ದೇವಯಾನಿ-ಶರ್ಮಿಷ್ಠೆ: ಕಾವ್ಯ ನಾಟಕ

Update: 2019-05-12 18:30 GMT

80ರ ದಶಕದಲ್ಲಿ ನಾಟಕ ಸಾಹಿತ್ಯದ ಬಹುದೊಡ್ಡ ಪ್ರಯೋಗವೇ ನಡೆಯಿತು. ಹಿರಿಯ ದಿಗ್ಗಜರ ನಾಟಕ ಕೃತಿಗಳು ಹೊರ ಬಂದುದು ಅದೇ ಸಮಯದಲ್ಲಿ. ಇತ್ತೀಚಿನ ದಿನಗಳಲ್ಲಿ ನಾಟಕ ಪ್ರಯೋಗಗಳಿಗೆ ವಿಶೇಷ ಪ್ರೋತ್ಸಾಹ ಸಿಗದೇ ಇರುವುದರಿಂದಲೋ ಏನೋ, ನಾಟಕ ಕೃತಿಗಳು ಹೊರಬರುವುದು ಕಡಿಮೆಯಾಗುತ್ತಿದೆ. ಅನೇಕರು ಕಾದಂಬರಿ, ಕತೆಗಳನ್ನೇ ನಾಟಕ ಮಾಡುತ್ತಿದ್ದಾರೆ.

‘ದೇವಯಾನಿ-ಶರ್ಮಿಷ್ಠೆ’ ಗೋಪಾಲ ಬಿ. ಶೆಟ್ಟಿ ಅವರು ಬರೆದ ಕಾವ್ಯ ನಾಟಕ. ಗೋಪಾಲ ಬಿ. ಶೆಟ್ಟಿ ಅವರು ತಮ್ಮ ವಿಮರ್ಶೆ, ವೈಚಾರಿಕ ಲೇಖನಗಳಿಂದ ಗುರುತಿಸಲ್ಪಟ್ಟವರು. ಅವರ ಪ್ರಖರ ವೈಚಾರಿಕ ಮಾತುಗಳು ಕರಾವಳಿಯಲ್ಲಿ ವೌಢ್ಯ, ಮತಾಂಧತೆಗಳನ್ನು ತೊಲಗಿಸಲು ಸಾಕಷ್ಟು ಕೆಲಸ ಮಾಡಿವೆ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಗೋಪಾಲ ಬಿ. ಶೆಟ್ಟಿಯವರು 80 ರ ದಶಕದಲ್ಲೇ ಕಾವ್ಯನಾಟಕವೊಂದನ್ನು ಬರೆದಿರುವುದು ವಿಶೇಷವಾಗಿದೆ. 1980 ಸಮಯದಲ್ಲಿ ಮುಂಬೈ ಬಂಟರ ಸಂಘದ ಮುಖವಾಣಿ ಬಂಟರವಾಣಿಯಲ್ಲಿ ಈ ನಾಟಕ ಧಾರಾವಾಹಿಯಾಗಿ ಹರಿದು ಬಂದಿದೆ. ಇದು ಪುನರ್‌ಮುದ್ರಣಗೊಳ್ಳಲು ಕಾರಣ, ‘ಸಮೂಹ’ ತಂಡದ ಉದ್ಯಾವರ ಮಾಧವಾಚಾರ್ಯ ಅವರು ಇದನ್ನು 2018ರಲ್ಲಿ ರಂಗಪ್ರಯೋಗಕ್ಕೆ ಒಡ್ಡಲು ಮುಂದಾದುದು. ಈ ನಾಟಕದ ಪ್ರಥಮ ಪ್ರದರ್ಶನ ಉಡುಪಿಯಲ್ಲಿ ನಡೆಯಿತು. ನಾಟಕದ ಸವಾಲುಗಳನ್ನು ನಿರ್ದೇಶಕರು ಯಶಸ್ವಿಯಾಗಿ ನಿಭಾಯಿಸಿದದರು.
 ‘ದೇವಯಾನಿ-ಶರ್ಮಿಷ್ಠೆ’ ಕತೆ ಬೇರೆ ಬೇರೆ ರೂಪಗಳಲ್ಲಿ ಓದುಗರನ್ನು ತಲುಪಿವೆ. ಕಾದಂಬರಿಯಾಗಿ, ಕಾವ್ಯವಾಗಿ, ಕತೆಯಾಗಿಯೂ ದೇವಯಾನಿ, ಶರ್ಮಿಷ್ಠೆ ಪಾತ್ರಗಳನ್ನು ವಿಶ್ಲೇಷಿಸಲಾಗಿದೆ. ನಾಟಕವಾಗಿ ತುಸು ಭಿನ್ನ ರೀತಿಯಲ್ಲಿ ಈ ಪಾತ್ರಗಳನ್ನು ಗೋಪಾಲ ಬಿ. ಶೆಟ್ಟಿ ನಿರೂಪಿಸಿದ್ದಾರೆ.
 ಯಯಾತಿ ಚಂದ್ರವಂಶದ ಅರಸ. ನಹುಷ ಚಕ್ರವರ್ತಿಯ ಪುತ್ರ. ದೇವಯಾನಿ ಅಸುರ ಗುರು ಶುಕ್ರಾಚಾರ್ಯರ ಕುವರಿ. ಶರ್ಮಿಷ್ಠೆ ಅಸುರ ಚಕ್ರವರ್ತಿ ವೃಷಪರ್ವನ ಮಗಳು. ಒಂದು ಹುಡುಗಾಟಿಕೆಯ ಕ್ಷಣ, ವಿಷಮಕ್ಕೆ ತಿರುಗಿ ಇಬ್ಬರ ನಡುವೆ ಕಲಹವಾಗಿ ಶರ್ಮಿಷ್ಠೆಯನ್ನು ಋಷಿಕನ್ಯೆ ದೇವಯಾನಿಯ ದಾಸಿಯನ್ನಾಗಿ ಮಾಡಿತು. ಅಹಮಿಕೆ ಬೇರೆ ಬೇರೆ ರೂಪಗಳನ್ನು ಪಡೆಯುತ್ತದೆ. ಈ ಅಹಮಿಕೆಯ ತಿಕ್ಕಾಟದಲ್ಲಿ ನಲುಗುವ ಪ್ರೀತಿಯನ್ನು ನಾಟಕ ನಿರೂಪಿಸುತ್ತದೆ. ಕಾವ್ಯ ರೂಪಕಕ್ಕೆ ಪೂರಕವಾಗಿ ತಿಳಿ ಹಳೆಗನ್ನಡವನ್ನು ನಾಟಕಕಾರರು ಬಳಸಿದ್ದಾರೆ. ನೂತನ ಪಬ್ಲಿಕೇಶನ್ಸ್, ಉಡುಪಿ ಇವರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 52. ಮುಖಬೆಲೆ 80 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News