ಹರ್ಭಜನ್ ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಭಾರತದ 3ನೇ ಬೌಲರ್

Update: 2019-05-11 06:30 GMT

ವಿಶಾಖಪಟ್ಟಣ, ಮೇ 11: ಐಪಿಎಲ್ ಟ್ವೆಂಟಿ-20 ಟೂರ್ನಿಯ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ 150 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಭಾರತದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶುಕ್ರವಾರ ಇಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಗೈ ಸ್ಪಿನ್ನರ್ ಈ ಸಾಧನೆ ಮಾಡಿದ್ದಾರೆ.

 ಡೆಲ್ಲಿ ತಂಡದ ಅಮಿತ್ ಮಿಶ್ರಾ 147 ಪಂದ್ಯಗಳಲ್ಲಿ 157 ವಿಕೆಟ್‌ಗಳನ್ನು ಉರುಳಿಸಿದ್ದರೆ, ಕೆಕೆಆರ್‌ನ ಪಿಯೂಷ್ ಚಾವ್ಲಾ 157 ಪಂದ್ಯಗಳಲ್ಲಿ 150 ವಿಕೆಟ್‌ಗಳನ್ನು ಪಡೆದಿದ್ದಾರೆ. ಡೆಲ್ಲಿ ವಿರುದ್ಧ ಪಂದ್ಯಕ್ಕಿಂತ ಮೊದಲು 148 ವಿಕೆಟ್‌ಗಳನ್ನು ಪಡೆದಿದ್ದ ಸಿಂಗ್ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಡೆಲ್ಲಿ ಆರಂಭಿಕ ಶಿಖರ್ ಧವನ್(18) ವಿಕೆಟ್‌ನ್ನು ಉರುಳಿಸಿದರು.

16ನೇ ಓವರ್‌ನಲ್ಲಿ ಶ್ರೆಫಾನ್ ರುದರ್‌ಫೋರ್ಡ್(10) ವಿಕೆಟನ್ನು ಪಡೆದರು. ಪಂದ್ಯದಲ್ಲಿ 4 ಓವರ್‌ಗಳ ಬೌಲಿಂಗ್ ನಡೆಸಿ 31 ರನ್‌ಗೆ 2 ವಿಕೆಟ್ ಪಡೆದರು. ಡೆಲ್ಲಿಯನ್ನು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 147 ರನ್‌ಗೆ ನಿಯಂತ್ರಿಸಲು ನೆರವಾದರು.

‘‘ಟಿ-20 ಅತ್ಯಂತ ವಿಭಿನ್ನ ಮಾದರಿ ಕ್ರಿಕೆಟ್. ಇದರಲ್ಲಿ 150 ವಿಕೆಟ್‌ಗಳನ್ನು ಪಡೆದಿರುವುದಕ್ಕೆ ತೃಪ್ತಿಯಾಗಿದೆ. ನಾನು ಯುವ ಆಟಗಾರರೊಂದಿಗೆ ಸ್ಪರ್ಧಿಸುತ್ತಿದ್ದೆ. ಈ ಬಾರಿ ನಾನು ಸಾಕಷ್ಟು ವಿಕೆಟ್ ಪಡೆದಿದ್ದೇನೆ. ಸ್ಪಿನ್ನರ್‌ಗಳ ಸ್ನೇಹಿ ಚೆನ್ನೈನಲ್ಲಿ ಹೆಚ್ಚಿನ ಪಂದ್ಯ ಆಡಿದ್ದ ಕಾರಣ ಇದು ಸಾಧ್ಯವಾಯಿತು’’ ಎಂದು ಹರ್ಭಜನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News