ಬರ ನಿರ್ವಹಣೆ ಸಮರ್ಪಕ: ಡಾ.ಜಿ.ಪರಮೇಶ್ವರ್ ಶ್ಲಾಘನೆ

Update: 2019-05-10 17:46 GMT

ತುಮಕೂರು, ಮೇ 10: ಕಳೆದ ವರ್ಷ ಬರ ಪರಿಸ್ಥಿತಿ ವೇಳೆ ಕಳಪೆ ಮೇವು ಪೂರೈಕೆ ಮಾಡಿದ್ದ 94 ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆ ನಡೆಯುತ್ತಿದ್ದು, ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಭೀಕರ ಬರಗಾಲ ಉಂಟಾಗಿದ್ದು, ಕುಡಿಯುವ ನೀರು, ಮೇವು ಹಾಗೂ ನರೇಗಾ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆ ಒಟ್ಟು 45 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮುಂದಿನ 11 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು ಇದ್ದು, ಕುರಿ, ಮೇಕೆಗಳ ಮೇವಿಗೆ ಬೇಡಿಕೆ ಬಂದಲ್ಲಿ ಮೇವು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಗುಣಮಟ್ಟದ ಮೇವು ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕಳೆದ ಬಾರಿ ಕಳಪೆ ಮೇವು ಪೂರೈಸಿದ್ದ ಜಿಲ್ಲೆಯ ಒಟ್ಟು 94 ಅಧಿಕಾರಿಗಳ ಮೇಲೆ ನಡೆಯುತ್ತಿರುವ ವಿಚಾರಣೆ ಮುಗಿದ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಚಿಕ್ಕನಾಯಕನಹಳ್ಳಿ, ಕುಣಿಗಲ್, ತಿಪಟೂರು, ಕೊರಟಗೆರೆ, ಗುಬ್ಬಿ ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು, ಜಿಲ್ಲೆಯಲ್ಲಿ ಮಳೆ ಪ್ರಮಾಣ ಕುಸಿದಿರುವುದರಿಂದ ಈ ಬಾರಿ ಕುಡಿಯುವ ನೀರು, ಮೇವಿಗೆ ಸಮಸ್ಯೆ ಉಂಟಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಸಿಇಒ ಅವರು ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗೆ ಟ್ಯಾಂಕರ್ ಮೂಲಕ ಹಾಗೂ ಕೊಳವೆಬಾವಿಯನ್ನು ಕೊರೆಸುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಜಿಲ್ಲೆಯ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ, ಜನರ ಸಮಸ್ಯೆಗಳನ್ನು ರೆಕಾರ್ಡ್ ಮಾಡಲಾಗುತ್ತಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲಾಗಿದೆ, ಪ್ರತಿ ಹೋಬಳಿಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಸಿಇಒ ಅವರು ಪ್ರತಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೊಸದಾಗಿ 313 ಹೊಸ ಕೊಳವೆ ಬಾವಿ ಕೊರೆಯಲಾಗಿದೆ, ಆದ್ಯತೆ ಮೇರೆಗೆ ಕುಡಿಯುವ ನೀರಿನ ಪರಿಸ್ಥಿತಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರತಿ ನಿತ್ಯ ಪರಿಶೀಲಿಸಲು ಪಂಚಾಯತ್ ರಾಜ್ ಗ್ರಾಮೀಣ ಕುಡಿಯುವ ನೀರು ವಿಭಾಗದ ಎಇಇ ಅವರಿಗೆ ಜವಾಬ್ದಾರಿ ನೀಡಲಾಗಿದ್ದು, ಬರ ಪರಿಸ್ಥಿತಿ ಇರುವುದರಿಂದ ಕೊಳವೆ ಬಾವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ತಿಳಿಸಲಾಗಿದೆ ಎಂದರು.

74 ಗ್ರಾಮ ಪಂಚಾಯತ್ ಗಳ 122 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ  ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, 425 ಟ್ರಿಪ್ ನೀರು ಪೂರೈಸಲಾಗುತ್ತಿದೆ. ನೀರು ಪೂರೈಕೆಗಾಗಿ 186 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದ್ದು, ಪ್ರತಿ ಕೊಳವೆ ಬಾವಿಗೆ ತಿಂಗಳಿಗೆ 16ರಿಂದ 18 ಸಾವಿರ ಹಣವನ್ನು ನೀಡಲಾಗುತ್ತಿದೆ. ಪಾವಗಡ ಮಧುಗಿರಿ, ಗುಬ್ಬಿ, ಕುಣಿಗಲ್, ಕೊರಟಗೆರೆ, ಶಿರಾ ತಾಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಜಿ.ಪಂ.ಸಿಇಒ ಶುಭಾ ಕಲ್ಯಾಣ್, ಪಾಲಿಕೆ ಆಯುಕ್ತ ಟಿ.ಭೂಬಾಲನ್ ಇದ್ದರು.

ನರೇಗಾ ಬಾಕಿ ಶೀಘ್ರ
ಜಿಲ್ಲೆಯಲ್ಲಿ 50 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. 1 ಲಕ್ಷ ಮಾನವ ದಿನಗಳನ್ನು ಹೆಚ್ಚಿನದಾಗಿ ಸೃಜಿಸಲಾಗಿದ್ದು, 206 ಕೋಟಿ ಕಾಮಗಾರಿಗಳನ್ನು ನಡೆಸಲಾಗಿದೆ. 80 ಕೋಟಿ ನರೇಗಾ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕಿದ್ದು, ಇನ್ನೆರಡು ದಿನದಲ್ಲಿ 30 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನರೇಗಾ ಪಾಲಿನ 3400 ಕೋಟಿಗೂ ಅಧಿಕ ಅನುದಾನವನ್ನು ಬಿಡುಗಡೆ ಮಾಡಿಲ್ಲ, ರಾಜ್ಯ ಸರ್ಕಾರವೇ ಅನುದಾನವನ್ನು ನೀಡುತ್ತಿದ್ದು ಕೂಲಿ ಹಣವನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಬರ ನಿರ್ವಹಣೆಗೆ ಅನುದಾನ ನೀಡದ ಕೇಂದ್ರ
ರಾಜ್ಯದ 107 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, 16,500 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ರಾಜ್ಯ ಸರ್ಕಾರ 2,434 ಕೋಟಿ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು, ಆದರೆ ಕೇಂದ್ರ ಸರ್ಕಾರ 900 ಕೋಟಿ ಅನುದಾನವನ್ನು ಎರಡು ಮೂರು ಕಂತುಗಳಲ್ಲಿ ಬಿಡುಗಡೆ ಮಾಡಿದೆ, ಅದು ಸಹ ರಾಜ್ಯಕ್ಕೆ ನೀಡಬೇಕಿದ್ದ ಸಿಆರ್‍ಎಫ್ ಅನುದಾನವೇ ಹೊರತು ಬರಕ್ಕಾಗಿ ಏನು ನೀಡಿಲ್ಲ, ಪಕ್ಕದ ಮಹಾರಾಷ್ಟ್ರಕ್ಕೆ 4000 ಕೋಟಿಗೂ ಹೆಚ್ಚು ಅನುದಾನವನ್ನು ಬರಪರಿಸ್ಥಿತಿ ನಿರ್ವಹಣೆಗೆ ನೀಡಲಾಗಿದೆ ಎಂದು ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News