ಬಟ್ಲರ್ ಶತಕ, ಪಾಕ್ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಗೆಲುವು

Update: 2019-05-12 19:06 GMT

ಸೌಥಾಂಪ್ಟನ್, ಮೇ 12: ಜೋಸ್ ಬಟ್ಲರ್ 50 ಎಸೆತಗಳಲ್ಲಿ ಸಿಡಿಸಿದ ಬಿರುಸಿನ ಶತಕದ ಸಹಾಯದಿಂದ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯವನ್ನು 12 ರನ್‌ನಿಂದ ರೋಚಕವಾಗಿ ಗೆದ್ದುಕೊಂಡಿದೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಬಟ್ಲರ್ ಶತಕದ(ಔಟಾಗದೆ 110,55 ಎಸೆತ, 6 ಬೌಂಡರಿ, 9 ಸಿಕ್ಸರ್)ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಪಾಕಿಸ್ತಾನ ತಂಡ ಆರಂಭಿಕ ಆಟಗಾರ ಫಾಕರ್ ಝಮಾನ್(138) ದಿಟ್ಟ ಹೋರಾಟದ ಹೊರತಾಗಿಯೂ 7 ವಿಕೆಟ್ ನಷ್ಟಕ್ಕೆ 361 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಾಕ್‌ಗೆ ಅಂತಿಮ ಓವರ್‌ನಲ್ಲಿ ಗೆಲ್ಲಲು 19 ರನ್ ಬೇಕಾಗಿತ್ತು. ಬಿಗಿಯಾದ ಬೌಲಿಂಗ್ ಮಾಡಿದ ಕ್ರಿಸ್ ವೋಕ್ಸ್ ಇಂಗ್ಲೆಂಡ್‌ಗೆ ರೋಚಕ ಗೆಲುವು ತಂದರು. ಬುಧವಾರದ ಮೊದಲ ಪಂದ್ಯ ಒಂದೂ ಎಸೆತ ಕಾಣದೇ ರದ್ದಾಗಿತ್ತು. ಇದೀಗ ಗೆಲುವು ಸಾಧಿಸಿರುವ ಇಂಗ್ಲೆಂಡ್ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 4 ಬೌಂಡರಿ, 9 ಸಿಕ್ಸರ್‌ಗಳ ಸಹಾಯದಿಂದ 50 ಎಸೆತಗಳಲ್ಲಿ ಶತಕ ಪೂರೈಸಿ ತಂಡ ಉತ್ತಮ ಮೊತ್ತ ಕಲೆ ಹಾಕಲು ನೆರವಾಗಿರುವ ಬಟ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇದಕ್ಕೂ ಮೊದಲು ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರ ಸಮರ್ಥಿಸಿ ಕೊಂಡ ರಾಯ್(87,98 ಎಸೆತ, 6 ಬೌಂಡರಿ, 3 ಸಿಕ್ಸರ್)ಹಾಗೂ ಬೈರ್‌ಸ್ಟೋ(51,45 ಎಸೆತ, 6 ಬೌಂಡರಿ)ಮೊದಲ ವಿಕೆಟ್‌ಗೆ 115 ರನ್ ಗಳಿಸಿ ಭದ್ರಬುನಾದಿ ಹಾಕಿಕೊಟ್ಟರು. ಈ ಇಬ್ಬರು ಔಟಾದ ಬಳಿಕ 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 162 ರನ್ ಗಳಿಸಿದ ಮೊರ್ಗನ್ ಹಾಗೂ ಬಟ್ಲರ್ ತಂಡದ ಮೊತ್ತವನ್ನು 373ಕ್ಕೆ ತಲುಪಿಸಿದರು. ಮೊರ್ಗನ್ 48 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ಗಳ ಸಹಿತ ಔಟಾಗದೆ 71 ರನ್ ಗಳಿಸಿದರು.

  2015ರ ವಿಶ್ವಕಪ್‌ನಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದ ಬಳಿಕ ಇಂಗ್ಲೆಂಡ್ 35ನೇ ಬಾರಿ 300ಕ್ಕೂ ಅಧಿಕ ರನ್ ಗಳಿಸಿತು. ಈ ವರ್ಷದ ಐಸಿಸಿ ವಿಶ್ವಕಪ್ ಆರಂಭಕ್ಕೆ ಕೆಲವೇ ವಾರಗಳು ಬಾಕಿ ಇರುವಾಗ ತಂಡದ ಪ್ರದರ್ಶನ ಚೇತೋಹಾರಿ ಅಂಶವಾಗಿದೆ. ಗೆಲ್ಲಲು 374 ರನ್ ಗುರಿ ಬೆನ್ನಟ್ಟಿದ ಪಾಕ್ ಪರ ಝಮಾನ್(138,106 ಎಸೆತ, 12 ಬೌಂಡರಿ, 4 ಸಿಕ್ಸರ್)ಹಾಗೂ ಬಾಬರ್ ಆಝಮ್(51) 2ನೇ ವಿಕೆಟ್‌ಗೆ 135 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಆಸಿಫ್ ಅಲಿ(51)ಅರ್ಧಶತಕದ ಕೊಡುಗೆ ನೀಡಿದರು. ಸರ್ಫರಾಝ್ ಅಹ್ಮದ್ ಔಟಾಗದೆ 41 ರನ್ ಗಳಿಸಿದ್ದರೂ ಪಾಕ್ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ(2-57) ಹಾಗೂ ಪ್ಲುಂಕೆಟ್(2-64)ತಲಾ ಎರಡು ವಿಕೆಟ್ ಪಡೆದಿದ್ದಾರೆ. ಉಭಯ ತಂಡಗಳು ಮಂಗಳವಾರ ಸರಣಿಯ ಮೂರನೇ ಪಂದ್ಯವನ್ನು ಆಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News