ಸಾಲ ಮನ್ನಾ ದಾಖಲೆ ಕೇಳಿದ ಶಿವರಾಜ್‌ಸಿಂಗ್ ಚೌಹಾಣ್ ಮನೆಗೆ ಎರಡು ವಾಹನಗಳಲ್ಲಿ ಪುರಾವೆ !

Update: 2019-05-08 05:18 GMT

ಭೋಪಾಲ್, ಮೇ 8: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ 21 ಲಕ್ಷ ರೈತರ ಸಾಲಮನ್ನಾ ಮಾಡಿದೆ ಎನ್ನುವುದಕ್ಕೆ ಸೂಕ್ತ ಪುರಾವೆ ಒದಗಿಸಿ ಎಂದಿದ್ದ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರ ನಿವಾಸಕ್ಕೆ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಸುರೇಶ್ ಪಚೌರಿ ಎರಡು ವಾಹನಗಳಲ್ಲಿ ದಾಖಲೆಗಳನ್ನು ತುಂಬಿಕೊಂಡು ಹೋಗಿ ಬಿಜೆಪಿ ಮುಖಂಡನ ನಿವಾಸದಲ್ಲಿ ಇಳಿಸಿದ ಅಪರೂಪದ ಘಟನೆ ನಡೆದಿದೆ.

ಆದಾಗ್ಯೂ ಚೌಹಾಣ್ ಕಾಂಗ್ರೆಸ್ ಪಕ್ಷದ ಪ್ರತಿಪಾದನೆಯನ್ನು ಸುಳ್ಳಿನ ಕಂತೆ ಎಂದು ಬಣ್ಣಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಪಚೌರಿ, ರಾಜ್ಯದ ಸಚಿವ ಪಿ.ಸಿ.ಶರ್ಮಾ ಮತ್ತು ಇತರ ಕಾಂಗ್ರೆಸ್ ಮುಖಂಡರ ಜತೆಗೆ ಎರಡು ವಾಹನಗಳಲ್ಲಿ ಕತಡಗಳ ಕಂತೆಯನ್ನು ಚೌಹಾಣ್ ನಿವಾಸಕ್ಕೆ ಒಯ್ದರು. ಬಳಿಕ ತಲೆಯಲ್ಲಿ ಹೊತ್ತೊಯ್ದು ಮಾಜಿ ಸಿಎಂ ನಿವಾಸದಲ್ಲಿ ರಾಶಿ ಹಾಕಿದರು.

ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗೆ ಅನುಗುಣವಾಗಿ ಕಮಲ್‌ನಾಥ್ ಸರ್ಕಾರ ಸಾಲ ಮನ್ನಾ ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಮುಖಂಡರು ದಾಖಲೆಗಳನ್ನು ಇಳಿಸಿ ಹೋದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೌಹಾಣ್, "ಇದು ಸುಳ್ಳಿನ ಕಂತೆ" ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ 48 ಸಾವಿರ ಕೋಟಿ ರೂ. ನೀಡಬೇಕಿತ್ತು. ಆದರೆ ಇದುವರೆಗೆ ಕೇವಲ 13 ಸಾವಿರ ಕೋಟಿ ರೂ. ನೀಡಿದೆ ಎನ್ನುವುದು ಬಿಜೆಪಿ ಮುಖಂಡರ ಆರೋಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News