ಚಿಕ್ಕಮಗಳೂರು: ಕಾಡುಕೋಣ ದಾಳಿಗೆ ವೃದ್ಧ ಬಲಿ

Update: 2019-05-11 04:48 GMT

ಚಿಕ್ಕಮಗಳೂರು, ಮೇ 11: ಕಾಡುಕೋಣ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡ ವೃದ್ಧರೊಬ್ಬರು ಮೃತಪಟ್ಟ ಘಟನೆ ಬಾಳೆಹೊನ್ನೂರು ಸಮೀಪದ ಬಾಳೇಕಾನ್ ಎಸ್ಟೇಟ್ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದ್ದು, ಶನಿವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.

ಬಾಳೇಕಾನ್ ಗ್ರಾಮದ ನಿವಾಸಿ ಶೇಷಪ್ಪ (65) ಕಾಡುಕೋಣ ದಾಳಿಯಿಂದ ಮೃತಪಟ್ಟವರು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ಶೇಷಪ್ಪ ಬಾಳೇಕಾನ್ ಎಸ್ಟೇಟ್ ಸಮೀಪದಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ವೇಳೆ ಕಾಫಿತೋಟದಲ್ಲಿದ್ದ ಕಾಡುಕೋಣ ದಿಢೀರ್ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ಶೇಷಪ್ಪ ಸ್ಥಳದಲ್ಲೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸ್ಥಳದಲ್ಲಿ ಕಾಡೆಮ್ಮೆಯ ಹೆಜ್ಜೆ ಗುರುತುಗಳಿದ್ದು, ಬಾಳೆಹೊನ್ನೂರು ಅರಣ್ಯಾಧಿಕಾರಿ, ಸಿಬ್ಬಂದಿ ಶನಿವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡೆಮ್ಮೆ ದಾಳಿಯಿಂದಾಗಿ ಮೃತಪಟ್ಟ ಶೇಷಪ್ಪ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಬಾಳೆಹೊನ್ನೂರು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಕಾಡೆಮ್ಮೆಗಳ ಸಂಖ್ಯೆ ಹೆಚ್ಚಿದ್ದು, ಆಗಾಗ್ಗೆ ಕೃಷಿಕರು, ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ. ಕಳೆದ ವರ್ಷ ಜಯಪುರ ಸಮೀಪದಲ್ಲಿ ಕೃಷಿಕರೊಬ್ಬರ ಮೇಲೆ ಕಾಡುಕೋಣ ದಾಳಿ ಮಾಡಿದ್ದು, ತೀವ್ರ ಗಾಯ ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇತ್ತೀಚೆಗೆ ಮೃತಪಟ್ಟಿದ್ದರು.

ಈ ಭಾಗದ ಕೃಷಿ ಜಮೀನುಗಳಿಗೆ ಕಾಡೆಮ್ಮೆ, ಕಾಡುಕೋಣಗಳ ದಾಳಿಯಿಂದಾಗಿ ಕೃಷಿಕರು ಬೇಸತ್ತಿದ್ದು, ಕಾಡುಕೋಣಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News