ಬೇಲಿಯೇ ಹೊಲ ಮೇಯಿತೇ?

Update: 2019-05-11 05:42 GMT

ವಿವಿಧ ಕಚೇರಿಗಳಲ್ಲಿ, ಪತ್ರಿಕಾಸಂಸ್ಥೆಗಳಲ್ಲಿ ಮಹಿಳೆಯರ ಮೇಲೆ ನಡೆಯುವ ನೇರ, ಪರೋಕ್ಷ ಲೈಂಗಿಕ ದೌರ್ಜನ್ಯಗಳ ವಿರುದ್ಧ ಇತ್ತೀಚೆಗೆ ದೇಶಾದ್ಯಂತ ‘ಮೀ ಟು’ ಚಳವಳಿ ಸುದ್ದಿ ಮಾಡಿತು. ದೇಶದ ಖ್ಯಾತ ಸೆಲೆಬ್ರಿಟಿಗಳ ಮೇಲೆ ವಿವಿಧ ಮಹಿಳೆಯರು ದೌರ್ಜನ್ಯ ಆರೋಪಗಳನ್ನು ಹೊರಿಸಿದರು. ತನ್ನ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಲು ‘ಮೀ ಟು’ ದೊಡ್ಡ ಮಟ್ಟದಲ್ಲಿ ನೆರವಾಗಿದೆ ಎಂದು ಮಾಧ್ಯಮಗಳೂ ನಂಬಿಸಿದವು. ‘ಮೀ ಟು’ ಚಳವಳಿಯನ್ನು ಹಲವರು ದುರ್ಬಳಕೆ ಮಾಡಿಕೊಂಡ ಆರೋಪಗಳೂ ಇವೆ. ಇದೇ ಸಂದರ್ಭದಲ್ಲಿ ‘ಮೀ ಟು’ ಚಳವಳಿಯಲ್ಲಿ ಮಹಿಳೆಯ ಆರೋಪವನ್ನಷ್ಟೇ ಮುಂದಿಟ್ಟುಕೊಂಡು ಪುರುಷನ ವಿರುದ್ಧ ತೀರ್ಪನ್ನು ನೀಡಲಾಗುವುದಿಲ್ಲ. ಎಂದೋ ನಡೆದ ಘಟನೆಗೆ ಇಂದು ಸಾಕ್ಷವನ್ನು ಸಂಗ್ರಹಿಸುವುದು ಅಸಾಧ್ಯ. ಘಟನೆ ನಡೆದಾಗ ಆ ಬಗ್ಗೆ ಸಂಪೂರ್ಣ ವೌನವಹಿಸಿ, ಎಷ್ಟೋ ದಶಕಗಳ ಬಳಿಕ, ಅದರ ಬಗ್ಗೆ ಮಾತನಾಡುವುದನ್ನು ಎಷ್ಟರಮಟ್ಟಿಗೆ ಒಪ್ಪಬಹುದು ಎನ್ನುವ ವಾದವೂ ಇದರ ಜೊತೆಗೆ ಚರ್ಚೆಗೆ ಬಂತು. ಭಾರತದಂತಹ ದೇಶದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳನ್ನು ಪೊಲೀಸರು ದಾಖಲಿಸುವುದಕ್ಕೆ ಹಿಂದೆ ಮುಂದೆ ನೋಡುವ ವಾತಾವರಣ ಇದೆ. ನ್ಯಾಯಾಲಯದಲ್ಲಿ ಅದು ಸಾಬೀತಾಗುವುದಂತೂ ದೂರದ ಮಾತು.

ಹೀಗಿರುವಾಗ, ಮೇಲ್ಮಧ್ಯಮ, ಶ್ರೀಮಂತ ವರ್ಗದ ಈ ‘ಮೀ ಟು’ ಚಳವಳಿಯನ್ನು ಮಾಧ್ಯಮಗಳು ಇಷ್ಟು ಗಂಭೀರವಾಗಿ ಚರ್ಚಿಸುವುದು ಸರಿಯೇ? ಎಂಬ ಮಾತೂ ಕೇಳಿ ಬಂತು. ‘ಮೀ ಟು’ ಪ್ರಕರಣಗಳಿಗೆ ಸಂಬಂಧಿಸಿ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ, ಈ ದೇಶದ ಅತ್ಯುನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ವಿರುದ್ಧವೇ ದಲಿತ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪವನ್ನು ಮಾಡಿದರು. ಇದು ಬರೀ ಆರೋಪ ಮಾತ್ರವಾಗಿರಲಿಲ್ಲ. ಅದಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನೂ ಒದಗಿಸಿದ್ದರು. ಆದರೆ ಈಗ ‘ಮೀ ಟು’ ಚಳವಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಳನ್ನೆಲ್ಲ ಅಣಕಿಸುವಂತೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು ಈ ಪ್ರಕರಣವನ್ನು ಮೂಲೆಗುಂಪು ಮಾಡಿ, ಆರೋಪಿಸಿದ ಮಹಿಳೆಯನ್ನೇ ಅಪರಾಧಿಯನ್ನಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆರೋಪ ಕೇಳಿ ಬಂದಿರುವುದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮೇಲೆ. ನ್ಯಾಯವ್ಯವಸ್ಥೆಯ ನೈತಿಕತೆಗೆ ಎದುರಾಗಿದ್ದ ಸವಾಲು ಇದು. ಹುದ್ದೆಯ ಘನತೆಯನ್ನು ಗಮನಿಸಿಕೊಂಡು ರಂಜನ್ ಗೊಗೊಯಿ ತಕ್ಷಣ ಈಕೆಯ ಆರೋಪದ ಕುರಿತಂತೆ ಗಂಭೀರ ವಿಚಾರಣೆಗೆ ಅನುವು ಮಾಡಿಕೊಟ್ಟು ತನ್ನ ಮೇಲಿನ ಕಳಂಕವನ್ನು ಇಲ್ಲವಾಗಿಸಬೇಕಾಗಿತ್ತು.

ಆ ಬಳಿಕ ಬೇಕಾದರೆ ಆರೋಪದ ಹಿಂದೆ ಯಾರಿದ್ದಾರೆ, ಯಾಕೆ ಇಂತಹ ಆರೋಪ ಮಾಡಿದ್ದಾರೆ ಎನ್ನುವುದರ ವಿಚಾರಣೆ ಮಾಡಬಹುದಿತ್ತು. ಆದರೆ ತನ್ನನ್ನು ರಕ್ಷಿಸಿಕೊಳ್ಳಲು ನ್ಯಾಯಮೂರ್ತಿ ಇಡೀ ಸುಪ್ರೀಂಕೋರ್ಟನ್ನೇ ಗುರಾಣಿಯಾಗಿ ಬಳಸಿಕೊಂಡರು. ‘ಸುಪ್ರೀಂಕೋರ್ಟ್ ಅಪಾಯದಲ್ಲಿದೆ’ ಎಂದು ಗುಲ್ಲೆಬ್ಬಿಸಿದರು. ಸುಪ್ರೀಂಕೋರ್ಟ್ ನ್ಯಾಯಾಧೀಶರೇ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎದುರಿಸು ತ್ತಿರುವಾಗ ಮತ್ತು ಅದರ ವಿಚಾರಣೆಗೆ ಅನುವು ಮಾಡಿಕೊಡದೆ ಸಂತ್ರಸ್ತೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆದರೆ ‘ಸುಪ್ರೀಂಕೋರ್ಟ್ ಅಪಾಯದಲ್ಲಿದೆ’ ಎಂದೇ ಹೇಳಬೇಕು. ಈ ಹಿಂದೆ ಇದೇ ನ್ಯಾಯಾಲಯವು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರು ಗಳನ್ನು ನಿಭಾಯಿಸಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಮೂಲಕ ಲಕ್ಷಾಂತರ ದುಡಿಯುವ ಮಹಿಳೆಯರಿಗೆ ನೆರವಾಗಿತ್ತು. ಈ ಮಾರ್ಗದರ್ಶಿ ಸೂತ್ರಗಳು ಆನಂತರ ಶಾಸನವಾಗಿ ಅಂಗೀಕಾರಗೊಂಡಿತು. ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದ ಆರೋಪಗಳ ತನಿಖಾ ಪ್ರಕ್ರಿಯೆಗೆ ಸಮರ್ಪಕ ವಿಧಿವಿಧಾನಗಳನ್ನು ಈ ಶಾಸನದಲ್ಲಿ ನಿಗದಿಪಡಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಈ ಮಾರ್ಗದರ್ಶಿ ಸೂತ್ರಗಳನ್ನು, ತಾನೇ ಒಳಗೊಂಡಿರುವ ಪ್ರಕರಣದ ವಿಚಾರಣೆಯಲ್ಲಿ ಅಳವಡಿಸಿಕೊಳ್ಳಲು ಅದಕ್ಕೆ ಸಾಧ್ಯವಾಗದೆ ಹೋಯಿತು. ಈ ಪ್ರಕರಣದಲ್ಲಿ ಇತರ ಕೆಲಸದ ಸ್ಥಳಗಳಿಗೆ ನಿಗದಿಪಡಿಸಲಾದ ತನಿಖಾ ವ್ಯವಸ್ಥೆಯನ್ನು ಅನುಸರಿಸದೆ ಇರಲು ಅದು ನಿರ್ಧರಿಸಿತು. ಬದಲಿಗೆ ಎರಡು ಪರ್ಯಾಯ ತನಿಖೆಗಳನ್ನು ಚಾಲ್ತಿಗೆ ತರಲು ಅದು ನಿರ್ಧರಿಸಿತು.

 ಸ್ವತಃ ತನ್ನ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ಚರ್ಚಿಸಲು ನಿಯೋಜಿತವಾದ ನ್ಯಾಯಪೀಠದ ನೇತೃತ್ವವನ್ನು ಸಿಜೆಐ ವಹಿಸಿರುವ ಔಚಿತ್ಯದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ವಿಷಾದಕರವೆಂದರೆ ಮಹಿಳೆಯು ಸಿಜೆಐ ವಿರುದ್ಧ ಮಾಡಿರುವ ಆರೋಪಗಳ ಹಿಂದೆ ಉನ್ನತ ಮಟ್ಟದ ಸಂಚಿದೆಯೆಂಬ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಮಾಜಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ತನಿಖಾ ಸಮಿತಿಯೊಂದನ್ನು ರಚಿಸಲು ತೋರಿದ ಮುತುವರ್ಜಿಯನ್ನು ಆಕೆಯ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ತೋರಿಸಲಿಲ್ಲ. ಅದಕ್ಕಿಂತಲೂ ಶೋಚನೀಯವೆಂದರೆ ದೂರುದಾರೆ ಮಹಿಳೆಯ ಆರೋಪವನ್ನು ನಿಭಾಯಿಸಲು ಅದು ಆಂತರಿಕ ವಿಚಾರಣಾ ಪ್ರಕ್ರಿಯೆಯನ್ನು ಅನುಸರಿಸಿತು ಮತ್ತು ನ್ಯಾಯಾಧೀಶರ ಸಮಿತಿಯಲ್ಲಿ ಕನಿಷ್ಠ ಪಕ್ಷ ಸದಸ್ಯರಾಗಿಯಾದರೂ, ಹೊರಗಿನ ಕಾನೂನು ತಜ್ಞರನ್ನಾಗಲಿ ಅಥವಾ ಅತ್ಯಂತ ಹಿರಿಯ ಮಹಿಳಾ ನ್ಯಾಯಾಧೀಶೆಯನ್ನಾಗಲಿ ಸೇರ್ಪಡೆಗೊಳಿಸಲು ನಿರಾಕರಿಸಿತು.

ವಿಚಾರಣೆಗೆ ಅನುಸರಿಸುವ ಕಾನೂನು ಕಲಾಪಗಳ ಪ್ರಕ್ರಿಯೆಗಳ ಬಗ್ಗೆ ದೂರುದಾರಳಿಗೆ ವಿವರಣೆ ನೀಡದೆಯೇ ತ್ರಿಸದಸ್ಯ ಸಮಿತಿಯು ಆಕೆಯೊಂದಿಗೆ ಮೂರು ಬಾರಿ ಅನೌಪಚಾರಿಕ ಮಾತುಕತೆಗಳನ್ನು ನಡೆಸಿತು. ಆಕೆ ಪದೇ ಪದೇ ಮನವಿ ಮಾಡಿದ ಹೊರತಾಗಿಯೂ, ಕಲಾಪದ ವೇಳೆ ಆಕೆಗೆ ಬೆಂಬಲವಾಗಿ ಇನ್ನೋರ್ವ ವ್ಯಕ್ತಿಯನ್ನು ಜೊತೆಗಿರಲು ಅನುಮತಿ ನಿರಾಕರಿಸಿತು. ಪ್ರಕರಣದ ಬಗ್ಗೆ ಸಮಿತಿ ತೋರಿದ ಸಂವೇದನಾಹೀನತೆ ಹಾಗೂ ಬೇಜವಾಬ್ದಾರಿಯುತ ತನಿಖಾ ಪ್ರಕ್ರಿಯೆಯಿಂದ ಆಘಾತಗೊಂಡಿರುವುದಾಗಿ ಹೇಳಿ ಮಹಿಳೆಯು ಮಧ್ಯದಲ್ಲೇ ತನಿಖಾ ಕಲಾಪದಿಂದ ಹಿಂದೆ ಸರಿದರು. ಈ ಹಂತದಲ್ಲಿ ನ್ಯಾಯಾಲಯವು ಆಂತರಿಕ ತನಿಖಾ ಪ್ರಕ್ರಿಯೆಯನ್ನು ಕೈಬಿಟ್ಟು, ದೂರುದಾರೆ ಹಾಗೂ ಸಾರ್ವಜನಿಕರಿಗೆ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಿಸುವಂತಹ ನೂತನ ಸಮಿತಿಯನ್ನು ರಚಿಸಲು ಮುಂದಾಗಲಿಲ್ಲ. ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಸಮಿತಿಯು ಏಕಪಕ್ಷೀಯವಾಗಿ ಪ್ರಕರಣವನ್ನು ಇತ್ಯರ್ಥಪಡಿಸಿತು. ಸಿಜೆಐ ಗೊಗೊಯಿ ವಿರುದ್ಧ ಮಹಿಳೆಯು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲವೆಂದು ಸಮಿತಿಯು ನಿರ್ಧರಿಸಿರುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಘೋಷಿಸಿತ್ತು.

ಈ ವಿಚಾರಣೆಯ ವಿವರಗಳನ್ನು ಸಂಬಂಧಪಟ್ಟ ನ್ಯಾಯಾಧೀಶರೊಂದಿಗೆ ಅಂದರೆ ಸಿಜೆಐ ಜೊತೆ ಹಂಚಿಕೊಂಡಿದ್ದು, ಉಳಿದ ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲವೆಂದು ತಿಳಿಸಿತು. ಆದರೆ ತನಿಖೆಯ ಅಂತಿಮ ವರದಿಯನ್ನು ದೂರುದಾರೆಯ ಜೊತೆ ಹಂಚಿಕೊಳ್ಳದೆ ಇರುವುದರಲ್ಲಿ ಯಾವ ನ್ಯಾಯಪರತೆಯಿದೆ?. ಸಮಿತಿಯ ತೀರ್ಮಾನವನ್ನು ಬಹಿರಂಗಪಡಿಸದೆ ಇರುವ ಹಿಂದಿನ ತಾರ್ಕಿಕತೆಯನ್ನು ನ್ಯಾಯಾಲಯ ತಿಳಿಸದೆ ಇರುವ ತನಕ ಆ ತೀರ್ಪಿಗೆ ಯಾವುದೇ ವಿಶ್ವಸನೀಯತೆ ಇರುತ್ತದೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News