ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಜನನ ಪ್ರಮಾಣ ಕಡಿಮೆ: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

Update: 2019-05-14 17:24 GMT

ಚಿಕ್ಕಮಗಳೂರು, ಮೇ 14: ಪುರುಷ ಮಹಿಳೆಯರ ಅನುಪಾತದಲ್ಲಿ ಮಹಿಳೆಯರ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಆತಂಕಕಾರಿ ಬೆಳೆವಣಿಗೆಯಾಗಿದೆ. ಲಿಂಗ ತಾರತಮ್ಯವನ್ನು ತಡೆದು ಸಮಾನತೆಯನ್ನು ತರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪಿ.ಡಿ ಮತ್ತು ಪಿ.ಡಿ.ಎನ್.ಟಿ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 53 ಸ್ಕ್ಯಾನಿಂಗ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಕಾರ್ಯವೈಖರಿಗಳ ಬಗ್ಗೆ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿಗಳು ನಿಗಾವಹಿಸಬೇಕು. ಕಾನೂನಿನ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಲ್ಲಿ ಅವುಗಳ ವಿರುದ್ಧ ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸಲಹೆ ನೀಡಿದರು.

ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನಿನ ವಿರೋಧ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 12,382 ಮಕ್ಕಳು ಜನಿಸಿದ್ದು, ಅವುಗಳಲ್ಲಿ 6,337 ಗಂಡು, 6045 ಹೆಣ್ಣು ಮಕ್ಕಳು ಜನಿಸಿವೆ. ಲಿಂಗಾನುಪಾತ 954 ಇದೆ. ಚಿಕ್ಕಮಗಳೂರು, ಕೊಪ್ಪ, ತರೀಕೆರೆ ತಾಲೂಕಿನಲ್ಲಿ ಕ್ರಮವಾಗಿ ಲಿಂಗಾನುಪಾತ 923, 913 ಹಾಗೂ 911 ಇದ್ದು, ಅನುಪಾತದಲ್ಲಿ ಹೆಣ್ಣುಮಕ್ಕಳ ಪ್ರಮಾಣ ಕಡಿಮೆ ಇರುವುದು ಕಂಡು ಬಂದಿದೆ ಎಂದರು.

ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಅನಿರೀಕ್ಷಿತ ಭೇಟಿ ನೀಡಿ: ತಾಲೂಕುಗಳಲ್ಲಿ ಲಿಂಗಾನುಪಾತ ಕಡಿಮೆ ಇರುವುದಕ್ಕೆ ಕಾರಣ ಕಾನೂನಿನ ಅನುಷ್ಠಾನದ ಕೊರತೆಯಿಂದಾಗಿರುತ್ತದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಮಹಿಳೆಯುಗರ್ಭಾವಸ್ಥೆಯ ನೋಂದಣಿಯಿಂದ ಕೊನೆಯವರೆಗೆ ಅನುಸರಣೆಯನ್ನು ಮಾಡುವುದರೊಂದಿಗೆ ಆಗುವ ಲೋಪದೋಷಗಳನ್ನು ಕಂಡುಕೊಂಡಾಗ ಮಾತ್ರ ಅನುಪಾತವನ್ನು ತಡೆಯಲು ಸಾಧ್ಯವಾಗುತ್ತದೆ ಎಂದ ಅವರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪಿ.ಸಿ ಹಾಗೂ ಪಿ.ಡಿ.ಎನ್.ಟಿ ಸಮಿತಿಗಳು ಆಗಿದಾಂಗೆ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಬೇಕೆಂದು ಸೂಚನೆ ನೀಡಿದರು.

ನೋಂದಾಯಿಸದ ಕ್ಲಿನಿಕ್‍ಗಳ ಮುಚ್ಚಲು ಸೂಚನೆ: ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಣಿ ಮಾಡಿದವರು ಮಾತ್ರ ಕ್ಲಿನಿಕ್‍ಗಳನ್ನು ತೆರೆದು ವೈದ್ಯ ವೃತ್ತಿಯನ್ನು ಮಾಡಲು ಅವಕಾಶ ಮಾಡಿಕೊಡಬೇಕು. ನೋಂದಣಿಗೆ ಕೇವಲ ಅರ್ಜಿ ಸಲ್ಲಿಸಿ ಅಗತ್ಯ ದಾಖಲಾತಿಗಳನ್ನು ನೀಡದಿರುವವರ ಕ್ಲಿನಿಕ್‍ಗಳನ್ನು ಮುಚ್ಚಿಸಬೇಕು. ಕೆಲವರು ನಕಲಿ ವೈದ್ಯಕೀಯ ವೃತ್ತಿಗಳನ್ನು ನಿರ್ವಹಿಸುತ್ತಿರುವ ಬಗ್ಗೆ ದೂರುಗಳಿದ್ದು, ಅಂತವರ ಮೇಲೆ ಎಫ್.ಐ.ಆರ್ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಇದೇ ವೇಳೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಅಶ್ವತ್ ಬಾಬು, ಜಿಲ್ಲಾ ಮಟ್ಟದ ಪಿ.ಸಿ ಮತ್ತು ಪಿ.ಡಿ.ಎನ್.ಟಿ ಸಲಹಾ ಸಮಿತಿಯ ಡಾ.ರಾಮಕೃಷ್ಣ, ಡಾ.ರವಿಶಂಕರ್, ನೇತ್ರಾ ವೆಂಕಟೇಶ್, ಶಶಿಪ್ರಸಾದ್,ರೀನಾ ಸುಜೇಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 9ಕ್ಕೂ ಹೆಚ್ಚು ನಕಲಿ ವೈದ್ಯರು ವೈದ್ಯಕೀಯ ವೃತ್ತಿಗಳಲ್ಲಿ ತೊಡಗಿರುವ ಬಗ್ಗೆ ದೂರು ಕೇಳಿ ಬರುತ್ತಿದೆ. ಅಂತವರ ಮೇಲೆ ನಿರ್ಧಾಕ್ಷಣ್ಯವಾಗಿ ಕಾನೂನಿನ ಕ್ರಮಗಳನ್ನು ಕೈಗೊಳ್ಳಬೇಕು. ಕೇವಲ ಅವುಗಳನ್ನು ಮುಚ್ಚಿಸುವುದರಿಂದ ಯಾವುದೇ ಉಪಯೋಗವಾಗುವುದಿಲ್ಲ. ಕಾನೂನು ಕ್ರಮವೂ ಜರಗಬೇಕು. ವಂಶಪಾರಂಪರಿಕವಾಗಿ ಯಾವುದೇ ಅರ್ಹ ವಿದ್ಯಾರ್ಹತೆ ಇಲ್ಲದೆ ವೈದ್ಯಕೀಯ ವೃತ್ತಿ ಮಾಡುವುದು ಕಾನೂನಿನಡಿಯಲ್ಲಿ ಅಪರಾಧವಾಗಿದೆ. ಇದರಿಂದ ಸಾರ್ವಜನಿಕರ ಆರೋಗ್ಯದಲ್ಲಿ ಹಾನಿ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಆಯುರ್ವೇದಿಕ್ ಪಂಡಿತರು ಎಂದು ಹೇಳಿ ಆಲೋಪತಿ ಔಷೋಧೊಪಚಾರ ನೀಡುವುದು ಕಂಡು ಬಂದಲ್ಲಿ ಅವರ ಮೇಲೂ ನಿರ್ಧಾಕ್ಷಣ್ಯ ಕ್ರಮಕೈಗೊಳ್ಳಬೇಕು.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News