಲಿಯಾಗಿ ಪಕ್ಷ ದ್ರೋಹ ಮಾಡಿದ ವ್ಯಕ್ತಿಗೆ ಕ್ಷೇತ್ರದ ಮತದಾರರು ಪಾಠ ಕಲಿಸಬೇಕು ಎಂದು ಕೋರಿದರು.

ಎರಡು ಬಾರಿ ಶಾಸಕನಾದರೆ ಸಚಿವರಾಗಬೇಕೆಂದು ಆಸೆಪಡುವುದು ದುರಾಸೆ. ನಾನೂ ನಾಲ್ಕು ಬಾರಿ ಶಾಸಕನಾದ ಮೇಲೆ ಸಚಿವನಾಗಿದ್ದು. ಮತ್ತೆ ಪಕ್ಷ ಬೇರೆ ಜವಾಬ್ದಾರಿ ವಹಿಸಿದ ಮೇಲೆ ಅದನ್ನೂ ನಿರ್ವಹಿಸುತ್ತಿದ್ದೇನೆ. ಅವರಿಗೂ ಸಚಿವರನ್ನಾಗಿ ಮಾಡುವ ಎಂದು ಭರವಸೆಯನ್ನೂ ನೀಡಲಾಗಿತ್ತು ಆದರೆ, ತಾಳ್ಮೆಯಿಲ್ಲದೆ ಪಕ್ಷ ತ್ಯಜಿಸಿ ನಮ್ಮ ನಾಯಕರ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆಶ್ರಯ ನೀಡಿದ ಮನೆಗೆ ಕನ್ನ ಹಾಕಿದವರನ್ನು ವಂಚಕ, ಹೇಡಿ ಎನ್ನಬೇಕಾಗುತ್ತದೆ. ಅಂತವರಿಗೆ ಹಾಗೂ ಅವರ ಮಗನಿಗೆ ಇಲ್ಲಿ ಮತ್ತೆ ಕಾಲಿಡದಂತೆ ಮಾಡಿ ಎಂದು ಮನವಿ ಮಾಡಿದ ಅವರು, ಕೋಮುವಾದಿ ಬಿಜೆಪಿಗೆ ಕ್ಷೇತ್ರದ ಜನತೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದು ಕೋರಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್, ರಹೀಂಖಾನ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಸೋಮಶೇಖರ್, ಕೈಲಾಶನಾಥ ಪಾಟೀಲ್, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಅಲ್ಲಮಪ್ರಭು ಪಾಟೀಲ್ ಉಪಸ್ಥಿತರಿದ್ದರು.

‘ಜಾಧವ್ ಇಎಸ್‌ಐ ವೈದ್ಯರಾಗಿದ್ದ ವೇಳೆ ಇಂಜೆಕ್ಷನ್‌ಗೆ ಔಷಧಿ ತುಂಬಿಸುತ್ತಿದರೋ ಅಥವಾ ನೀರು ತುಂಬಿಸುತ್ತಿದ್ದರೋ ಗೊತ್ತಿಲ್ಲ. ಈ ವೇಳೆ ಏನು ತಪ್ಪು ಮಾಡಿ ಅಮಾನತ್ತು ಆಗಿದ್ದರು. ಆತನ ಮೇಲೆ ವಿಚಾರಣೆ ಇನ್ನೂ ಬಾಕಿ ಇದೆ. ನಮ್ಮದೆ ಸರಕಾರ ಆಡಳಿತದಲ್ಲಿದ್ದು, ಈ ಬಗ್ಗೆ ವಿಚಾರ ಮಾಡುತ್ತೇವೆ’

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News