ಗುಳೇ ಹೋಗದಂತೆ ಎಚ್ಚರವಹಿಸಿ, ಅಗತ್ಯವಿರುವಲ್ಲಿ ಗೋಶಾಲೆ ತೆರೆಯಿರಿ: ಸಚಿವ ಎಸ್.ಆರ್ ಶ್ರೀನಿವಾಸ್

Update: 2019-05-13 18:00 GMT

ದಾವಣಗೆರೆ, ಮೇ 13: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನ ಜಾನುವಾರುಗಳಿಗೆ ನೀರಿನ ಹಾಹಾಕಾರ ಆಗದಂತೆ ಬರ ನಿರ್ವಹಣೆಗೆ ಬೇಕಾದ ಪರಿಹಾರೋಪಾಯ ಮಾರ್ಗಗಳನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿ ಹಾಗೂ ಸಿಇಒ ಇವರ ಗಮನಕ್ಕೆ ತರುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್ ಶ್ರೀನಿವಾಸ್ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ  ಜಿಲ್ಲೆಯಲ್ಲಿನ ಬರ ಪರಿಸ್ಥಿತಿ, ಅದರ ನಿರ್ವಹಣೆ ಹಾಗೂ ಪರಿಹಾರೋಪಾಯ ಮಾರ್ಗಗಳ ಬಗ್ಗೆ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನೀರಿನ ಅತಿ ಬೇಡಿಕೆ ಇರುವ ಕಡೆಯಲ್ಲಿ ಬೋರ್‍ವೆಲ್ ಕೊರೆಸುವ ಮೂಲಕ ಜನರಿಗೆ ನೀರು ಒದಗಿಸಲು ಕ್ರಮಕೈಗೊಳ್ಳಬೇಕು. ಹಾಗೂ ಈ ಕೂಡಲೇ ಅವಶ್ಯವಿರುವ ಕಡೆ ಜಾನುವಾರುಗಳಿಗೆ ಗೋಶಾಲೆ ತೆರೆಯುವಂತೆ ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 108 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇವುಗಳಲ್ಲಿ 67 ಗ್ರಾಮಗಳಿಗೆ 106 ಟ್ಯಾಂಕರ್ ಗಳ ಮೂಲಕ ಹಾಗೂ ಉಳಿದ 41 ಗ್ರಾಮಗಳಿಗೆ 63 ಖಾಸಗಿ ಬೋರ್‍ವೆಲ್‍ಗಳ ಮುಖಾಂತರ ನೀರಿನ ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಗೆ ಹೋಲಿಸುವುದಾದರೆ ಜಗಳೂರು ತಾಲೂಕಿನಲ್ಲೇ ನೀರಿನ ಸಮಸ್ಯೆ ಹೆಚ್ಚಾಗಿದ್ದು 87 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಅಲ್ಲದೇ ಹಲವಾರು ಗ್ರಾಮಗಳಲ್ಲಿ ಸಾವಿರ ಅಡಿ ಕೊರೆದರೂ ನೀರು ಸಿಗದ ಕಾರಣ ಟ್ಯಾಂಕರ್ ಮೂಲಕವೇ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಜಗಳೂರು ತಾಲೂಕಿನ ತಹಶೀಲ್ದಾರ್, ಇಒ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು. ಇಷ್ಟೆಲ್ಲಾ ಸಮಸ್ಯೆ ಉದ್ಭವಿಸಿದ್ದು ಯಾಕೆ? ನೀವು ಯಾವುದೇ ರೀತಿಯ ಸಮರ್ಪಕ ಪರಿಹಾರೋಪಾಯ ಕ್ರಮಗಳನ್ನು ಕೈಗೊಂಡಿಲ್ಲ. ಈ ಕೂಡಲೇ ತಾಲೂಕಿನಲ್ಲಿ ನೀರು ಹಾಗೂ ಮೇವಿನ ಸಮಸ್ಯೆ ಇರುವ ಕಡೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸುವಂತೆ ತಿಳಿಸಿದರು.
ತಾಲೂಕಿನಲ್ಲಿ 153 ಬೋರ್‍ವೆಲ್ ಕೊರೆಸಲಾಗಿದೆ. ಆದರೆ ಬಹುತೇಕ ಬೋರವೆಲ್‍ಗಳಲ್ಲಿ ನೀರು ಸಿಕ್ಕಿಲ್ಲ. ಬೋರ್‍ವೆಲ್‍ಗಳಲ್ಲಿ ಅಲ್ಪ ಪ್ರಮಾಣದಲ್ಲಿ ಸಿಕ್ಕ ನೀರನ್ನು ಟ್ಯಾಂಕರ್ ಗಳ ಮೂಲಕವೇ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ತಾಲೂಕಿನ ಗುರುಸಿದ್ದಾಪುರ ಮತ್ತು ಕಲ್ಲದೇವಪುರದಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಈ ಹಿಂದೆ ಕೆಡಿಪಿ ಸಭೆ ಮಾಡಿದಾಗಲೇ ಜಗಳೂರು ತಾಲೂಕಿನಲ್ಲಿನ ನೀರಿನ ಸಮಸ್ಯೆ ಕುರಿತು ಸಮರ್ಪಕ ಕಾಳಜಿ ವಹಿಸುವಂತೆ ಸೂಚನೆ ನೀಡಿದ್ದೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇಂದು ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ ಜನರ ಬೇಡಿಕೆಯಂತೆ ಜಗಳೂರು ಅರಣ್ಯ ಪ್ರದೇಶದಲ್ಲಿ ಒಂದು ಬೋರ್‍ವೆಲ್ ಕೊರೆಸಿ ಅಲ್ಲಿನ ಪ್ರಾಣಿಗಳಿಗೆ ನೀರು ಕುಡಿಯಲು ವ್ಯವಸ್ಥೆ ಮಾಡುವಂತೆ ಹೇಳಿ ನನ್ನ ಗಮನಕ್ಕೆ ತರಬೇಕೆಂದು ಸೂಚಿಸಿದ್ದರೂ ಈ ಕುರಿತಂತೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕೂಡಲೇ ನೀರಿನ ಸಮಸ್ಯೆ ಇರುವ ಪ್ರತಿ ಗ್ರಾಮದಲ್ಲಿ ಒಂದೊಂದು ಬೋರ್‍ವೆಲ್ ಕೊರೆಸಬೇಕು. ಹಾಗೂ ಅದರ ಸಂಪೂರ್ಣ ವಿವಿರ ಮುಂದಿನ ಸಭೆಯಲ್ಲಿ ನೀಡಬೇಕು ಎಂದರು. ಜಗಳೂರು ತಾಲೂಕಿನ ಇಓ ಮೇಲೆ ದೂರುಗಳು ಕೇಳಿಬರುತ್ತಿವೆ. ಇವರು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು, ಇಲ್ಲದಿದ್ದರೆ ಅಮಾನತು ಮಾಡಲಾಗುವುದು. ಪ್ರತಿ 15 ದಿನಗಳಿಗೊಮ್ಮೆ ತಹಶೀಲ್ದಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಇಓ ಇವರ ನೇತೃತ್ವದಲ್ಲಿ ಬರ ನಿರ್ವಹಣೆ ಕುರಿತು ಸಭೆ ನಡೆಸಿ ಸಭೆಯ ಸಂಪೂರ್ಣ ಅನುಪಾಲನಾ ವರದಿಯನ್ನು ಜಿಲ್ಲಾಧಿಕಾರಿ ಹಾಗೂ ಸಿಇಒ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.

ಚನ್ನಗಿರಿಯಲ್ಲಿ 10 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿತ್ತು. ಅದನ್ನು ಖಾಸಗಿ ಬೋರ್‍ವೆಲ್‍ನಿಂದ ನೀರು ನೀಡುವ ಮೂಲಕ ಬಗೆಹರಿಸಲಾಗಿದೆ. ಹೊನ್ನಾಳಿಯ 5 ಗ್ರಾಮಗಳಲ್ಲಿ ಇದ್ದ ನೀರಿನ ಸಮಸ್ಯೆಯನ್ನು ಸಹ ಬಗೆಹರಿಸಲಾಗಿದೆ. ಉಳಿದ ನ್ಯಾಮತಿ ಹಾಗೂ ಹರಿಹರ ತಾಲೂಕಿನಲ್ಲಿ ಅಂತಹ ನೀರಿನ ಸಮಸ್ಯೆಯಿಲ್ಲ. ಸಮಸ್ಯೆ ಎದುರಾದರೆ ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಮಹಾನಗರಪಾಲಿಕೆ ಆಯುಕ್ತ ವೀರೇಂದ್ರ ಕುಂದಗೋಳ ಮಾತನಾಡಿ, 41 ವಾರ್ಡ್‍ಗಳಿಗೆ ವಾರಕ್ಕೊಮ್ಮೆ 3 ತಾಸುಗಳ ಕಾಲ ನೀರು ಬಿಡಲಾಗುತ್ತಿದೆ. ನಗರದಲ್ಲಿ 162 ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಟಿವಿ ಸ್ಟೇಷನ್ ಕೆರೆಯಲ್ಲಿ 70 ದಿನಗಳಿಗೆ ಆಗುವಷ್ಟು ನೀರಿದೆ. ಈಗ ಕುಂದವಾಡ ಕೆರೆಗೆ ಸಹ ನೀರು ಹರಿಸಿ ಸ್ಟಾಕ್ ಮಾಡಿ ಇಟ್ಟುಕೊಂಡರೆ 2 ರಿಂದ 3 ತಿಂಗಳು ನೀರಿನ ಸಮಸ್ಯೆ ಬಾರದು ಎಂದರು.     

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಜಿಲ್ಲೆಯಲ್ಲಿ ಮೊದಲು ಕುಡಿಯುವ ನೀರಿನ ಸಂಗ್ರಹಣಗಳು ಎಲ್ಲೆಲ್ಲಿ ಇವೆಯೋ ಅಲ್ಲಲ್ಲಿ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಲಾಗುವುದು ಎಂದರು.

ಹರಿಹರ ತಾಲೂಕಿನಲ್ಲಿ ನೀರಿನ ಸಮಸ್ಯೆಯಿಲ್ಲ. ಬಂದರೂ ತಾಲೂಕಿನಲ್ಲಿ 340 ಬೋರ್‍ವೆಲ್‍ಗಳಿವೆ. ಅದರಲ್ಲಿ 60 ಬೋರ್‍ವೆಲ್ ಫೇಲ್ ಆಗಿದ್ದು ಉಳಿದ ಬೋರವೆಲ್‍ಗಳಲ್ಲಿ ನೀರಿದೆ ಎಂದರು. ಚನ್ನಗಿರಿಯಲ್ಲಿ ಸಹ 23 ವಾರ್ಡ್‍ಗಳಿಗೆ ಶಾಂತಿ ಸಾಗರದಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸದ್ಯಕ್ಕೆ ನೀರಿನ ಸಮಸ್ಯೆಯಿಲ್ಲ ಎಂದರು. ನ್ಯಾಮತಿ ಹಾಗೂ ಹೊನ್ನಾಳಿ ತಾಲೂಕುಗಳಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ, ಬಂದರೂ ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಜಗಳೂರಿನಲ್ಲಿ 18 ವಾರ್ಡ್‍ಗಳಿಗೆ ಶಾಂತಿ ಸಾಗರದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಹಾಗೂ ನಿತ್ಯ 6 ಟ್ಯಾಂಕರ್ ಗಳಿಂದ ನೀರು ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 26 ವಾರಗಳಿಗೆ ಆಗುವಷ್ಟು ಮೇವಿನ ಲಭ್ಯತೆಯಿದ್ದು, ಜಗಳೂರು ತಾಲೂಕಿನಲ್ಲಿ ಮಾತ್ರ ಕೇವಲ ಹತ್ತು ವಾರಗಳಿಗೆ ಆಗುವಷ್ಟು ಮೇವು ಇರುವ ಕಾರಣ ಅಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ ಎರಡು ಭಾಗಗಳಲ್ಲಿ ಗೋಶಾಲೆ ತೆರೆಯಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಗೋಶಾಲೆಯಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಹಾಗೂ ಕ್ರಮಬದ್ಧವಾಗಿ ಮೇವನ್ನು ಒದಗಿಸಿ, ಅವಶ್ಯವಿದ್ದರೆ ಇತರೆ ಕಡೆಗಳಲ್ಲಿ ಗೋಶಾಲೆ ತೆರೆಯಿರಿ ಎಂದು ಸಲಹೆ ನೀಡಿದರು.

ಒಟ್ಟಾರೆ ಜಿಲ್ಲೆಯಲ್ಲಿ ಹಾಗೂ ಅದರಲ್ಲೂ ಜಗಳೂರು ತಾಲೂಕಿನಲ್ಲಿ ಜನರು ಯಾವುದೇ ಕಾರಣಕ್ಕೂ ಇಲ್ಲಿ ಕೆಲಸವಿಲ್ಲ ಎಂದು ಬೇರೆಡೆಗೆ ಗುಳೆ ಹೋಗದಂತೆ ಮಾಡಬೇಕು. ಅವರಿಗೆ ಸೂಕ್ತ ಕೆಲಸ ಹಾಗೂ ಸರಿಯಾದ ಸಮಯಕ್ಕೆ ಕೂಲಿ ಹಣ ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸಬೇಕು. ತಮ್ಮ ತಾಲೂಕಿಗೆ ಸಂಬಂಧಿಸಿದಂತೆ ತಿಂಗಳಿಗೆ ಎರಡು ಬಾರಿ ವಿವಿಧ ಅಧಿಕಾರಿಗಳೂಂದಿಗೆ ಸಭೆ ನಡೆಸಿ ಬರ ನಿರ್ವಹಣೆ ಕುರಿತು ಪರಿಹಾರಗಳನ್ನು ಕಂಡುಕೊಳ್ಳಬೇಕು. ಸದ್ಯ ಬರ ನಿರ್ವಹಣೆಗೆ ಹಣದ ಕೊರೆತೆಯಿಲ್ಲ. ಎಲ್ಲಾ ಅಧಿಕಾರಿಗಳು ಅವಶ್ಯವಿರುವ ಕಡೆ ಬಳಸಿ ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ತಿಳಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಹೆಚ್. ಬಸವರಾಜೇಂದ್ರ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿ.ಪಂ. ಉಪಕಾರ್ಯದರ್ಶಿ ಎಲ್. ಭೀಮಾನಾಯ್ಕ, ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನಜ್ಮಾ, ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮಣ್ಣನವರ್, ಕೃಷಿ ಜಂಟಿನಿರ್ದೇಶಕ ಶರಣಪ್ಪ ಮುದಗಲ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News