ಹಿಂದುಳಿದವರಾಗಿದ್ದರೆ ಮೋದಿಯನ್ನು ಪ್ರಧಾನಿಯಾಗಲು ಆರೆಸ್ಸೆಸ್ ಬಿಡುತ್ತಿತ್ತೇ?: ಮಾಯಾವತಿ

Update: 2019-05-10 09:11 GMT

ಹೊಸದಿಲ್ಲಿ, ಮೇ 10: ‘‘ಪ್ರಧಾನಿ ನರೇಂದ್ರ ಮೋದಿ ಹುಟ್ಟಿನಿಂದಲೇ ಹಿಂದುಳಿದವರಾಗಿಲ್ಲ ಹಾಗೂ ಜಾತೀಯತೆಯ ದೌರ್ಜನ್ಯದ ನೋವನ್ನು ಅವರು ಅನುಭವಿಸಿಲ್ಲ. ಬದಲಾಗಿ ಅವರು ತಮ್ಮನ್ನು ಹಿಂದುಳಿದ ವರ್ಗದವನೆಂದು ಹೇಳಿಕೊಂಡು ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಅವರು ಹುಟ್ಟಿನಿಂದಲೇ ಹಿಂದುಳಿದವರಾಗಿದ್ದರೆ ಆರೆಸ್ಸೆಸ್ ಅವರನ್ನು ಪ್ರಧಾನಿಯಾಗಲು ಬಿಡುತ್ತಿತ್ತೇ? ಕಲ್ಯಾಣ್ ಸಿಂಗ್ ಅವರಂತಹವರಿಗೆ ಆರೆಸ್ಸೆಸ್ ಮಾಡಿದ ಗತಿಯೇನು ಎಂಬುದು ದೇಶಕ್ಕೆ ತಿಳಿದಿದೆ’’ ಎಂದು ಹೇಳುವ ಮೂಲಕ ಬಹುಜನ್ ಸಮಾಜ ಪಕ್ಷದ ಮುಖ್ಯಸ್ಥ ಮಾಯಾವತಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಹರಿಹಾಯ್ದಿದ್ದಾರೆ.

ಗುರುವಾರ ತಮ್ಮ ಆಝಂಘರ್ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಎಸ್ಪಿ-ಬಿಎಸ್ಪಿ ಮೈತ್ರಿ ವಿರುದ್ಧ ನಡೆಸಿದ ವಾಗ್ದಾಳಿಯ ಹಿನ್ನೆಲೆಯಲ್ಲಿ ಮಾಯಾವತಿಯ ಈ ಟೀಕೆ ಬಂದಿದೆ.

‘‘ಉತ್ತರ ಪ್ರದೇಶದ ಮಹಾಮೈತ್ರಿಯ ಬಗ್ಗೆ ಮೋದಿಗೆ ಹೇಳಿಕೊಳ್ಳುವಂತಹದ್ದು ಏನೂ ಇಲ್ಲ, ಅದೇ ಕಾರಣಕ್ಕೆ ಅವರು ಈ ಮೈತ್ರಿಯನ್ನು ಜಾತೀಯ ಮೈತ್ರಿ ಎಂದಿದ್ದರೆ ಅವರ ಹೇಳಿಕೆ ಬಾಲಿಶವೆಂಬಂತೆ ಅನಿಸುತ್ತದೆ’’ ಎಂದು ಮಾಯಾವತಿ ಹೇಳಿದರು.

ತಮ್ಮನ್ನು ಹಾಗೂ ಅಖಿಲೇಶ್ ಯಾದವ್ ಅವರನ್ನು ಉಲ್ಲೇಖಿಸುತ್ತಾ ‘‘ಸ್ವತಃ ಜಾತೀಯತೆಯ ಬಲಿಪಶುವಾದವರು ಹೇಗೆ ಜಾತೀಯತೆ ಉತ್ತೇಜಿಸುತ್ತಾರೆ?’’ ಎಂದು ಮಾಯಾವತಿ ಪ್ರಶ್ನಿಸಿದರು.

ಪ್ರಧಾನಿ ಮೋದಿ ಹುಟ್ಟಿನಿಂದ ಹಿಂದುಳಿದವರಲ್ಲ ನಂತರ ಹಿಂದುಳಿದವರೆಂದು ಹೇಳಿಕೊಂಡಿದ್ದಾರೆಂದು ಮಾಯಾವತಿ ಆಗಾಗ ಹೇಳುತ್ತಲೇ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News