ಮೂಲಭೂತ ಆದಾಯ ಭಾರತದ ಬಡಜನತೆಗೆ ವರದಾನವೇ?

Update: 2019-05-11 18:31 GMT

ಒಂದು ವಿಶಾಲವಾದ ಅರ್ಥದಲ್ಲಿ ತೆಗೆದುಕೊಂಡರೆ, ಯುಬಿಐ ಎಂಬುದು ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ನಿಶ್ಶರ್ತವಾಗಿ ನಿಯಮಿತ ಕಾಲದ ಆಧಾರದಲ್ಲಿ ನೀಡಲಾಗುವ ನಗದು ಪಾವತಿಯಾಗಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಸ್ವಾತಂತ್ರ ಹಾಗೂ ಘನತೆಯೊಂದಿಗೆ ಜೀವಿಸುವುದನ್ನು ಖಾತರಿಪಡಿಸಿಕೊಳ್ಳುವುದೇ ಯುಬಿಐನ ಪರಿಕಲ್ಪನೆಯಾಗಿದೆ.


ಸರಕಾರಗಳು ತಮ್ಮ ಸಾಮಾಜಿಕ ಸುರಕ್ಷತಾ ಜಾಲಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿರು ವಂತೆಯೇ ತಮ್ಮ ಸಾರ್ವತ್ರಿಕ ಮೂಲಭೂತ ಆದಾಯ (ಯುಬಿಐ) ಎಂಬ ಹಳೆಯ ಚಿಂತನೆಯು ಆಕರ್ಷಣೆಯನ್ನು ಪಡೆದುಕೊಳ್ಳುತ್ತಿದೆ. ಭಾರತವು ಈ ವಿಷಯದಲ್ಲಿ ಅತ್ಯಂತ ಗಂಭೀರವಾದ ಆಕಾಂಕ್ಷೆಗಳನ್ನು ಹೊಂದಿದೆ. ಭಾರತವು ಸಕ್ರಿಯವಾಗಿ ಈ ಚಿಂತನೆಯನ್ನು ಅಳೆದು ತೂಗಿ ನೋಡುತ್ತಿದೆ. ಹಾಲಿ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಪಕ್ಷವು, ತಾನು ಕೇಂದ್ರದಲ್ಲಿ ಅಧಿಕಾರಕ್ಕೇರಿದಲ್ಲಿ, ಅದು ಸಾರ್ವತ್ರಿಕ ಮೂಲಭೂತ ಆದಾಯದ ಒಂದು ನಮೂನೆಯನ್ನು ದೇಶದ 50 ಲಕ್ಷ ಕುಟುಂಬಗಳಿಗೆ ಒದಗಿಸುವ ಯೋಜನೆಯನ್ನು ಜಾರಿಗೊಳಿಸುವುದಾಗಿ ಈಗಾಗಲೇ ಭರವಸೆ ನೀಡಿದೆ.

ಯುಬಿಐ ವ್ಯವಸ್ಥೆಯಲ್ಲಿ ಸರಕಾರವು ತನ್ನ ನಾಗರಿಕರಿಗೆ ನಿಯಮಿತವಾಗಿ ಯಾವುದೇ ನಿರ್ಬಂಧಗಳಿಲ್ಲದೆ ಉಚಿತವಾಗಿ ನಗದನ್ನು ನೀಡುತ್ತದೆ. ಒಂದು ವೇಳೆ ಈ ವ್ಯವಸ್ಥೆ ಜಾರಿಗೆ ಬಂದಿದ್ದೇ ಆದಲ್ಲಿ ತನ್ನ ನಾಗರಿಕರಿಗೆ ಹಣವನ್ನು ಉಚಿತವಾಗಿ ಒದಗಿಸುವ ಫಿನ್‌ಲ್ಯಾಂಡ್ ದೇಶದ ಸಾಲಿಗೆ ಭಾರತ ಕೂಡಾ ಸೇರ್ಪಡೆಗೊಂಡಂತಾಗುತ್ತದೆ. ಆದಾಗ್ಯೂ, ಕಾಂಗ್ರೆಸ್ ಪಕ್ಷವು ನೀಡಿರುವ ಇತರ ಭರವಸೆಗಳ ಪ್ರಕಾರ ಬಡವರಿಗೆ ಇತರ ಸಾಮಾಜಿಕ ಸೌಲಭ್ಯಗಳೂ ಲಭ್ಯವಿರುವುದು. ಯುಬಿಐನ ಸಾಮರ್ಥ್ಯದ ಕುರಿತಾಗಲಿ ಹಾಗೂ ಈ ಯೋಜನೆಯನ್ನು ಅಂಗೀಕರಿಸಿದಲ್ಲಿ ಅದು ಸಫಲವಾಗುವುದೆಂಬುದಕ್ಕಾಗಲಿ ಯಾವುದೇ ಪುರಾವೆ ನಮಗೆ ಲಭಿಸುವುದಿಲ್ಲ.

ಒಂದು ವಿಶಾಲವಾದ ಅರ್ಥದಲ್ಲಿ ತೆಗೆದುಕೊಂಡರೆ, ಯುಬಿಐ ಎಂಬುದು ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ನಿಶ್ಶರ್ತವಾಗಿ ನಿಯಮಿತ ಕಾಲದ ಆಧಾರದಲ್ಲಿ ನೀಡಲಾಗುವ ನಗದು ಪಾವತಿಯಾಗಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಸ್ವಾತಂತ್ರ ಹಾಗೂ ಘನತೆಯೊಂದಿಗೆ ಜೀವಿಸುವುದನ್ನು ಖಾತರಿಪಡಿಸಿಕೊಳ್ಳುವುದೇ ಯುಬಿಐನ ಪರಿಕಲ್ಪನೆಯಾಗಿದೆ. ಇಲ್ಲಿ ನಗದು ವರ್ಗಾವಣೆಯು ಸ್ವೀಕೃತಿದಾರನ ನಡವಳಿಕೆಯನ್ನು ಅವಲಂಬಿಸಿರುವುದಿಲ್ಲ. ಅವರು ತಾವು ಬಯಸಿದಷ್ಟು ಹಣವನ್ನು ಖರ್ಚು ಮಾಡಲು ಮುಕ್ತರಾಗಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ, ದೇಶದ ಜನಸಂಖ್ಯೆ ಐದನೇ ಒಂದರಷ್ಟಿರುವ ಕಡುಬಡವರಿಗೆ ನಗದು ವರ್ಗಾವಣೆ ಮೂಲಕ ಭಾಗಶಃ ಮೂಲಭೂತ ಆದಾಯವನ್ನು ಒದಗಿಸುವ ಚಿಂತನೆಯನ್ನು ಕಾಂಗ್ರೆಸ್ ಹೊಂದಿದೆ.
ಸಂಪತ್ತಿನ ಹಂಚಿಕೆ ಹಾಗೂ ಇತರ ಆಸ್ತಿಗಳ ಹಂಚಿಕೆಯಲ್ಲಿ ಅಸಮಾನತೆಯನ್ನು ಕಡಿಮೆಗೊಳಿಸುವುದೇ ಯುಬಿಐನ ಮೂಲಭೂತ ಗುರಿಯಾಗಿದೆ. ಆದಾಯದ ಅಸಮಾನತೆ, ಮಾನವ ಬಂಡವಾಳದ ಅಸಮಾನತೆ(ಸಾಕ್ಷರತೆ, ಕೌಶಲ್ಯ, ಆರೋಗ್ಯ, ಇತ್ಯಾದಿ ಕ್ಷೇತ್ರಗಳಲ್ಲಿ), ಅವಕಾಶಗಳ ಅಸಮಾನತೆ (ಶಿಕ್ಷಣ, ಉದ್ಯೋಗ ಇತ್ಯಾದಿ) ಹಾಗೂ ಜೀವನ ಮಟ್ಟದಲ್ಲಿ ಅಸಮಾನತೆ ಇವುಗಳನ್ನು ಒಳಗೊಂಡಿದೆ.

 18ನೇ ಶತಮಾನದಲ್ಲಿ ಥಾಮಸ್ ಪೈನ್‌ನಿಂದ ಮೊದಲ್ಗೊಂಡು ಯುಬಿಐನ ಚಿಂತನೆಯು ಇತಿಹಾಸದ ಪುಟಗಳಲ್ಲಿ ಆಗಾಗ್ಗೆ ಪ್ರಕಟಗೊಂಡಿದ್ದವು.
ಆದಾಗ್ಯೂ, ಕೊಳಕು ರಾಜಕೀಯ ಉದ್ದೇಶಗಳಿಂದ ಪ್ರೇರಿತವಾಗದೆ ಉಳಿದಲ್ಲಿ ಬಡತನ ನಿವಾರಣೆಗೆ ಅದೊಂದು ಉಪಯುಕ್ತ ಅಸ್ತ್ರವಾಗಲಿದೆ. 2016-17ರ ಸಾಲಿನ ಭಾರತದ ಆರ್ಥಿಕ ಸಮೀಕ್ಷೆ ಕೂಡಾ ಯುಬಿಐ ಬಗ್ಗೆ ಪ್ರಸ್ತಾಪಿಸಿತ್ತು. ತುಲನಾತ್ಮಕವಾಗಿ ಕಡಿಮೆ ಆದಾಯವಿರುವ, ಆದರೆ ಅಪಾರವಾದ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಹಾತೊರೆಯುವ ಜನರಿರುವ ಭಾರತದಂತಹ ದೇಶದಲ್ಲಿ ಯುಬಿಐ ಕಾರ್ಯಸಾಧ್ಯ ಯೋಜನೆಯಾಗಲಿದೆಯೆಂದು ಸಮೀಕ್ಷೆ ತಿಳಿಸಿದೆ.

 ಹೊಸದಿಲ್ಲಿ ಮೂಲದ ಸಮಾನತೆ ಅಧ್ಯಯನ ಕೇಂದ್ರದ ಸಂಶೋಧಕರಾದ ಕಿಂಜಾಲ್ ಸಂಪತ್ ಹಾಗೂ ವಿವೇಕ್ ಮಿಶ್ರಾ ಅವರು ಯುಬಿಐ ಯೋಜನೆ ಜಾರಿಗೊಂಡಲ್ಲಿ ಅದರಿಂದ ಭಾರತದ ಬೊಕ್ಕಸಕ್ಕೆ ತಗಲುವ ವೆಚ್ಚವನ್ನು ಅಂದಾಜಿಸಲು ಯತ್ನಿಸಿದರು. ಅವರ ಲೆಕ್ಕಾಚಾರದ ಪ್ರಕಾರ 2016-17ನೇ ಸಾಲಿನ ವಿತ್ತ ವರ್ಷದಲ್ಲಿ ಕೇಂದ್ರ ಸರಕಾರದ ಒಟ್ಟು ಉದ್ದೇಶಿತ ವೆಚ್ಚವು 3.62ಲಕ್ಷ ಕೋಟಿ ರೂ.ಗಳಾಗಿವೆ ಅಥವಾ ಭಾರತದ ಒಟ್ಟು ಆಂತರಿಕ ಉತ್ಪನ್ನದ 2.4 ಶೇಕಡಾದಷ್ಟಾಗಿದೆ. ಅದೇ ಮೊತ್ತವನ್ನು ಬಡನ ರೇಖೆಗಿಂತ ಕೆಳಗಿರುವ ಭಾರತೀಯರಿಗೆ ವಿತರಿಸಿದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ವರ್ಷಕ್ಕೆ 12,669 ರೂ. ಪಡೆಯಲು ಅರ್ಹನಾಗುತ್ತಾನೆ (ಇದು ಕಾನೂನುಬದ್ಧವಾಗಿ ನಿಗದಿಪಡಿಸಲ್ಪಟ್ಟ ಕನಿಷ್ಠ ವೇತನಕ್ಕಿಂತಲೂ ಕಡಿಮೆಯಾದುದಾಗಿದೆ).

 ಒಂದು ವೇಳೆ ಈ ಯೋಜನೆಯನ್ನು ಭಾಗಶಃವಾಗಿ ಸಾರ್ವತ್ರಿಕ ಗೊಳಿಸಿ, ಆರ್ಥಿಕ ಸಮೀಕ್ಷೆಯಲ್ಲಿ ಸೂಚಿಸಿದ ಹಾಗೆ ಒಟ್ಟು ಜನಸಂಖ್ಯೆಯ ಶೇ. 75ರಷ್ಟು ಮಂದಿಗೆ ವಿತರಿಸಿದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ವಾರ್ಷಿಕವಾಗಿ 4 ಸಾವಿರ ರೂ. ಪಡೆಯಲಿದ್ದಾನೆ. ಈ ಯೋಜನೆಯ ವೆಚ್ಚದ ಗಾತ್ರವನ್ನು ನಾಲ್ಕುಪಟ್ಟು ಅಂದರೆ 11,50,000 ಕೋಟಿ ರೂ.ಗೆ ಹೆಚ್ಚಿಸಿದಲ್ಲಿ ಅದು ಕೇಂದ್ರ ಸರಕಾರದ ಬಜೆಟ್‌ನ್ನೇ ಕಬಳಿಸಲಿದೆ. ವಿಶ್ವಬ್ಯಾಂಕ್‌ನ ದತ್ತಾಂಶ ವಿಶ್ಲೇಷಣೆಯ ಪ್ರಕಾರ ಸುಮಾರು ಶೇ. 21.9 ಭಾರತೀಯರು ಬಡತನ ರೇಖೆಗಿಂತ ಕೆಳಗಿದ್ದಾರೆ. ದೇಶದ ಶೇ.20ರಷ್ಟು ಕುಟುಂಬಗಳಿಗೆ 72 ಸಾವಿರ ರೂ.ಗಳ ವಾರ್ಷಿಕ ಆದಾಯವನ್ನು ಒದಗಿಸುವುದು ಕಾಂಗ್ರೆಸ್‌ನ ಯೋಜನೆಯಾಗಿದೆ.

  2016-17ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಅರ್ಥಶಾಸ್ತ್ರಜ್ಞರು ಸಾರ್ವತ್ರಿಕ ಮೂಲಭೂತ ಆದಾಯದ ಕುರಿತ ದೂರದೃಷ್ಟಿಯ ಅಧ್ಯಾಯವೊಂದನ್ನು ಪ್ರಕಟಿಸಿದ್ದಾರೆ. ಸಾರ್ವತ್ರಿಕ ಮೂಲಭೂತ ಆದಾಯವು, ಭಾರತದಂತಹ ದೇಶದಲ್ಲಿ ಹೆಚ್ಚು ಕಾರ್ಯಸಾಧ್ಯವಾಗಿದೆ ಎಂದವರು ಅಭಿಪ್ರಾಯಿಸಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಹ್ಮಣ್ಯನ್ ಅವರು ಆರ್ಥಿಕ ಸಮೀಕ್ಷೆಯಲ್ಲಿ ಹೀಗೆ ಅಭಿಪ್ರಾಯಿಸಿದ್ದಾರೆ. ‘‘ಯುಬಿಐ ಒಂದು ನೂತನ ಹಾಗೂ ಪ್ರಬಲವಾದ ಚಿಂತನೆಯಾಗಿದೆ. ಆದರೆ ಅದು ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಆದರೆ ಈ ಚಿಂತನೆಯ ಕುರಿತು ಇನ್ನಷ್ಟು ಚರ್ಚೆ ಹಾಗೂ ಸಮಾಲೋಚನೆಗಳನ್ನು ನಡೆಸಲು ಈಗ ಕಾಲ ಪಕ್ವವಾಗಿದೆ ಮತ್ತು ಅದನ್ನು ತಕ್ಷಣವೇ ಜಾರಿಗೊಳಿಸಬೇಕಾದ ತುರ್ತು ಅಗತ್ಯ ಇಲ್ಲ’’ ಎಂದವರು ಹೇಳಿದ್ದರು. ಯುಬಿಐ ಬಗ್ಗೆ ಆರ್ಥಿಕ ಸಮೀಕ್ಷೆಯು ಒಂದು ಇಡೀ ಅಧ್ಯಾಯವನ್ನೇ ಮೀಸಲಿರಿಸಿತ್ತು. ಯುಬಿಐ ಅನುಷ್ಠಾನದಿಂದ ಒಟ್ಟು ಜಿಡಿಪಿ ಶೇ.4ರಿಂದ 5ರಷ್ಟು ವೆಚ್ಚದಲ್ಲಿ ಬಡತನವನ್ನು ಶೇ. 0.5ರಷ್ಟು, ಕಡಿಮೆ ಗೊಳಿಸಬಹುದೆಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

ಇತರ ಯಾವುದೇ ಬಡತನ ನಿರ್ಮೂ ಲನೆ ಯೋಜನೆಗಳಿಗಿಂತ ಯುಬಿಐನಲ್ಲಿ ಭ್ರಷ್ಟಾಚಾರ ನಡೆಯುವ ಸಾಧ್ಯತೆ ತೀರಾ ವಿರಳವಾಗಿದೆ. ಇದಕ್ಕಿಂತಲೂ ಹೆಚ್ಚಾಗಿ ಡಿಜಿಟಲ್ ಪಾವತಿಯ ವಿಧಾನದಿಂದಾಗಿ ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿರುವುದಿಲ್ಲ. ಇತ್ತೀಚೆಗೆ ಕೇಂದ್ರ ಸರಕಾರವು ಜಾರಿಗೆ ತಂದಿರುವ ರೈತರ ಖಾತೆಗಳಿಗೆ ಮೂಲಭೂತ ಆದಾಯವನ್ನು ವರ್ಗಾಯಿಸುವ ಸರಕಾರದ ಯೋಜನೆ ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ನಡೆದಿದೆ.
ಆದರೆ ಈ ಯೋಜನೆಯಲ್ಲಿ ಹಲವಾರು ಪ್ರತಿಕೂಲಕರ ಅಂಶಗಳು ಕೂಡಾ ಇವೆ. ಈ ಯೋಜನೆಯ ಫಲಾನುಭವಿಗಳು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇದೆ. ಜನರಿಗೆ ಕಡಿಮೆ ದುಡಿಯುವಂತೆ ಪ್ರೇರಣೆಯಾಗುವ ಸಾಧ್ಯತೆ ಇದೆ. ಜೊತೆಗೆ ತಾವು ಮಾಡುವ ಕೆಲಸದ ಬಗ್ಗೆ ಸಂವೇದನರಹಿತತೆಯನ್ನು ಅವರು ಹೊಂದಲೂಬಹುದೆಂಬ ವಾದಗಳೂ ಕೇಳಿಬರುತ್ತಿವೆ.

ಏನೇ ಇದ್ದರೂ ಯುಬಿಐ ಯೋಜನೆಯು ಜನರನ್ನು ಕಡುಬಡತನದಿಂದ ಮೇಲೆತ್ತುತ್ತದೆ ಹಾಗೂ ಅವರು ಹಸಿವಿನಿಂದ ಪೀಡಿತರಾಗದೆ ಇರುವುದನ್ನು ಖಾತರಿಪಡಿಸುತ್ತದೆ. ಉದ್ಯೋಗನಷ್ಟದಿಂದ ಅವರಿಗೆ ರಕ್ಷಣೆಯನ್ನು ನೀಡುತ್ತದೆ. ಮೂಲಭೂತ ಮಾಸಿಕ ಆದಾಯವು, ಪ್ರಸಕ್ತ ಭಾರತದಲ್ಲಿ ಬಡವರಿಗಾಗಿ ಇರುವ ಹಲವಾರು ಸಬ್ಸಿಡಿ ಕಾರ್ಯಕ್ರಮಗಳನ್ನು ತೆರವುಗೊಳಿಸಬಹುದಾಗಿದೆ. ಆದರೆ ಅಂತಹ ಯಾವುದೇ ಯೋಜನೆಗಳನ್ನು ಕೈಬಿಡುವ ಇರಾದೆ ತನಗಿಲ್ಲವೆಂದು ಕಾಂಗ್ರೆಸ್ ಈಗಾಗಲೇ ಸ್ಪಷ್ಟಪಡಿಸಿದೆ. ಯುಬಿಐನಿಂದ ಜನರ ಎಲ್ಲಾ ಆವಶ್ಯಕತೆಗಳು ಈಡೇರಲು ಸಾಧ್ಯವಿಲ್ಲವಾದರೂ ಖಾತರಿಪಡಿಸಿದ, ನಿಗದಿತ ಮೊತ್ತದ ನಗದು ತಮಗೆ ಹರಿದುಬರುವುರಿಂದ ಜನರನ್ನು ಸಂತಸದಲ್ಲಿರಿಸಬಹುದಾಗಿದೆ ಹಾಗೂ ಅವರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲಿದೆ.
ಆದಾಗ್ಯೂ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮುಖ್ಯ ಶಿಲ್ಪಿಗಳಲ್ಲೊಬ್ಬರಾದ ಜೀನ್ ಡ್ರೆಝ್ ಅವರು ಸಾರ್ವತ್ರಿಕ ಮೂಲಭೂತ ಆದಾಯವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಉತ್ತಮ ಕಾರ್ಯ ನಿರ್ವಹಣೆಯನ್ನು ತೆರವುಗೊಳಿಸಲಿದೆ ಎಂದು ವಾದಿಸುತ್ತಾರೆ. ಆದರೆ ಯುಬಿಐನ ಪ್ರತಿಪಾದಕರು, ಹಾಲಿ ಭ್ರಷ್ಟ ಅಧಿಕಾರ ಶಾಹಿ ವ್ಯವಸ್ಥೆಯಿಂದಾಗಿ ಇಂತಹ ಯೋಜನೆಗಳಿಗೆ ಬಿಡುಗಡೆಯಾಗುತ್ತಿರುವ ಹಣವು ಬಡವರಲ್ಲದವರ ಹಾಗೂ ಭ್ರಷ್ಟರ ಜೇಬು ಸೇರುತ್ತಿದೆಯೆಂದು ಬೆಟ್ಟು ಮಾಡಿ ತೋರಿಸುತ್ತಾರೆ.

ಭಾರತದಂತಹ ದೇಶಕ್ಕೆ ಮೂಲಭೂತ ಆದಾಯ ಯೋಜನೆಯು ಉತ್ತಮವೆಂದೇ ಹೇಳಬಹುದಾದರೂ, ಅದರ ಜಾರಿಯಲ್ಲಿ ಹಲವಾರು ಸವಾಲುಗಳು ಎದುರಾಗಿವೆ. ಜನರನ್ನು ಆಕರ್ಷಿಸುವಂತಹ ನೀತಿಗಳನ್ನು ಆಡಳಿತವರ್ಗವು ಪದೇ ಪದೇ ಪ್ರಕಟಿಸುತ್ತವೆಯಾದರೂ, ಕಾರ್ಯಗತಗೊಂಡ ಬಳಿಕ ಅವುಗಳಲ್ಲಿ ಹೆಚ್ಚಿನವು ನಿರೀಕ್ಷಿತ ಉದ್ದೇಶವನ್ನು ಸಾಧಿಸುವಲ್ಲಿ ವಿಫಲವಾಗಿವೆ. ಈ ನಿಟ್ಟಿನಲ್ಲಿ ಆಡಳಿತಗಾರರು ಯಾವುದೇ ಯೋಜನೆ ಅನುಷ್ಠಾನಗೊಳಿಸುವ ಮುನ್ನ ಅದರ ಸಾಧಕಬಾಧಕಗಳ ಬಗ್ಗೆ ಕೂಲಂಕಶ ಪರಾಮರ್ಶೆ ನಡೆಸುವುದು ಅತ್ಯಗತ್ಯವಾಗಿದೆ.

ಕೃಪೆ: countercurrents

Writer - ಮೊಯಿನ್ ಖಾಝಿ

contributor

Editor - ಮೊಯಿನ್ ಖಾಝಿ

contributor

Similar News