​ನಾಪತ್ತೆಯಾಗಿದ್ದ ಪೊಲೀಸ್ ತಿಹಾರ್ ಜೈಲಿನ ಕೈದಿಯಾಗಿ ಪತ್ತೆ !

Update: 2019-05-08 06:17 GMT

ಮೀರಠ್, ಮೇ 8: ಕಳೆದ ವರ್ಷದ ನವೆಂಬರ್‌ನಲ್ಲಿ ಒಂದು ತಿಂಗಳ ರಜೆ ಮೇಲೆ ತೆರಳಿದ್ದ ಪೊಲೀಸ್ ಪೇದೆಯೊಬ್ಬರು ಐದು ತಿಂಗಳಿಂದ ನಾಪತ್ತೆಯಾಗಿದ್ದು, ಆದರೆ ಆತ 1987ರ ಹಶೀಂಪುರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯಲ್ಲಿ ಕಳೆಯುತ್ತಿದ್ದಾನೆ ಎನ್ನುವ ಅಂಶ ಇದೀಗ ಉತ್ತರ ಪ್ರದೇಶ ಪೊಲೀಸ್ ಇಲಾಖೆಗೆ ಮನವರಿಕೆಯಾಗಿದೆ.

ಇಲಾಖಾ ವಿಚಾರಣೆ ಬಳಿಕ ಬಿಜನೋರ್‌ನ ಭದ್ರಾಪುರ ಪೊಲೀಸ್ ಠಾಣೆಯ ಪೇದೆ ಕನ್ವರ್‌ಪಾಲ್ ಸಿಂಗ್ (55)ನನ್ನು ಶುಕ್ರವಾರ ಸೇವೆಯಿಂದ ವಜಾಗೊಳಿಸಲಾಗಿದೆ.

ನವೆಂಬರ್ 15ರಂದು ಸಿಂಗ್ ಒಂದು ತಿಂಗಳ ರಜೆ ಮೇಲೆ ತೆರಳಿದ್ದ. ಹುಟ್ಟೂರು ಶಾಮ್ಲಿಯಿಂದ ವಾಪಾಸು ಬರುವಾಗ ಸಿಹಿತಿಂಡಿ ತರುವಂತೆ ಸಹೋದ್ಯೋಗಿಗಳು ಆತನನ್ನು ಕೇಳಿದ್ದರು. ಆದರೆ ಹಿಂದೆ ಉತ್ತರಪ್ರದೇಶದ ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಯಾಗಿದ್ದ ಈತನನ್ನು 2018ರ ಅಕ್ಟೋಬರ್ 31ರಂದು ದೆಹಲಿ ಹೈಕೋರ್ಟ್, ಆರೋಪಿ ಎಂದು ಘೋಷಿಸಿದ್ದ ಅಂಶ ಯಾರಿಗೂ ತಿಳಿದಿರಲೇ ಇಲ್ಲ. 1987ರ ಮೇ 22ರಂದು 42 ಮಂದಿ ಮುಸ್ಲಿಮರನ್ನು ಗುಂಡಿಟ್ಟು ಕೊಂದ ಆರೋಪಕ್ಕೆ ಸಂಬಂಧಿಸಿದಂತೆ 15 ಮಂದಿ ಇತರರ ಜತೆಗೆ ಈತನಿಗೂ ಜೀವಾವಧಿ ಶಿಕ್ಷೆ ಘೋಷಿಸಲಾಗಿತ್ತು.

19 ಮಂದಿ ಪಿಎಸಿ ಜವಾನರನ್ನು ದೋಷಮುಕ್ತಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿ ಈ ಎಲ್ಲರನ್ನೂ 2018ರ ನವೆಂಬರ್ 22ರಂದು ನ್ಯಾಯಾಲಯಕ್ಕೆ ಶರಣಾಗುವಂತೆ ದೆಹಲಿ ಹೈಕೋರ್ಟ್ ಸೂಚಿಸಿತ್ತು. ಇದೇ ವೇಳೆಗೆ ಸಿಂಗ್ ದೀರ್ಘ ರಜೆ ಹಾಕಿ ತೆರಳಿದ್ದ.
ಸಿಂಗ್‌ಗೆ ಶಿಕ್ಷೆಯಾದ ವಿಚಾರ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಗಮನಕ್ಕೆ ಬಂದಿರಲಿಲ್ಲ. ಆತ ಸೇವೆಗೆ ಹಾಜರಾಗದೇ ಇದ್ದುದರಿಂದ 2019 ಎ. 1ರಂದು ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಆತನ ಚಲನ ವಲನಗಳನ್ನು ತಿಳಿಯುವ ಸಲುವಾಗಿ ಇಲಾಖಾ ವಿಚಾರಣೆ ನಡೆಸಿದಾಗ ಆತನಿಗೆ ಶಿಕ್ಷೆಯಾದ ವಿಚಾರ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News