ಎಡಪಂಥೀಯ ಒಲವಿನ ‘ಒಡಲಾಳದ ಕಥನಗಳು’

Update: 2019-05-07 18:31 GMT

ಚಳವಳಿಯ ಹಿನ್ನೆಲೆಯಿರುವ ಕೆ. ಮಹಾಂತೇಶ್ ಅವರ ‘ಒಡಲಾಳದ ಕಥನಗಳು’ ಹೋರಾಟದ ಒಡಲಾಳದಿಂದ ಪಡಿ ಮೂಡಿರುವ ಕೃತಿ. ತಮ್ಮ ಚಳವಳಿಯ ಭಾಗವಾಗಿ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ. ಬೇರೆ ಬೇರೆ ವ್ಯಕ್ತಿ, ಘಟನೆಗಳು, ವಿದ್ಯಮಾನಗಳನ್ನು ಒಳಗೊಂಡಿರುವ ಲೇಖನಗಳಾದರೂ ಅವೆಲ್ಲದರ ಜೀವದ್ರವ್ಯ ಒಂದೇ. ಶೋಷಣೆ, ಜಾತೀಯ, ಬಡತನ, ಕಾರ್ಮಿಕರ ಹಕ್ಕುಗಳು ಇವುಗಳು ಬೇರೆ ಬೇರೆ ಲೇಖನಗಳಲ್ಲಿ ಮತ್ತೆ ಮತ್ತೆ ನಮ್ಮನ್ನು ಮುಖಾಮುಖಿಯಾಗುತ್ತವೆ.
 ಲೇಖಕರು ಕೃತಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ. ಮೊದಲ ಭಾಗಕ್ಕೆ ಅರಿವಿನ ಕಥನಗಳು ಎಂದು ಕರೆದಿದ್ದಾರೆ. ಮಹಾಡ್ ಸತ್ಯಾಗ್ರಹ, ಮೀರತ್ ಪಿತೂರಿ, ರಶ್ಯಾ ಕ್ರಾಂತಿ, ತಾಯಿ ಕಾದಂಬರಿ, ಸ್ವಾತಂತ್ರ ಸಂಗ್ರಾಮದ ಕ್ರಾಂತಿಕಾರಿಗಳು, ಚೆಗುವಾರ, ಸಫ್ದರ್ ಹಷ್ಮಿ ಮೊದಲಾದ ವಿಷಯಗಳ ಬಗ್ಗೆ ಇಲ್ಲಿ ಬರೆದಿದ್ದಾರೆ. ಎಡಪಂಥೀಯ ಒಲವಿನಿಂದ ವಿಸ್ತರಿಸಿಕೊಂಡ ಲೇಖನಗಳು ಇವು. ‘ಭಾರತದಲ್ಲಿ ಗೋವುಗಳ ಸಂತತಿ ನಶಿಸುತ್ತಿದೆಯೇ?’ ಮತ್ತು ‘ನೆಹರೂ-ಪಟೇಲ್ ವಾರಸುದಾರಿಕೆಗೆ ಪೈಪೋಟಿ’ ಈ ಎರಡು ಲೇಖನಗಳು ಅಧ್ಯಾಯದಲ್ಲಿ ಬೇರೆಯಾಗಿ ನಿಲ್ಲುತ್ತವೆ. ದೇಶದಲ್ಲಿ ಗೋಮಾತೆ ಎಂದು ಪೂಜಿಸುವ ಹಸು ಆಹಾರಕ್ಕೆ ಬಳಕೆಯಾಗುವುದು ಕಡಿಮೆ, ಬದಲಿಗೆ ಎತ್ತುಗಳನ್ನು ಹೆಚ್ಚು ಬಳಸುತ್ತಾರೆ. ಗೋವುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎನ್ನುವುದು ಅಪಪ್ರಚಾರ. ಬದಲಿಗೆ ಹಸುಗಳ ಸಂಖ್ಯೆ ಜಾಸ್ತಿಯಾಗಿವೆ ಎನ್ನುವುದನ್ನು ಅವರು ತಮ್ಮ ಲೇಖನದಲ್ಲಿ ಪ್ರತಿಪಾದಿಸುತ್ತಾರೆ. ಇನ್ನೊಂದು ಲೇಖನದಲ್ಲಿ ನೆಹರೂ ಮತ್ತು ಪಟೇಲ್ ಅವರನ್ನು ಮುಂದಿಟ್ಟು ದೇಶದಲ್ಲಿ ನಡೆಯುತ್ತಿರುವ ರಾಜಕಾರಣದ ಕುರಿತಂತೆ ವಿಶ್ಲೇಷಿಸಿದ್ದಾರೆ.
 ಹೋರಾಟದ ಕಥನಗಳು ವಿಭಾಗದಲ್ಲಿ, ಆಂದೋಲ, ಹೋರಾಟ ಇವುಗಳು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ.ಪಶ್ಚಿಮಘಟ್ಟದ ತಲ್ಲಣಗಳು, ಮತ್ತೆ ಜನತೆಯತ್ತ ಸಮುದಾಯ, ಮುನ್ನಾರ್ ಮಲ್ಲಿಗೆ ಉತ್ಕ್ರಾಂತಿ, ಕೇರಳ ಜನರೂಪಿತ ವಿನೂತನ ಯೋಜನೆ ಇತ್ಯಾದಿ ವಿಷಯ ವೈವಿಧ್ಯಗಳನ್ನು ಒಳಗೊಂಡಿವೆ. ಕಾನೂನು ಕಥನದಲ್ಲಿ, ಹೇಗೆ ನ್ಯಾಯಾಲಯದಿಂದ ಕಾರ್ಮಿಕ ವಿರೋಧಿ ತೀರ್ಪುಗಳು ಬರುತ್ತಿವೆ ಎಂದು ಆತಂಕ ಪಡುತ್ತಾರೆ. ಕಾರ್ಮಿಕ ಕಾನೂನು ತಿದ್ದುಪಡಿಯ ದುರಂತ, ಕಟ್ಟಡ ಕಾರ್ಮಿಕರ ಅಳಲುಗಳನ್ನು ಈ ಅಧ್ಯಾಯ ತೆರೆದಿಡುತ್ತದೆ. ಕೊನೆಯ ಅಧ್ಯಾಯ ‘ಮರೆಯಲಾಗದ ಕಥನಗಳು’ ಲೇಖಕರ ವೈಯಕ್ತಿಕ ಅನುಭವ ನೆಲೆಯಲ್ಲಿ ನಿರೂಪಣೆಗೊಂಡಿರುವುದು ಅಸ್ಪಶ್ಯತೆ, ಕ್ರಾಂತಿ, ಹೋರಾಟ ಇವೆಲ್ಲವೂ ಲೇಖಕರ ಬದುಕನ್ನು ಆವರಿಸಿಕೊಂಡ ಬಗೆಯನ್ನು ಅಧ್ಯಾಯ ತೆರೆದಿಡುತ್ತದೆ. ಪ್ರಿಯಾ ಮಾಧ್ಯಮ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 166. ಮುಖಬೆಲೆ 130. ಆಸಕ್ತರು 22234369 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News