ನೀರಿನ ಸಮಸ್ಯೆ ಕಂಡುಬಂದ 24 ಗಂಟೆಯೊಳಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ: ಸಚಿವ ಕೃಷ್ಣಬೈರೇಗೌಡ

Update: 2019-05-13 17:41 GMT

ಕೋಲಾರ, ಮೇ 13 : ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ 24 ಗಂಟೆಯೊಳಗೆ ಟ್ಯಾಂಕರ್ ಮೂಲಕ ನೀರು  ಪೂರೈಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ಕಡಿಮೆಯಾಗಿದೆ. ಇದು ಉತ್ತಮ ಬೆಳವಣಿಗೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು. 

ಇಂದು ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಬರ ನಿರ್ವಹಣೆ ಕುರಿತು ಏರ್ಪಡಿಸಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 113 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಇವುಗಳಲ್ಲಿ 74 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ 198 ಟ್ರಿಪ್‍ಗಳು ಹಾಗೂ 39 ಹಳ್ಳಿಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಒದಗಿಸಲಾಗುತ್ತಿದೆ ಎಂದು  ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಸಚಿವರಿಗೆ ಮಾಹಿತಿ ನೀಡಿದರು. 

ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಗಳು ಖಾಸಗಿ ಮಾಲಕತ್ವದ ಕೊಳವೆಬಾವಿಗಳಿಂದ ನೀರು ಪೂರೈಸಲು ಹೆಚ್ಚು ಶ್ರಮಿಸಬೇಕು. ಅದೇ ರೀತಿ ಖಾಸಗಿ ಕೊಳವೆ ಬಾವಿಗಳ ಮಾಲಕರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಯಾಗುವಂತೆ ಕ್ರಮವಹಿಸಬೇಕು. ಈ ಕ್ರಮವು ಮತ್ತೊಮ್ಮೆ ಅವರು ನೀರು ಸರಬರಾಜಿಗೆ ಮುಂದಾಗುವಂತೆ ಸಹಕರಿಸುತ್ತದೆ ಎಂದರು.

ಅಧಿಕಾರಿಗಳು ನಿಗದಿತ ಅವಧಿಯೊಳಗೆ ಟ್ಯಾಂಕರ್ ನಿಂದ ಒದಗಿಸುವ ನೀರಿನ ಬಿಲ್ಲುಗಳನ್ನು ಸಲ್ಲಿಸದಿದ್ದಲ್ಲಿ, ಅವುಗಳನ್ನು ಅನುಮೋದಿಸಬಾರದು ಎಂದು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು. 

ಜಿಲ್ಲೆಯಲ್ಲಿ ಟಾಸ್ಕ್‍ಪೋರ್ಸ್ ಅಡಿಯಲ್ಲಿ ಕೊರೆಯಲಾಗಿರುವ ಹೆಚ್ಚುವರಿ ಕೊಳವೆ ಬಾವಿಗಳ ಕಾಮಗಾರಿಗಳನ್ನು ಈ ವರ್ಷದ ಕ್ರಿಯಾಯೋಜನೆಯಲ್ಲಿ ಸೇರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಆದಷ್ಟು ಹೊಸ ಕೊಳವೆ ಬಾವಿಗಳಿಗೆ ಅಳವಡಿಸಲಾಗುವ ಪಂಪ್ ಮೋಟಾರುಗಳನ್ನು ನಿಷ್ಕ್ರಿಯಗೊಂಡ ಹಳೆಯ ಕೊಳವೆ ಬಾವಿಗಳಿಂದ ಮರು ಬಳಕೆ ಮಾಡಿಕೊಳ್ಳಲು ಆದ್ಯತೆ ನೀಡುವಂತೆ ತಿಳಿಸಿದರು. 

ಕಳೆದ ಅಕ್ಟೋಬರ್ ತಿಂಗಳಿಂದ ಮಾರ್ಚ್‍ವರೆಗೆ 379 ಕೊಳವೆ ಬಾವಿಗಳನ್ನು ಹೊಸದಾಗಿ ಕೊರೆದಿದ್ದು, ಇವುಗಳಲ್ಲಿ 262 ಕೊಳವೆ ಬಾವಿಗಳಲ್ಲಿ ನೀರು ದೊರೆತಿದೆ. ಇವುಗಳಿಗೆ ಹಳೆಯ ಪಂಪು ಮೋಟಾರ್ ಗಳನ್ನು ಅಳವಡಿಸಿ ನೀರು ಒದಗಿಸಲಾಗಿದೆ. ಲಭ್ಯವಿದ್ದ ಹಳೆಯ ಪಂಪು ಮೋಟಾರ್ ಗಳನ್ನು ಬಳಸಿದ್ದರಿಂದ ಸುಮಾರು 15 ಕೋಟಿಯಷ್ಟು ಉಳಿತಾಯವಾಗಿದೆ. ಮಾರ್ಚ್‍ನಿಂದ ಇಲ್ಲಿಯವರೆಗೆ 213 ಕೊಳವೆ ಬಾವಿಗಳನ್ನು ಹೆಚ್ಚುವರಿಯಾಗಿ ಕೊರೆಯಲಾಗಿದೆ. ಎಪ್ರಿಲ್ ಅಂತ್ಯಕ್ಕೆ ಟ್ಯಾಂಕರ್ ಮತ್ತು ಖಾಸಗಿ ಬೋರ್‍ವೆಲ್‍ಗಳ ಮೂಲಕ ನೀರು ಪೂರೈಸಲು 1.76 ಕೋಟಿ ಬಿಲ್ಲನ್ನು ಪಾವತಿ ಮಾಡಲಾಗಿದೆ. ಪೈಪ್‍ಲೈನ್ ಅಳವಡಿಕೆಗೆ 2 ಕೋಟಿ ವೆಚ್ಚ ಮಾಡಲಾಗಿದೆ. ಇದಲ್ಲದೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಕುಡಿಯುವ ನೀರಿನ ಬಳಕೆಗೆ 15 ಕೋಟಿ ಇದೆ ಎಂದರು.

ಟ್ಯಾಂಕರ್ ಮೂಲಕ ಒದಗಿಸಲಾಗುವ ಕುಡಿಯುವ ನೀರಿನ ಸೌಲಭ್ಯದಲ್ಲಿ ಯಾವುದೇ ಕೊರತೆ ಬಾರದಂತೆ ಸಾಕಷ್ಟು ಸಂಖ್ಯೆಯ ಟ್ರಿಪ್‍ಗಳಲ್ಲಿ ನೀರನ್ನು ಒದಗಿಸಲು ತಿಳಿಸಿದರು. ಮೈದಾನ ಹೊಂದಿರುವ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಜುಲೈ ಅಂತ್ಯದೊಳಗೆ ಕಾಂಪೌಂಡ್ ಗೋಡೆಯ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು. 

2019-20 ನೇ ಸಾಲಿಗೆ ಕೋಲಾರ ಜಿಲ್ಲೆಯು ಕುಡಿಯುವ ನೀರಿನ ಬಳಕೆಗೆ 38 ಕೋಟಿ ರೂಗಳನ್ನು ಜಿಲ್ಲಾ ಪಂಚಾಯತ್‍ಗೆ ಹಂಚಿಕೆ ಮಾಡಲಾಗಿದೆ. ನಗರ ಪ್ರದೇಶಗಳಿಗೆ ಟಾಸ್ಕ್ ಪೋರ್ಸ್‍ನಲ್ಲಿ 4 ಕೋಟಿ ರೂಗಳನ್ನು ಹಾಗೂ ಗ್ರಾಮಾಂತರ ಪ್ರದೇಶಗಳಿಗೆ 7.5 ಕೋಟಿಗಳನ್ನು ನೀಡಲಾಗಿದೆ. ಈ ಬಾರಿ ಅನುದಾನ ಸಾಕಷ್ಟು ಲಭ್ಯವಿರುವ ಕಾರಣ ಕುಡಿಯುವ ನೀರಿನ ಕಾಮಗಾರಿಗಳಡಿ ಮೂಲಭೂತ ವ್ಯವಸ್ಥೆ ಹಾಗೂ ಅದನ್ನು ಉತ್ತಮಗೊಳಿಸುವ ಕಾರ್ಯಗಳನ್ನು ಕೈಗೆತ್ತಿಕೊಂಡು 14 ನೇ ಹಣಕಾಸಿನ ಯೋಜನೆಯಡಿ ಅವುಗಳ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. 

ಉದ್ಯೋಗ ಖಾತ್ರಿ ಯೋಜನೆಯಲ್ಲಿ 2018-19ನೇ ಸಾಲಿಗೆ 22 ಲಕ್ಷ ಮಾನವ ದಿನಗಳು ಹಾಗೂ 70 ಕೋಟಿ ವೆಚ್ಚದ ಕಾಮಗಾರಿಗೆ ಗುರಿ ನಿಗದಿಪಡಿಸಲಾಗಿತ್ತು. ಆದರೆ ಈ ಗುರಿಯನ್ನು ಮೀರಿ 40 ಲಕ್ಷ ಮಾನವ ದಿನಗಳು ಹಾಗೂ 138 ಕೋಟಿ ವೆಚ್ಚದ ಕೆಲಸ ಮಾಡಲಾಗಿದೆ. ಗುರಿಗಿಂತ 2 ಪಟ್ಟು ಹೆಚ್ಚಿನ ಕೆಲಸವಾಗಿದೆ. 2019-20 ನೇ ಸಾಲಿಗೆ 50 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಕಳೆದ 7 ತಿಂಗಳಿನಿಂದ ಒಂದು ಸಾವಿರ ಚೆಕ್‍ಡ್ಯಾಂಗಳನ್ನು ನಿರ್ಮಿಸುವ ಗುರಿಹೊಂದಿದ್ದು, ಇದರಲ್ಲಿ 300 ಚೆಕ್‍ಡ್ಯಾಂಗಳು ನಿರ್ಮಾಣವಾಗಿದ್ದು, 400 ಪ್ರಗತಿಯಲ್ಲಿದೆ. ಉಳಿದವನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದರು. 

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನವಾಗಲಿದೆ. ಈ ಬಾರಿಯೂ ಕೆಲವು ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಲಿದ್ದು, ಇದನ್ನು ನೀಗಿಸಲು ಮೋಡ ಬಿತ್ತನೆ ಕಾರ್ಯ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ 30 ಕೋಟಿ ಹಣವನ್ನು ಮೀಸಲಿಟ್ಟಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಜುಲೈ ತಿಂಗಳಲ್ಲಿ ಮೋಡ ಬಿತ್ತನೆ ಮಾಡಲಾಗುವುದು ಎಂದರು. 

ವಿಶ್ವ ಪರಿಸರ ದಿನವಾದ ಜೂನ್ 05 ರಂದು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಸಾವಿರ ಗಿಡಗಳನ್ನು ನೆಟ್ಟು ಪೋಷಿಸಬೇಕು. ಇದಕ್ಕೆ ಅಗತ್ಯವಾದ 1.5 ಲಕ್ಷ ಸಸಿಗಳನ್ನು ಪೂರೈಸಲು ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, 2ನೇ ಹಂತದಲ್ಲಿ ಜುಲೈ ತಿಂಗಳಲ್ಲಿ ಪ್ರತಿ ಗ್ರಾಮ ಪಂಚಾಯತ್ ನಿಂದ ರೈತರಿಗೆ ಸಾಕಷ್ಟು ಸಂಖ್ಯೆಯ ಸಸಿಗಳನ್ನು ವಿತರಿಸಬೇಕು. ಇದಕ್ಕಾಗಿ 15 ಲಕ್ಷ ಸಸಿಗಳನ್ನು ಬೆಳೆಸುವಂತೆ ಸೂಚಿಸಿದರು. 

ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಮಾತನಾಡಿ, ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 30 ರಷ್ಟು ಮಳೆ ಹೆಚ್ಚುವರಿಯಾಗಿದೆ. ಮಳೆಯಿಂದಾಗಿ 2134 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಜಿಲ್ಲೆಯಲ್ಲಿ ಮೇವಿನ ಲಭ್ಯತೆ ಸಾಕಷ್ಟು ಇದ್ದು, ಇಲ್ಲಿಯವರೆಗೆ 83 ಸಾವಿರ ಮೇವು ಕಿಟ್‍ಗಳನ್ನು ವಿತರಿಸಲಾಗಿದೆ. ಸಿ.ಆರ್.ಎಫ್ ಅನುದಾನದಲ್ಲಿ 20 ಸಾವಿರ ಕಿಟ್‍ಗಳನ್ನು ನೀಡಲಾಗಿದೆ. 75 ಟನ್ ಒಣಮೇವನ್ನು ಸಂಗ್ರಹಿಸಿದ್ದು, ಅಗತ್ಯವಿರುವ ರೈತರಿಗೆ ಒಂದು ಕೆಜಿಗೆ 2 ರೂ.ನಂತೆ ವಿತರಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಜಗದೀಶ್ ಮಾತನಾಡಿ, ಕುಡಿಯುವ ನೀರು ಪೂರೈಕೆಯ ಟ್ಯಾಂಕರ್ ಬಿಲ್‍ಗಳನ್ನು ಪ್ರತಿ 15 ದಿನಕ್ಕೊಮ್ಮೆ ಹಾಗೂ ಖಾಸಗಿ ಕೊಳವೆಬಾವಿಗಳ ಬಿಲ್‍ಗಳನ್ನು ಪ್ರತಿ ತಿಂಗಳಿಗೊಮ್ಮೆ ಪಾವತಿ ಮಾಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಇಲಾಖೆಗೂ ಗುರಿ ನೀಡಲಾಗಿದ್ದು, ತಮ್ಮ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ರೈತರಿಗೂ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಹೆಚ್. ಪುಷ್ಪಲತಾ, ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿಗಳಾದ ಲಕ್ಷ್ಮಿನಾರಾಯಣ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News