ತುಮಕೂರಿನಲ್ಲಿ ಕೋಟಿ ವೃಕ್ಷ ನಾಟಿಗೆ ಶಾಲಿನಿ ರಜನೀಶ್ ಸೂಚನೆ

Update: 2019-05-14 16:59 GMT

ತುಮಕೂರು, ಮೇ.14: ಮುಂಬರುವ ಜೂನ್ 5ರ ವಿಶ್ವ ಪರಿಸರ ದಿನದಂದು ತುಮಕೂರು ಜಿಲ್ಲೆಯಲ್ಲಿ 1 ಕೋಟಿ ಸಸಿಗಳನ್ನು ನೆಡುವ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸ್ಥಾಪಿಸುವ ಸಂಬಂಧ ಸಾರ್ವಜನಿಕರೊಂದಿಗೆ ಚರ್ಚಿಸಿ ಕಾರ್ಯಕ್ರಮವನ್ನು ರೂಪಿಸುವಂತೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ತುಮಕೂರು ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಬೆಂಗಳೂರು ರೋಟರಿ ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ “ಕೋಟಿ ನಾಟಿ” ಹಸಿರೀಕರಣದ ಜನಾಂದೋಲನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಒಂದು ಕೋಟಿ ಸಸಿಗಳನ್ನು ತುಮಕೂರು ಜಿಲ್ಲೆಯಲ್ಲಿ ನೆಡಬೇಕು. ರೋಟರಿ ಸಂಸ್ಥೆ ತುಮಕೂರು ತಾಲೂಕಿನಲ್ಲಿ 1 ಕೋಟಿ ಸಸಿಗಳನ್ನು ನೆಡಲು ಕಾರ್ಯಕ್ರಮ ರೂಪಿಸಿದೆ. ಪ್ರತಿ ತಾಲೂಕಿನಲ್ಲಿ 10 ಲಕ್ಷ ಸಸಿಗಳಂತೆ ಜಿಲ್ಲೆಯಲ್ಲಿ 1 ಕೋಟಿ ಸಸಿ ನೆಡಲು ಮುಂದಾಗಬೇಕು. ಇದಕ್ಕಾಗಿ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು. ಮುಂಬರುವ ಜೂನ್ 5 ರಂದು ಜಿಲ್ಲೆಯಲ್ಲಿ 1 ಕೋಟಿ ಸಸಿಗಳನ್ನು ನೆಟ್ಟು ಗಿನ್ನಿಸ್ ಬುಕ್ ಆಫ್ ರೆಕಾರ್ಡ್‍ನ್ನು ಸ್ಥಾಪನೆ ಮಾಡಬೇಕು. ಇದಕ್ಕಾಗಿ ಸಾರ್ವಜನಿಕರ ಸಹಕಾರವು ಅತಿ ಮುಖ್ಯ, ಇದಕ್ಕಾಗಿ ಚರ್ಚಿಸಿ ಕಾರ್ಯಕ್ರಮ ರೂಪಿಸಿ ಎಂದರು. 

ತುಮಕೂರು ಜಿಲ್ಲೆ ಕಲ್ಪತರು ನಾಡು ಎಂದು ಪ್ರಸಿದ್ಧಿಯಾಗಿದ್ದು, ಆದರೆ ಜಿಲ್ಲೆಯು ಬರಪೀಡಿತ ನಾಡಾಗಿದೆ. ಇದನ್ನು ಹಸಿರು ತುಮಕೂರು ಮಾಡಲು ಎಲ್ಲರೂ ಕೈಜೋಡಿಸಬೇಕು. ನರೇಗಾ ಮತ್ತು ಜಲಾಮೃತ ಯೋಜನೆಯಡಿ ಗಿಡಗಳನ್ನು ನೆಡಲು ಅವಕಾಶವಿದೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಸ್ವಸಹಾಯ ಸಂಸ್ಥೆಗಳು, ಸಂಘ ಸಂಸ್ಥೆಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಸಮುದಾಯದ ಎಲ್ಲಾ ಜನರ ಸಹಕಾರ ಅತಿ ಮುಖ್ಯ ಎಂದು ಅವರು ತಿಳಿಸಿದರು. 

ಕಾರ್ಯಾಗಾರದಲ್ಲಿ ಮಾತನಾಡಿದ ರೋಟರಿ “ಕೋಟಿ-ನಾಟಿ” ಅಧ್ಯಕ್ಷರಾದ ಅಮರ ನಾರಾಯಣ ಐಎಎಸ್(ನಿ) ಅವರು ಪೊಲಿಯೋವನ್ನು ಮುಕ್ತಗೊಳಿಸಿದಂತೆ ಭೂ ಮಾತೆಗೆ ಅಂಟಿಕೊಂಡಿರುವ ಮಾಲಿನ್ಯವನ್ನು ಗಿಡ-ಸಸಿಗಳನ್ನು ನೆಡುವ ಮೂಲಕ ಹೋಗಲಾಡಿಸಬೇಕು. ತುಮಕೂರು ಜಿಲ್ಲೆಯಲ್ಲಿ ಶೇ.6.58ರಷ್ಟು ಅರಣ್ಯ ಪ್ರದೇಶ ಮಾತ್ರವಿದೆ. ತುಮಕೂರು ಜಿಲ್ಲೆಯ 10 ತಾಲೂಕುಗಳು ವೈವಿದ್ಯಮಯದಿಂದ ಕೂಡಿವೆ. ಒಂದೆಡೆ ಶಿರಾ, ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಮರಗಳ ಸಂಖ್ಯೆ ಕಡಿಮೆ ಇದೆ ಎಂದು ಅವರು ತಿಳಿಸಿದರು. 

ಜಿಲ್ಲೆಯು 10,64,755 ಹೆಕ್ಟೇರ್ ಭೌಗೋಳಿಕ ಪ್ರದೇಶವನ್ನು ಹೊಂದಿದು, 67,539 ಹೆಕ್ಟೇರ್ ಬಂಜರುಭೂಮಿ ಹಾಗೂ 2,35,101 ಹೆಕ್ಟೇರ್ ಬೀಳುಭೂಮಿಯನ್ನು ಹೊಂದಿದೆ. ಈ ಪ್ರದೇಶಗಳಲ್ಲಿ ಸಸಿಗಳನ್ನು ನೆಟ್ಟು ಹಸಿರುಮಯವನ್ನಾಗಿ ಮಾಡಬೇಕು. ಪ್ರತಿ ಮನುಷ್ಯ 28 ಮರಗಳನ್ನು ಹಾಕಬೇಕು.  ಜಿಲ್ಲೆಯು 26 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಪ್ರತಿಯೊಬ್ಬರು 28 ಸಸಿಗಳನ್ನು ಹಾಕಿದರೆ ಒಟ್ಟು 7.50 ಕೋಟಿ ಸಸಿಗಳನ್ನು ನೆಡಬಹುದಾಗಿದೆ ಎಂದು ಅವರು ತಿಳಿಸಿದರು. 

ರಸ್ತೆ, ಕೆರೆದಂಡೆ, ವಸತಿ ಪ್ರದೇಶಗಳಲ್ಲಿ ಸಸಿ ನೆಡಲು ಅವಕಾಶವಿದ್ದು, ಈ ಬಗ್ಗೆ ಪಿಡಿಓಗಳು ಕ್ರಮಕೈಗೊಳ್ಳಬೇಕು. ಪ್ರಾರಂಭದಲ್ಲಿ ತುಮಕೂರು ತಾಲೂಕಿನಲ್ಲಿ ಸಸಿ ನೆಡುವ ಕಾರ್ಯಕ್ರಮವಿದ್ದು, 28.34 ಲಕ್ಷ ಗುಂಡಿಗಳನ್ನು ತೆಗೆಸಿ ಸಿದ್ಧವಾಗಿ ಇಟ್ಟುಕೊಳ್ಳುವಂತೆ ಪಿಡಿಓಗಳಿಗೆ ತಿಳಿಸಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಶುಭಾಕಲ್ಯಾಣ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ರೋಟರಿ ಕೋಟಿ ನಾಟಿ ಯೋಜನೆಯ ಸಹ ಅಧ್ಯಕ್ಷ ನೀಲ್ ಮೈಕಲ್ ಜೋಸೆಫ್, ಕೆ.ಪಿ.ನಾಗೇಶ್, ಆಶಾ ಪ್ರಸನ್ನಕುಮಾರ್, ರೋಟರಿ ರವಿಶಂಕರ್ ಸೇರಿದಂತೆ ತಾಲೂಕು ಪಂಚಾಯತ್ ಇಓ, ಪಿಡಿಓಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. 

ಈ ಸಂದರ್ಭದಲ್ಲಿ “ಕೋಟಿನಾಟಿ” ಹಸಿರೀಕರಣದ ಒಡಂಬಡಿಕೆಗೆ ಸಹಿ ಮಾಡಲಾಯಿತು. 

ಕೋಟಿನಾಟಿಗೆ ಸಸಿ ಎಲ್ಲಿವೆ?
ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರು ಜಿಲ್ಲೆಯಲ್ಲಿ ಕೋಟಿ ಸಸಿಗಳನ್ನು ನಾಟುವ ಮೂಲಕ ಗಿನ್ನಿಸ್ ರೆಕಾರ್ಡ್ ಸ್ಥಾಪಿಸಲು ರೋಟರಿ ಸಹಭಾಗಿತ್ವದ ಮೂಲಕ ಯೋಜನೆಯನ್ನು ರೂಪಿಸಿದ್ದಾರೆ, ಆದರೆ ಈ ಕೋಟಿ ಸಸಿಗಳು ಎಲ್ಲಿವೆ ? ಎನ್ನುವುದು ಈಗ ಚರ್ಚೆಗೆ ಗ್ರಾಸವಾಗಿದೆ. 

ಜಿಲ್ಲೆಯಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗಳಲ್ಲಿರುವ ಸಸಿಗಳ ಸಂಖ್ಯೆ ಎಷ್ಟಿವೆ ಎನ್ನುವ ಮಾಹಿತಿಯನ್ನು ಪಡೆಯಲು ಡಿಎಫ್‍ಒ ರಾಮಲಿಂಗೇಗೌಡ ಅವರನ್ನು ಪತ್ರಿಕೆ ಸಂಪರ್ಕಿಸಲಾಯಿತಾದರೂ, ಅವರ ದೂರವಾಣಿ ಆಫ್ ಆಗಿದ್ದು, ರಜೆಯಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಕೋಟಿನಾಟಿಗೆ ಜಿಲ್ಲಾಡಳಿತ ತಯಾರಿ ನಡೆಸಿದೆಯೇ ? ಜಿಲ್ಲೆಯ ನರ್ಸರಿಗಳಲ್ಲಿ ಕೋಟಿ ಸಸಿಗಳನ್ನು ಬೆಳೆಸಲು ಸಾಧ್ಯವಿದೆಯೇ? ಸಾಮಾಜಿಕ ಅರಣ್ಯ ಇಲಾಖೆ ಫಾರಂಗಳಲ್ಲಿ ಅಷ್ಟು ಸಸಿಗಳು ಇವೆಯೇ ? ಅಥವಾ ಬೇರೆ ಜಿಲ್ಲೆಯಿಂದ ಸಸಿಗಳನ್ನು ತಂದು ನಾಟಿ ಮಾಡಲು ಜಿಲ್ಲಾಡಳಿತ ಮುಂದಾಗಿದೆಯೇ? ಎನ್ನುವುದು ಅಧಿಕಾರಿಗಳ ದೃಢೀಕೃತ ಮಾಹಿತಿಯಿಂದಷ್ಟೇ ಗೊತ್ತಾಗಬೇಕಿದೆ.

ಈ ಹಿಂದೆ ಅರಣ್ಯ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಗೆ ನೀಡಿದ್ದ ಮಾಹಿತಿಯಂತೆ ಮೂರು ವರ್ಷಕ್ಕೆ 85 ಲಕ್ಷ ಸಸಿಗಳನ್ನು ಜಿಲ್ಲೆಯ ವಿವಿಧೆಡೆ ನಡೆಲಾಗಿದೆ ಎನ್ನುವ ಮಾಹಿತಿ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು, ಈಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವಿಶ್ವಪರಿಸರ ದಿನವಾದ ಜೂನ್ 5ರಂದು ಒಂದು ಕೋಟಿ ಸಸಿಯನ್ನು ತುಮಕೂರು ಜಿಲ್ಲೆಯಲ್ಲಿ ನೆಡಲು ಯೋಜನೆ ರೂಪಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News