ಬೀದಿ ಶ್ವಾನಗಳಿಗೆ ಪುನರ್ವಸತಿಯಾಗಲಿ

Update: 2019-05-13 18:35 GMT

ಮಾನ್ಯರೇ,

ಬೀದಿ ನಾಯಿಗಳ ಸಂಖ್ಯೆಯು ಉಡುಪಿ ಜಿಲ್ಲೆಯಲ್ಲಿ ಗಣನೀಯವಾಗಿ ಹೆಚ್ಚಳ ಕಂಡಿವೆ. ಅವುಗಳ ಉಪಟಳದಿಂದ ಸಾರ್ವಜನಿಕರು ಭಯಭೀತರಾಗಿ ತಿರುಗಾಡ ಬೇಕಾದ ಪರಿಸ್ಥಿತಿಯು ಈಗ ನಿರ್ಮಾಣವಾಗಿದೆ. ವಾಯುವಿಹಾರ ತಾಣ, ಮೀನು ಮಾರುಕಟ್ಟೆ, ಕಡಲ ಕಿನಾರೆ, ಬಸ್ಸು ತಂಗುದಾಣ, ದೇವಸ್ಥಾನ ಮೊದಲಾದ ಜನ ಸಂಚಾರ ಇರುವ, ಸಾರ್ವಜನಿಕ ಸ್ಥಳಗಳು ಈಗ ಬೀದಿ ನಾಯಿಗಳ ನೆಲೆಬೀಡಾಗಿವೆ. ಆಕ್ರಮಣಕಾರಿ ಬೀದಿ ನಾಯಿಗಳಿಂದ ನಾಗರಿಕರು ಕಚ್ಚಿಸಿ ಕೊಳ್ಳುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ರಸ್ತೆಯಲ್ಲಿ ನಾಯಿಗಳು ಅಡ್ಡ ಬಂದು ವಾಹನ ಅಪಘಾತಗಳು, ಸಾವು ನೋವುಗಳು ಸಂಭವಿಸುತ್ತಲೇ ಇರುತ್ತವೆ. ಈಗ ಊರ ತಳಿಯ ನಾಯಿಗಳನ್ನು ಸಾರ್ವಜನಿಕರು ಸಾಕುವುದು ಕಡಿಮೆ ಮಾಡಿದ್ದಾರೆ. ಶ್ವಾನಪ್ರೀಯರು ವಿದೇಶ ತಳಿಯ ನಾಯಿಗಳನ್ನಷ್ಟೇ ಸಾಕುವಲ್ಲಿ ಆಸಕ್ತಿವಹಿಸುತ್ತಿದ್ದಾರೆ. ಹಾಗಾಗಿ ಸಾಕು ನಾಯಿಗಳು ಬೀದಿಯಲ್ಲಿ ಆಶ್ರಯ ಪಡೆದು ಬೀದಿ ನಾಯಿಗಳೆಂಬ ಪಟ್ಟ ಪಡೆಯಲು ಕಾರಣವಾಗಿವೆ. ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಗಳು ನಡೆಸುವ ವ್ಯವಸ್ಥೆಗಳು ಆಯಾಯ ಸ್ಥಳಗಳ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಆಡಳಿತ ವ್ಯವಸ್ಥೆಗಳು ಮಾಡಿದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಂತತಿಯನ್ನು ತಡೆಯಬಹುದು. ಆದರೆ ಈ ಕಾರ್ಯಗಳು ಸಮಸ್ಯೆಗೆ ಸಂಬಂಧ ಪಟ್ಟವರಿಂದ ನಡೆಯುತ್ತಿಲ್ಲ. ಪ್ರಕೃತಿಯಲ್ಲಿರುವ ಪ್ರತಿ ಜೀವಿಗಳಿಗೆ ಬದುಕುವ ಹಕ್ಕು ಇದೆ ನಿಜ. ಅವುಗಳಿಗೂ ಬದುಕುವ ವ್ಯವಸ್ಥೆಯನ್ನು ಸರಕಾರವು ಅಗತ್ಯವಾಗಿ ಮಾಡಬೇಕಾಗಿದೆ. ಪ್ರತಿ ತಾಲೂಕುಗಳಲ್ಲಿ ಬೀದಿ ಶ್ವಾನಗಳ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ. ಹೊಟೇಲು, ಖಾನಾವಳಿಗಳಲ್ಲಿ ಉಳಿದು ಪೋಲಾಗುವ ಆಹಾರವನ್ನೇ ಉಳಿಸಿ ಪುನರ್ವಸತಿ ಕೇಂದ್ರದಲ್ಲಿರುವ ನಾಯಿಗಳಿಗೂ ನೀಡುವ ವ್ಯವಸ್ಥೆ ಮಾಡಬಹುದು. ಈ ಮೂಲಕ ಆಹಾರ ಪೋಲಾಗುವುದನ್ನು ತಡೆಯಬಹುದು. ಸಾಮಾನ್ಯವಾಗಿ ಕೋಳಿಯಂಗಡಿಯ ಮಾಲಕರು ಕೋಳಿ ತ್ಯಾಜ್ಯಗಳನ್ನು ನದಿಗಳಲ್ಲಿ, ರಸ್ತೆ ಬದಿಗಳಲ್ಲಿ ವಿಲೇವಾರಿಗೊಳಿಸಿ ಪರಿಸರ ಮಾಲಿನ್ಯಗೊಳಿಸುವ ದೃಶ್ಯಗಳು ಅಲ್ಲಲ್ಲಿ ಕಾಣಲು ಸಿಗುತ್ತವೆ. ಇಂತಹ ತ್ಯಾಜ್ಯವು ಶ್ವಾನ ಪುನರ್ವಸತಿ ಕೇಂದ್ರದ ನಾಯಿಗಳಿಗೂ ಆಹಾರವಾಗಿಸಲು ಸಾಧ್ಯ ಇದೆ. ಕೋಳಿ ತ್ಯಾಜ್ಯದಿಂದಾಗುವ ಪರಿಸರ ಮಾಲಿನ್ಯವನ್ನು ತಡೆಯುವ ಸುಲಭ ಮಾರ್ಗವು ಆಗುತ್ತದೆ. ನಾಯಿ ಮರಿಗಳು ಜನ್ಮತಾಳಿದಲ್ಲಿ ಶ್ವಾನ ಪ್ರಿಯರಿಗೆ ದತ್ತು ನೀಡಬಹುದು. ಈ ಬಗ್ಗೆ ಸರಕಾರ, ಪ್ರಾಣಿ ದಯಾಸಂಘಗಳು ಅಗತ್ಯವಾಗಿ ಚಿಂತಿಸಲಿ.

ತಾರಾನಾಥ್ ಮೇಸ್ತ, ಶಿರೂರು

Writer - ತಾರಾನಾಥ್ ಮೇಸ್ತ, ಶಿರೂರು

contributor

Editor - ತಾರಾನಾಥ್ ಮೇಸ್ತ, ಶಿರೂರು

contributor

Similar News